ಶನಿವಾರ, ಜೂನ್ 25, 2011

ನಿಗುರಿ ನಿಂತವರು

ನಾವು ನಿಮಗೆ ಸೋತು ಬಿದ್ದಿದ್ದೀವಿ
ಇಂಚಿಂಚು  ಮೈ ಇರಿಯುತ್ತೆ  ಉರಿಯುತ್ತೆ
ಆದ್ರೂ ನಮ್ಮನ್ನ ಶರಣಾಗತ ಮಾಡಿದ್ದೀರಿ
ನಮ್ಮನ್ನ ಜೀತಕ್ಕಿಟ್ಟು ಜೀವ ತೆಗಿತಿರಿ
                            ಅವಶೇಷ ಮಾಡ್ತೀರಿ

ನಮ್ಮ ರಕ್ತ ಇನ್ನೂ ರಕ್ತಿ ಆಗಿಲ್ಲ
ನಮ್ಮೆದೆ ಊದ್ಕೊಂಡು ಬೂದಿ ಆಗಿಲ್ಲ
ನಮ್ಮ ಮಖಾ ಮಣ್ಣಗಾಕಿ ತುಳಿತಿರಿ
ನಿಗುರಿ  ನಿಲ್ಲೊ ಮನಸ್ಸನ್ನ ತುಳಿಲಾರ್ರಿ
                          ತುಳ್ದು ಸಾಯ್ಸಲಾರ್ರಿ

ಯಾವತ್ತೂ ನಾವು ಕೈ ಹಾಕಿದ್ರೆ ಅಪಹಾಸ್ಯ ಮಾಡಿ
ಮೇರೆ ಮೀರಿ ಬೆಳೆಯೊ ಕೋಟೆ ಗೋಡೆ ನೀವು
ಯಾವತ್ತೂ ನಿಮ್ಮ ವಿರುದ್ಧ ರೋಷ ಇದ್ದೇ ಇದೆ
ಕೈಕಾಲು ಮುರ್ದು ಮೋರಿಗೆ ತಳ್ಳೊ ಹಕ್ಕಿದೆ
                         ನಿಮಗೇನಿದೆ? ನಿಮಗೆ?

ಏನಿದೆ ಅಂದ್ರೆ ಹೇನಿದೆ,ತೂಗು ಮಂಚ ಇದೆ
ಪೊಗದಸ್ತಾಗಿ ತಿರುಗಾಡೊ ಊಟ ಗೂಟ ಇದೆ
ಹಳಸಲು ತೇಗು ತೇಗಿಕೊಂಡು ಮಜಾ ಮಾಡ್ತೀರಿ
ಗನ್ನು ಲೋಡು ಮಾಡೋ ಜನ  ಇಟ್ಕೊಂಡಿದ್ದೀರಿ
                               ಆ ಜನ  ನಾವಿದ್ದೀವಿ

ನಿಮ್ಮ ಇತಿ ಹಾಸ್ಯ ಮಾಡೋಕೆ
ದುಡುಮಿ ಹಾಸಿಗೆ ಮಂಚಕ್ಕೆ ಕಿಡಿ ಹಾರ್ಸೋಕೆ
ಸಿಕ್ಕಿದ ಕುರ್ಚಿ ಎಳ್ಕೊಂಡು ಕೂರೋ
ನಿಮ್ಮದೇ ಜನ ನಾವು, ನಾವಿದ್ದೀವಿ
ನಮ್ಮ ಮುರೀಲಾಗದ ಮನಸ್ಸು ಇನ್ನೂ ಇದೆ
#

ಇಲ್ಲಿ ಅಸಹಾಯಕತೆ  ಇದೆ, ಹತಾಶೆಯಿದೆ, ಶೋಷಿತ ಭಾವನೆಯಿದೆ, ಸಿಟ್ಟು-ಸೆಡವು ಇದೆ. ವ್ಯವಸ್ಥೆಯ ವಿರುದ್ಧ ಮಡುಗಟ್ಟಿದ ಅವೆಲ್ಲವೂ ಮುಖ್ಯವಾಗಿ ಇಲ್ಲಿ ಸಿಟ್ಟಿನ ಅಭಿವ್ಯಕ್ತಿಯೆ.
ರನ್ನನ ಗದಾಯುದ್ಧದಲ್ಲಿನ `ಕೋಪಾರುಣನೇತ್ರಂ..ನೀರೊಳಗಿರ್ದುಂ ಬೆಮರ್ತನುರುಗಪತಾಕಂ'  ಎಂಬ ಈ ಸಾಲು ಸಿಟ್ಟಿನ ಅಭಿವ್ಯಕ್ತಿಗೆ ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧವಾದುದು.ಇಲ್ಲಿ ದುರ್ಯೋಧನನ ಗುಟ್ಟು  ಬಯಲಾಗಿದೆ. ಅವನು ಸಾವಿನ ಯುದ್ಧದ ಹಿಡಿತದಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿದೆ. ಪಾಂಡವರ ವಿರುದ್ಧದ ಸಂಪೂರ್ಣ ಸೋಲು ಸನಿಹದಲ್ಲಿದೆ. ದುರ್ಯೋಧನನ ಅಸಹಾಯ ಸ್ಥಿತಿ ಹೇಡಿತನವೆಂದು ವಿರೋಧಿಗಳ ಕಣ್ಣಲ್ಲಿ ಕಾಣಲಿದೆ. ಅಷ್ಟೇಅಲ್ಲ  ಇದರಿಂದ ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆಯನ್ನೂ ತೆರೆದಿಟ್ಟಿದೆ.ಒಂದು ಕಡೆ ಇಡೀ ರಾಜ್ಯ ಕೋಶ ಸೈನ್ಯ ಬಂಧು ಬಳಗ ಎಲ್ಲವೂ ನಾಶವಾಗಿದ್ದು ತನ್ನ ಯುದ್ಧದ ನಿರ್ಣಯವನ್ನು ಅಣಕಿಸುತ್ತದೆ. ನಗೆಯ ಗೆಲುವು ತನ್ನದಾಗುವ ಬದಲು ತನ್ನ ಶತ್ರುಗಳ ವಶವಾಗಲಿದೆ. ಎಲ್ಲವನ್ನು ಕಳೆದುಕೊಂಡ ಭೀಕರ ಹತಾಶೆಯೇ ಸಿಟ್ಟಿನ ರೂಪ ಪಡೆದಿದೆ. ಇಂಗ್ಲಿಶರು ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಕಳೆದುಕೊಂಡ ನಂತರ  ಒಳಗಾದ ಅಸಹನೀಯವಾದ ಮನಸ್ಥಿತಿಯ ವ್ಯಗ್ರತೆಯನ್ನು 'ಲುಕ್ ಬ್ಯಾಕ್ ಇನ್ ಆಂಗರ್' ನಾಟಕ ಕಟ್ಟಿಕೊಡುವಂತೆ ಈ ಸಾಲಿದೆ. ದುರ್ಯೋಧನನ ಈ ಮನಸ್ಥಿತಿಯನ್ನು ಬಣ್ಣಿಸಲು ರನ್ನ ಅನುಸರಿಸಿದ ಅಲಂಕಾರಿಕ ವಿಧಾನದ ಬಗ್ಗೆ ಇದುವರೆಗೂ ಚರ್ಚೆ ನಡೆದಂತೆ ಕಂಡಿಲ್ಲ. ತಣ್ಣನೆಯ ನೀರೊಳಗಿದ್ದೂ ಬೆವರುವಷ್ಟು ಕೋಪ ಬಂದಿತ್ತೆಂಬ ವರ್ಣನೆ ಕೋಪದ ಅಗಾಧತೆಯನ್ನು ಮನವರಿಕೆ ಮಾಡಿಕೊಟ್ಟರೂ ಅದು ಉತ್ಪ್ರೇಕ್ಷೆಯಿಂದ ಕೂಡಿದೆಯಲ್ಲವೆ?
ಎಡಪಂಥೀಯ ಸೆಕ್ಯುಲರ್ ಆಶಯದ `ಇಕ್ಕರ್ಲಾ ಒದಿರ್ಲಾ'ದಂಥ ಕವಿತೆಗಳು ಡಿ ಆರ್ ನಾಗರಾಜ ಅವರಿಗೆ ಉತ್ಪ್ರೇಕ್ಷೆಯಾಗಿ ಕಂಡಿದೆ. ಹಾಗಾಗಿಯೆ ಅವರು ದಲಿತ ಕವಿ ಸಿದ್ಧಲಿಂಗಯ್ಯನವರನ್ನು `ಉತ್ಪ್ರೇಕ್ಷಾಲಂಕಾರ ಚಕ್ರವರ್ತಿ!' ಎಂದು ಘೋಷಿಸಿದ್ದಾರೆ. ಆದರೆ ಜಡ್ಡುಗಟ್ಟಿದ ಶ್ರೇಣೀಕೃತ ಸಮಾಜ ವ್ಯವಸ್ಥೆಯ ವಿರುದ್ಧ ಎತ್ತಿದ ಆಕ್ರೋಶ ಸ್ವಭಾವೋಕ್ತಿಯಾಗಿರಬೇಕಿತ್ತಲ್ಲ, ಉತ್ಪ್ರೇಕ್ಷೆ ಏಕಾಯಿತು? ಹೇಗಾಯಿತು? ಸಿದ್ಧಲಿಂಗಯ್ಯ ತಮ್ಮ ಕವಿತೆಗಳ ಮೂಲಕ ಹಂಚಿಕೊಂಡಿರುವ ಅನುಭವ ಅವಾಸ್ತವವೆ? ಅಥವಾ ದಲಿತ ಕವಿ ದಲಿತರ ದನಿಯಾಗಿ ಉಳಿಯದೆ ಇರಲು ಕಾರಣವೆ? ನನಗೆ ಸ್ವಲ್ಪ ಗೊಂದಲ.
ಹಾಗಾಗಿ ಈಗ ನಿಮ್ಮ ಮುಂದಿಟ್ಟಿರುವ ಕವಿತೆಯ ಸ್ವರೂಪವೇನು? ಸ್ವಭಾವೋಕ್ತಿಯೇ? ಉತ್ಪ್ರೇಕ್ಷೆಯೆ? ಯಾವುದು?

ಶನಿವಾರ, ಜೂನ್ 11, 2011

ಸೃಜನವೇದಿಯಲ್ಲಿ ಕಾವ್ಯ ಕುರಿತ ನನ್ನ ಟಿಪ್ಪಣಿ

ಪಾಶ್ಚಾತ್ಯ ದೇಶವೊಂದರಲ್ಲಿ ಇಂಗ್ಲಿಶ್ ಸಾಹಿತ್ಯವನ್ನು ಹೇಳಿಕೊಡುತ್ತಿದ್ದ ಹೇಮಂತ ಕುಲಕರ್ಣಿಯವರು ತಮ್ಮ ಪ್ರಾಧ್ಯಾಪಕ ಹುದ್ದೆಯಲ್ಲಿ ನಿವೃತ್ತರಾದ ನಂತರ1984ರ ಆಜೂಬಾಜೂ ಭಾರತಕ್ಕೆ ಹಿಂದಿರುಗಿದ್ದಿರಬೇಕು. ಆ ನಂತರ ಮುಂಬೈನಿಂದ ಅವರು ಕಾವ್ಯಕ್ಕೆ ಮೀಸಲಾದ ಸಾಹಿತ್ಯ ಪತ್ರಿಕೆಯನ್ನು `ಸೃಜನವೇದಿ' ಎಂಬ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸತೊಡಗಿದರು. ಅದರಲ್ಲಿ ಮುಖ್ಯವಾಗಿ ಹೇಮಂತ ಕುಲಕರ್ಣಿಯವರು ಇಂಗ್ಲಿಶ್ ಸಾಹಿತ್ಯದಲ್ಲಿ ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ ನಡೆದ ವಿವಿಧ ಸಾಹಿತ್ಯ(ಕಾವ್ಯಕ್ಷೇತ್ರದಲ್ಲಾದ) ಚಳವಳಿಗಳ ಸಾಂಸ್ಕೃತಿಕ ಪರಿಸರ, ಆಶಯ, ಗುಣ ಸ್ವರೂಪ, ಮತ್ತು ಸಾಧನೆಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ಇಂಗ್ಲಿಶ್ ಹಿನ್ನೆಲೆ ಇಲ್ಲದ ಕನ್ನಡ ಆಸಕ್ತ ಓದುಗರಿಗೆ ಇವು ಉಪಯುಕ್ತ ಮಾಹಿತಿ ಒದಗಿಸಿವೆ. 1986ರ ಸಂಚಿಕೆಯೊಂದರಲ್ಲಿ ಅವರು ಇತರ ಚಳವಳಿಗಳೊಂದಿಗೆ `ದ್ಯಾದಾಯಿಜಮಂ' ಕುರಿತು ವಿವರ ನೀಡಿದ್ದರು. ಅದಕ್ಕೆ ನಾನು ಕೂಡಲೇ ಪ್ರತಿಕ್ರಿಯಿಸಿ ಟಿಪ್ಪಣಿ ಸಿದ್ಧ ಪಡಿಸಿ ಸಂಪಾದಕರಿಗೆ ರವಾನಿಸಿದ್ದೆ. ಅದು ಸೃಜನವೇದಿಯ 1986ರ ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾಗಿ ನನಗೆ ಅಚ್ಚರಿಯನ್ನೂ ಉಂಟುಮಾಡಿತ್ತು. ಕಾವ್ಯ ಕುರಿತ ಅಂದಿನ ನನ್ನ ಚಿಂತನಾ ಲಹರಿಯನ್ನು ಅದು ದಾಖಲಿಸಿದ್ದು, ಅದನ್ನು ಯಥಾವತ್ತಾಗಿ ನಿಮ್ಮ ಮುಂದೆ ಇರಿಸುತ್ತಿದ್ದೇನೆ. 
#
"ಶ್ರೀಧರ ಪಿಸ್ಸೆ
ಕಾವ್ಯ ಮತ್ತು ಕತ್ತಿ- ಒಂದು ಅಭಿಪ್ರಾಯ
ಮಾನ್ಯರೇ,
`ನವ್ಯತೆಯಲ್ಲಿ ಪೂರ್ವ-ಪಶ್ಚಿಮ ಸಮನ್ವಯ' ಎಂಬ ತಮ್ಮ ಲೇಖನದಲ್ಲಿ ದ್ಯಾದಾಯಿಸಮ್ ನ ಕಾವ್ಯ ಧೋರಣೆಯನ್ನು ಕುರಿತು "ಕಾವ್ಯವೆಂದರೆ ತೀಕ್ಷ್ಣವಾದ ಚೂರಿ, ಪಿಸ್ತೂಲು, ಒಂದು ಬಾಂಬು.' ಎಲ್ಲವನ್ನೂ ಉಧ್ವಸ್ತಗೊಳಿಸಲು ಹೊರಟ ಶಕ್ತಿ. ಅದರಂತೆಯೆ ಸಮಾಜವು ಕವಿಯನ್ನು ಕಟ್ಟಿ ಹಾಕಿದ ಸೆರೆಮನೆ. ಈ ಸೆರೆಮನೆಯ ಗೋಡೆಗಳನ್ನೆಲ್ಲ ಕೆಡವಬೇಕಾದರೆ ಕಾವ್ಯದ ಬಾಂಬು ಸ್ಫೋಟವಾಗಬೇಕು. ಆಗ ಮಾತ್ರ ಕವಿಗೆ ಬಿಡುಗಡೆಯಾಗುತ್ತದೆ" ಎಂದು ವಿವರಿಸಿದ್ದೀರಿ.


ನಿಮ್ಮ ವಿವರಣೆ ನನಗೆ ಸಮ್ಮತವೆನಿಸಲಿಲ್ಲ. ಕಾರಣ ಯಾವ ಕಲಾಕೃತಿಯ ಮೂಲಭೂತ ಉದ್ದೇಶವೂ ಧ್ವಂಸಗೊಳಿಸುವಂಥದ್ದಲ್ಲ, ನಾಶಗೊಳಿಸುವಂಥದ್ದಲ್ಲ. ಆದರೂ ಅದು `ಒಂದು ತೀಕ್ಷ್ಣವಾದ ಚೂರಿ, ಒಂದು ಪಿಸ್ತೂಲು, ಒಂದು ಬಾಂಬು' ಆಗಿರುತ್ತದೆ ಮತ್ತು ಆಗಿರಲೇಬೇಕಾಗುತ್ತದೆ.  ಮಾನವತೆ ಮತ್ತು ಮಾನವತೆಯ ಉನ್ನತಿಗಾಗಿ ನಡೆಯುವ ನಿರಂತರ ಹೋರಾಟದಲ್ಲಿ ಒಬ್ಬ ಶ್ರೇಷ್ಟ ಕಲಾವಿದ ಅಸಾಮಾನ್ಯ, ಅಗ್ರಗಣ್ಯ ಮಾನವೀಯ ಹೋರಾಟಗಾರನಾಗಿರುತ್ತಾನೆ. ಅಸಾಮಾನ್ಯ ಹೋರಾಟತನ ಮತ್ತು ಅಭವ್ಯಕ್ತಿಯ ತೀವ್ರ ತುಡಿತ ಒಂದಕ್ಕೊಂದು ಗಂಟು ಬಿದ್ದಿರುವುದರಿಂದ ಆತನ ಮಾನವೀಯ ಪರವಾದ ಪ್ರಾಮಾಣಿಕ ಹೋರಾಟವಂತಿಕೆ ಸತತವಾಗಿ ಪರೀಕ್ಷೆಗೆ ಒಳಗಾಗುತ್ತಿರುತ್ತದೆ. ಮತ್ತು ಇದು ಸಹಜ, ಅನಿವಾರ್ಯ ಕೂಡ ಆಗಿರುತ್ತದೆ. ಯಾರು ಹೋರಾಟವಂತಿಕೆಯನ್ನು ಅಪ್ರತಿಮವಾಗಿ ಜೀವಂತ ಉಳಿಸಿಕೊಳ್ಳಲಾರರೋ ಅವರ ಕೃತಿಗಳೂ ಕಲಾವಂತಿಕೆಯಿಂದ ದೂರ ಸಾಗುತ್ತವೆ. ಪ್ರತಿಯೊಬ್ಬ ಶ್ರೇಷ್ಟ ಕಲಾವಿದನಿಗೂ ತನ್ನ ಕಲಾ ಮಾಧ್ಯಮವೇ `ಒಂದು ತೀಕ್ಷ್ಣವಾದ ಚೂರಿ ಒಂದು ಪಿಸ್ತೂಲು, ಒಂದು ಬಾಂಬು' ಅಂದರೆ ಆಯುಧ, ಅಂತಿಮವಾದ ಆಯುಧ. ತನ್ನ ಸುತ್ತಲ ತನ್ನ ಜನರಲ್ಲೆ ಮನೆ ಮಾಡಿರುವ ಮಾನವೀಯ ಗುಣ, ಪ್ರವೃತ್ತಿ, ತುಡಿತ, ಮಿಡಿತಗಳನ್ನು ನೆಲೆಯೂರಿಸಲು ಆ ಕಲಾವಿದ  ಸತತವಾಗಿ ತನ್ನ ಆಯುಧವನ್ನು ಹರಿತವನ್ನಾಗಿ, ಹೊಳಪನ್ನಾಗಿ, ಕಾಂತಿಯುಕ್ತವಾಗಿ ಮಾಡಬೇಕು ಮತ್ತು ಮಾಡುತ್ತಿರುತ್ತಾನೆ. ಯಾವ ಕಲಾವಿದ ತನ್ನ ಆಯುಧವನ್ನು
ಎಷ್ಟರಮಟ್ಟಿಗೆ ಹರಿತವನ್ನಾಗಿ ಹೊಳಪನ್ನಾಗಿ ಕಾಂತಿಯುಕ್ತವಾಗಿ ಮಾಡಿ ಎಷ್ಟರಮಟ್ಟಿಗೆ ಶಕ್ತಿಯುತವಾಗಿ ಸಮರ್ಥವಾಗಿ ಪ್ರಭಾವಯುತವಾಗಿ ಪರಿಣಾಮ ಬೀರುವುದರಲ್ಲಿ ಯಶ ಸಾಧಿಸುತ್ತಾನೋ ಅಷ್ಟರಮಟ್ಟಿಗೆ ಕಲಾಂತಿಕೆಯಲ್ಲಿ ಶ್ರೇಷ್ಟತೆಯನ್ನು ಪಡೆದಿರಲು ಸಮರ್ಥನಾಗಿರುತ್ತಾನೆ.


ಯಾವುದೇ ಕಲಾ ಪ್ರಕಾರದ ಅಭಿವ್ಯಕ್ತಿಯ ಮೂಲಭೂತ ತುಡಿತವೇ ಪ್ರತಿಭಟನೆಯ ಪ್ರವೃತ್ತಿಯುಳ್ಳದ್ದು, ಅಂದರೆ ಆವಿಷ್ಕಾರಗೊಂಡ ಸತ್ಯದ ಹೊಸ ರೂಪಗಳನ್ನು ಹೇಳುವಂಥದ್ದು, ಇಲ್ಲವೆ  ಬದಲಾದ ಯುಗಧರ್ಮಕ್ಕನುಗುಣವಾದ ಹೊಸ ಅನುಭವದ ಹಿನ್ನೆಲೆಯಲ್ಲಿ ಸತ್ಯದ ಹೊಸ ಮುಖಗಳನ್ನು ಎತ್ತಿ ಹಿಡಿಯುವಂಥದ್ದು. ಇಲ್ಲಿ ಪ್ರತಿಭಟನೆ ಧ್ವಂಸಗೊಳಿಸುವ ರೂಪ ಪಡೆದದ್ದಲ್ಲ, ಮಾನವತೆಯ ರಕ್ಷಣೆಯ ತಂತ್ರವನ್ನು ಹೊಂದಿರುವಂಥದ್ದು. ಕೆಲವು ಸಾರಿ ಮಾನವತೆಯ ಸಕಾರಾತ್ಮಕ ಮುಖಗಳನ್ನು ನಿಲುವುಗಳನ್ನು ಪ್ರತಿಪಾದಕಾತ್ಮಕವಾಗಿ ಅಭಿವ್ಯಕ್ತಿಸುವಾಗ ಕಲಾ ಮಾಧ್ಯಮ ಖಡ್ಗವಾಗದಿರಬಹುದು, ಆದರೆ ಅದರ ಹೊಳಪು, ಝಳಪು, ಕಾಂತಿ, ಚೈತನ್ಯದ ಜೀವಂತಿಕೆಯನ್ನು ಮೈ ಪಡೆದು ಬೆಳಗದೆ ಇರದು.


ಕಾವ್ಯ- ಅದು ಯಾವ ಮಾರ್ಗದ ಕಾವ್ಯವೇ ಆಗಿರಲಿ ತನ್ನ ಮೂಲಭೂತ ಸತ್ಯಗಳಲ್ಲಿ ಒಂದಾದ ಮಾನವೀಯ ಪರವಾದ ಧೋರಣೆಯನ್ನು ಪಡೆದಿರುತ್ತದೆ. ಆದ್ದರಿಂದ ಹೋರಾಟವಂತಿಕೆಯ ಗುಣ ದ್ಯಾದಾಯಿಸಂ ಕಾವ್ಯದ ಧೋರಣೆಯಾಗಿರುವಂತೆ ಮಾರ್ಗಾಮಾರ್ಗಗಳ ಯಾವ ಭೇದವೂ ಇಲ್ಲದೆ ಅಥವಾ ಅದನ್ನು ಮೀರಿ ಎಲ್ಲ ನಿಜ ಕಾವ್ಯದ ಧೋರಣೆಯೂ ಕೂಡ ಹೌದು ಅಲ್ಲವೆ?


ಟಿಪ್ಪಣಿ-ಸಂಪಾದಕರಿಂದ
ನನ್ನ ಹಿಂದಿನ ಸಂಚಿಕೆಯಲ್ಲಿ ಬಂದ ಲೇಖನದಲ್ಲಿ "ದ್ಯಾದಾಯಿಜಮ್" ಆಂದೋಲನದ ವಿಚಾರಗಳನ್ನಷ್ಟೇ ವಿವರಿಸಲಾಗಿದೆ. ಕೊಲ್ಲದ ಹೊರತು ಕಟ್ಟುವುದು ಸಾಧ್ಯವಿಲ್ಲ, ಕಟ್ಟುವುದು ಮುಖ್ಯ ಆದರ್ಶ. ಅದಕ್ಕಾಗಿ ಕೊಳೆತ, ದುಷ್ಟ ಶಕ್ತಿಗಳನ್ನೆಲ್ಲ ಕೊಲ್ಲುವುದು ಅವಶ್ಯಕ.              
                                         - ಹೇಮಂತ"
#
ಹೇಮಂತ ಕುಲಕರ್ಣಿ ತಮ್ಮ ಪತ್ರಿಕೆಯಲ್ಲಿ ದ್ಯಾದಾಯಿಜಮ್ ಕುರಿತು ಬರೆಯುವ ಹೊತ್ತಿಗೆ ಕನ್ನಡದಲ್ಲಿ ದಲಿತ-ಬಂಡಾಯ ಚಳವಳಿ ತುತ್ತತುದಿ ತಲುಪಿಯಾಗಿತ್ತು. ಎಡಪಂಥೀಯ ಚಿಂತನೆಯನ್ನು ಅಪ್ಪಿಕೊಂಡಿದ್ದ ಪರಿಣಾಮವಾಗಿ `ಖಡ್ಗವಾಗಲಿ ಕಾವ್ಯ' ಬಂಡಾಯದ ಘೋಷವಾಕ್ಯವೂ ಆಗಿತ್ತು. ಬಲಪಂಥೀಯ ಚಿಂತನಾ ಕ್ರಮಗಳು ಬಹು ಸಮುದಾಯಗಳ ಸಮಾಜದಲ್ಲಿ ಪರಂಪರಾಗತವಾಗಿ ಮೇಲುಗೈ ಪಡೆದು ಯಜಮಾನ ಸಂಸ್ಕೃತಿಯಾಗಿತ್ತು. ಬೇರುಬಿಟ್ಟಿದ್ದ ಬಲಪಂಥೀಯ ಚಿಂತನಾ ಕ್ರಮಗಳನ್ನು ಪ್ರಶ್ನೆ ಮಾಡಲು ದಲಿತ-ಬಂಡಾಯ ಚಳವಳಿಗೆ ಎಡಪಂಥೀಯ ಚಿಂತನಾಕ್ರಮಗಳು ಬಲ ನೀಡಿದ್ದವು. ಬಲಪಂಥೀಯ ಚಿಂತನಾ ಕ್ರಮಗಳು ಈ ನೆಲದಲ್ಲಿ ಚರಿತ್ರೆಯ ಭಾಗವಾಗಿ ಬೆಳೆದು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗಿ ಸಾಮಾಜಿಕ ರೂಢಿ-ಆಚರಣೆಗಳಾಗಿ ಭದ್ರವಾಗಿ ಈ ನಾಡಿನ ಜೀವನದ ಭಾಗವಾಗಿತ್ತು. ಅದನ್ನು ಪ್ರತಿರೋಧಿಸುವ ಅಂಶವನ್ನು ಕಲಿಸಿಕೊಟ್ಟ ಎಡಪಂಥೀಯ ಚಿಂತನೆಗಳು ಯೂರೋಪಿನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಮೈಪಡೆದುದಾಗಿತ್ತು.   ಬಂಡವಾಳಶಾಹಿ ಮತ್ತು ಕೂಲಿಕಾರ್ಮಿಕ ವರ್ಗಗಳು ಹುಟ್ಟಿಕೊಂಡ ಪಾಶ್ಚಿಮಾತ್ಯ ಸಮಾಜದಲ್ಲಿನ ಒಂದೇ ಭಾಷೆ, ಒಂದೇ ಸಮುದಾಯ, ಒಂದೇ ಜನಾಂಗ, ಒಂದೇ ರಾಷ್ಟ್ರ ಕಲ್ಪನೆಯಡಿ ಆರ್ಥಿಕ ಅಸಮಾನತೆಯನ್ನು ನಿವಾರಿಸುವ ಸಮಾಜವಾದದ  ಭಾಗವಾಗಿ ಎಡಪಂಥ ಕಲ್ಪನೆ ಇತ್ತು. ಆದರೆ ಭಾರತದ ಬಲಪಂಥೀಯ ಚಿಂತನಾಕ್ರಮ ಇಲ್ಲಿನ ವಿಶಾಲ ಭೂ ಪ್ರದೇಶದಲ್ಲಿ ಮೂಲನೆಲೆ ಹೊಂದಿರುವ ಬಹುಸಮುದಾಯಗಳ ಮೇಲೆ ನಿಯಂತ್ರಣ ಸಾಧಿಸುವ  ಯಜಮಾನ ಸಂಸ್ಕೃತಿಯ ರಾಜಕಾರಣದ ಭಾಗವಾಗಿದೆ. ಆದರೂ ಇದೇ ಕಾರಣಕ್ಕಾಗಿ ಈ ಬಹುಸಮುದಾಯಗಳು ಯೂರೋಪಿನ ಸಮಾಜದ ಹಾಗೆ ಎರಡು ಭಾಗಗಳಾಗಿ ಸರಳವಾಗಿ ಒಡೆದುಹೋಗಿಲ್ಲ. ಅದರ ಬದಲು ಶ್ರೇಷ್ಟ-ಕನಿಷ್ಟ ಕಲ್ಪನೆ ಆಧಾರದ ಮೇಲೆ  ಇಡೀ ಸಮಾಜ ಬಹುಶ್ರೇಣಿಕೃತ ಸಮಾಜವಾಗಿದೆ. ಅತಿ ಮೇಲಿರುವ ಸಮುದಾಯ ಮತ್ತು ಅತಿ ತಳಮಟ್ಟದಲ್ಲಿರುವ ಸಮುದಾಯಗಳ ನಡುವೆ ಮೇಲು-ಕೀಳು ಮೌಲ್ಯ ಒಪ್ಪಿತ ಹಲವು ಸಾಮಾಜಿಕ ಶ್ರೇಣಿಕರಣ ಈಗಲೂ ಇದೆ. ಈ ಸಮುದಾಯಗಳು ಭಾರತೀಯ ಸಮಾಜದ ಎಲ್ಲ ಕಾಲದಲ್ಲೂ ವಾಸ್ತವವೆ ಆಗಿದ್ದು ಮಧ್ಯಮ ನಿಲುವು ತಳೆದಿವೆ. ಇವು ಅತಿಯಾದ ಬಲಪಂಥ ಮತ್ತು ಅತಿಯಾದ ಎಡಪಂಥ ಒಪ್ಪದ ಮಧ್ಯಮ ವಾದ ಬಿಂಬಿಸುವ ಸಮುದಾಯಗಳಿವೆ. 
ಭಾರತದ ಬಲಪಂಥೀಯ ಮತ್ತು ಪಾಶ್ಚಾತ್ಯ ಎಡಪಂಥೀಯ ಚಿಂತನಾ ಕ್ರಮಗಳ ಹುಟ್ಟು ಮತ್ತು ಬೆಳವಣಿಗೆಗಳಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂಬಲ್ಲಿ ಯಾವ ಅನುಮಾನವೂ ಇಲ್ಲ. ಯೂರೋಪಿನ ಎಡಪಂಥ ಆಯಾ ಸಮಾಜದ ಅಗತ್ಯವಾಗಿದ್ದು ಭಾರತದ ಅತಿ ತಳಮಟ್ಟದ ಆರ್ಥಿಕ ದುಸ್ಥಿತಿಗೆ ಅರೆ ಸಾಮ್ಯತೆ ಹೊಂದಿದೆ ಎನ್ನಬಹುದು. ಹಾಗೆಯೆ ಅಲ್ಲಿನ ಸಮಾಜವಾದ ಮತ್ತು ಸಮಾನತೆಯ ಕಲ್ಪನೆ ಏಕ ರಾಷ್ಟ್ರ, ಏಕ ಭಾಷೆ, ಏಕ ಜನಾಂಗ  ಚಿಂತನೆಯನ್ನು  ಅಡಕಗೊಳಿಸಿಕೊಂಡಿದ್ದು ಇಲ್ಲಿ ಬಹು ಭಾಷೆ, ಬಹು ಸಂಸ್ಕೃತಿ, ಬಹು ಸಮುದಾಯ ಮತ್ತು ಏಕ ರಾಷ್ಟ್ರ ಕಲ್ಪನೆಗೆ ಒಗ್ಗುವುದಿಲ್ಲ. ಹಾಗಾಗಿ 'ಖಡ್ಗವಾಗಲಿ ಕಾವ್ಯ' ಎಂಬ ಕಲ್ಪನೆ  ಮತ್ತೊಂದು ಸಮುದಾಯದಿಂದ ಕೀಳಾಗಿ ಕಾಣುವ ಸಮುದಾಯಕ್ಕೆ ಮಾರಣಾಂತಿಕ ಪೆಟ್ಟು ಬೀಳುವ ಸಾಧ್ಯತೆಯಿತ್ತು. ಇದನ್ನು ತುಂಬ ಗಂಭೀರವಾಗಿ ಸ್ವೀಕರಿಸಿದ್ದಲ್ಲಿ ಬಹು ಸಮುದಾಯಗಳ ನಡುವಿನ ಏರ್ಪಾಟು ಮರು ಏರ್ಪಾಟಿಗೆ ಒಳಪಡುವ ಬದಲು ಅರಾಜಕತೆ ಮತ್ತು ಆಂತರಿಕ ಯುದ್ಧಕ್ಕೆ ಕಾರಣವಾಗಬಹುದಿತ್ತು. ಹಾಗೆ ಎಡಪಂಥದಲ್ಲಿ ತೀವ್ರ ನಿಷ್ಟೆ ತಾಳಿದ ಚಳವಳಿಗಳಿಗೆ ಉಗ್ರವಾದದ ಹಣೆಪಟ್ಟಿ ಕಟ್ಟಿ ದಮನಿಸಲಾದ ನಿದರ್ಶನವಾಗಿ ನಕ್ಸಲೈಟ್ ಚಳವಳಿ ನಮ್ಮ ಮುಂದಿದೆ. ಆದರೆ ದಲಿತ-ಬಂಡಾಯ ಸಾಹಿತ್ಯ ಚಳವಳಿ ತನ್ನ ಆಶಯಗಳನ್ನು ಸಾಮಾಜಿಕ ಬದ್ಧತೆಯ ಕಲ್ಪನೆಯಡಿ ಪ್ರತಿಪಾದಿಸಿ  ಸಾಮಾಜಿಕ ಪರಿವರ್ತನೆಗೆ ಮೂಲವಾದ ವಿಚಾರವಾದದ ಬೆಳವಣಿಗೆಗೆ ಪ್ರೇರಕವಾಯಿತು. ಈ ಚಳವಳಿಯ ಮುಂಚೂಣಿಯಲ್ಲಿದ್ದವರಿಗೆ ಸಾಮಾಜಿಕ ಮಾನ್ಯತೆ ಮತ್ತು ಅಧಿಕಾರದ ಸ್ಥಾನಮಾನಗಳನ್ನು ನೀಡಿದ ಶ್ರೇಣೀಕೃತ ಸಮಾಜ ಅಬಾಧಿತವಾಗಿ ಮುಂದುವರೆಯುವ ಅವಕಾಶವನ್ನೂ ಪಡೆದುಕೊಂಡಿತು. ಇದರ ಹಿಂದೆ ಆಗ ಅಗೋಚರವಾಗಿದ್ದರೂ ಸಕ್ರಿಯವಾಗಿದ್ದ ಮಧ್ಯಮವಾದಿಗಳ ನಿಲುವು ಕಡೆಗಣಿಸುವಂಥದ್ದಲ್ಲ. ಈ ಮಧ್ಯಮ ವಾದಿಯೊಬ್ಬನ ನಿಲುವು ಮೇಲಿನ ಟಿಪ್ಪಣಿಯಲ್ಲಿ ಪ್ರತಿಪಾದಿತವಾಗಿರುವಂತೆ ನನಗೆ ಈಗ ಕಾಣುತ್ತದೆ. ಹಾಗಾಗಿಯೆ ಸೃಜನಶೀಲತೆಯನ್ನು ಮಾನವೀಯ ನೆಲೆಯಲ್ಲಿ ನಡೆಯುವ ಜೀವನ ಮೌಲ್ಯಗಳ ಪಲ್ಲಟವೆಂದೂ ಅರಾಜಕತೆ ಮತ್ತು ಹಿಂಸೆಗೆ ಮೂಲವಾದ ಕ್ರಾಂತಿಯಲ್ಲವೆಂದೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.     
ಸೃಜನಶೀಲತೆಯೆಂದರೆ ಸಾಹಿತ್ಯ/ಕಲಾ ಚಳವಳಿಯೊಂದರ ವಸ್ತು, ಶೈಲಿ, ವಿಧಾನಗಳಲ್ಲಿ ತಲೆದೋರಿದ ಸಿದ್ಧ ಮಾದರಿಯನ್ನು ನಿರಾಕರಿಸದೆ, ಕೆಡವದೆ ಕಲೆಯ ಹೊಸ ಸಾಧ್ಯತೆಯನ್ನು ಕಂಡುಕೊಳ್ಳಲು, ಕಟ್ಟಲು ಸಾಧ್ಯವಿಲ್ಲ; ಚಲನಶೀಲತೆಯನ್ನು ಸಾಧಿಸಲು ಆಗುವುದಿಲ್ಲ ಎಂಬ ಸರಳ ನೋಟದಿಂದ ಹೇಮಂತ ಕುಲಕರ್ಣಿಯವರು ದ್ಯಾದಾಯಿಜಮ್ ಆಂದೋಲನವನ್ನು ವಿವರಿಸಿದ್ದಾರೆ. ಇದನ್ನೇ ನಾನು ಭಾರತೀಯ ಸಾಮಾಜಿಕ ಸಂದರ್ಭದ ನಿಟ್ಟಿನಿಂದ ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಹಾಗಾಗಿಯೆ ಸೃಜನಶೀಲ ಕ್ರಿಯೆ ಮತ್ತು ಸಾಮಾಜಿಕ ಸಂಬಂಧಗಳು ಪರಸ್ಪರ ಪರಿಣಾಮ ಬೀರುವ ಹಾಗೂ ಅನ್ಯೋನ್ಯ ಸಂಬಂಧವಿರುವ ಅಂಶಗಳಾಗಿ ನನಗೆ ಕಂಡಿದೆ. 

ಬುಧವಾರ, ಜೂನ್ 1, 2011

ಪತ್ರಿಕೆ ಪ್ರಕಟಿಸಿದ ನನ್ನ ಮೊದಲ ಕವನ

ಶೂದ್ರ ಪತ್ರಿಕೆ ಮೊದಲ ಬಾರಿಗೆ ಈ ರಚನೆಯನ್ನು 1984ಕ್ಕೂ ಮೊದಲು ಪ್ರಕಟಿಸಿತು. ಇದಕ್ಕೂ ಮೊದಲು ಕಾಲೇಜ್ ವಾರ್ಷಿಕ ಸಂಚಿಕೆಯಲ್ಲಿ `ನಾನು ಮತ್ತು ಕಾಂಪೌಂಡನೊಳಗಿನ ಮರ' ಮತ್ತು ರವಿ ಉಪಾಧ್ಯೆ ಸಂಪಾದಿಸುತ್ತಿದ್ದ ನಾಡೋಜ ಪತ್ರಿಕೆಯಲ್ಲಿ `ಸ್ವಾತಂತ್ರ್ಯೋತ್ಸವ : 1977' ಎಂಬ ರಚನೆಗಳು ಪ್ರಕಟವಾಗಿದ್ದ ನೆನಪು. ಇವೆರಡೂ ರಚನೆಗಳ ಪ್ರಕಟನೆಯಲ್ಲಿ ಗುರುಗಳಾಗಿದ್ದ ವೇಣುಗೋಪಾಲ ಸೊರಬ ಅವರ ಬೆಂಬಲ ಮತ್ತು  ಪ್ರಯತ್ನವಿತ್ತು. ಕಾಲೇಜಿನ ವಾರ್ಷಿಕ ಸಂಚಿಕೆಯ ಸಂಆದಕ ಮಂಡಳಿಯಲ್ಲಿ ಅವರಿದ್ದರು. ಅಲ್ಲದೆ ರವಿ ಉಪಾಧ್ಯೆ ಅವರ ಗೆಳೆಯರಿದ್ದರು.
ಒಂದೂ ಎಲೆಯಿಲ್ಲದ ಮತ್ತು ಹೂಗಳಿಂದ ಮಾತ್ರ ತುಂಬಿರುವ ಮರ ತನ್ನ ಕಾಂಪೌಂಡಿನೊಳಗಿರಬೇಕೆಂದು ಬಯಸಿದ ನಿರೂಪಕ ಎಲೆಗಳನ್ನೆಲ್ಲ ಒಂದೂ ಬಿಡದೆ ಕಿತ್ತು ಹಾಕಿದಂತೆಲ್ಲ  ಅವು ಮತ್ತೆ ಚಿಗುರಿ ಮತ್ತೆ ಕಿತ್ತು ತನ್ನ ಕನಸು ಸಾಕಾರಗೊಳಿಸಿಕೊಳ್ಳಲು ಸೋಲುವ  ಚಿತ್ರವಿದ್ದ ರಚನೆ ಅದು. ವ್ಯಕ್ತಿ ತನ್ನ ಜೀವನದಲ್ಲಿ ಪ್ರಾಕೃತಿಕ ನಿಯಮ ಮೀರಿದ ಆದರ್ಶ ಮತ್ತು ಕನಸುಗಳನ್ನು ಹೊಂದಿದ್ದಲ್ಲಿ ಅದು ಕೈಗೂಡದೆ ಅವನ ಜೀವನ ವಿಷಾದದಿಂದ ತುಂಬಿಹೋಗುತ್ತದೆ ಎಂಬ ಆಶಯವಿದ್ದ ರಚನೆಯಂತೆ ಇಂದು ನನಗೆ ತೋರುತ್ತದೆ.
ಆನೆಯನ್ನು ಬೆದರಿಕೆ ಮತ್ತು ಆಸೆಗಳ ಮೂಲಕ ಖೆಡ್ಡಾದೊಳಗೆ ಬೀಳಿಸುವ ಚಿತ್ರವನ್ನು ಕಟ್ಟಿಕೊಟ್ಟಿದ್ದ ರಚನೆ `ಸ್ವಾತಂತ್ರ್ಯೋತ್ಸವ : 1977'. ತುರ್ತು ಪರಿಸ್ಥಿತಿಯಿದ್ದ ಅಂದಿನ  ಸಂದರ್ಭದಲ್ಲಿ ಆನೆಯನ್ನು ಸ್ವತಂತ್ರ ಪ್ರವೃತ್ತಿಯ ಪ್ರತೀಕವಾಗಿರಿಸಿ ಸ್ವಾತಂತ್ರ್ಯೋತ್ಸವದ ವೈರುಧ್ಯವನ್ನು ಕಟ್ಟಕೊಟ್ಟಿದ್ದ ಪ್ರಭುತ್ವ ವಿರೋಧಿ ಆಶಯವುಳ್ಳ ಬರವಣಿಗೆ ಇದು. ಇವೆರಡೂ ಅಂದಿನ ನನ್ನ ಗದ್ಯಮಯ ಶೈಲಿಯಲ್ಲಿ ಬರೆದದ್ದು.  
ನಂತರ ಪ್ರಕಟವಾದದ್ದು ಈ ರಚನೆ. ಮೊದಲ ಸಂಕಲನದಲ್ಲಿರುವ ಇದನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ನಿಮ್ಮ ಮುಂದೆ ಇರಿಸುತ್ತಿದ್ದೇನೆ.

#




ಒಂದು ಮಾತು




ಬೇಡವೆನ್ನುವ ಒಪ್ಪಿತ ನಿರ್ಣಯವೆ

ಬಲೆ ಮುರಿದು ಹರವಾದ ಬಯಲೊಳಗೆ
ಮನೆ ಉಳಿದು ನೆಲ ಕಾಣದ ಇಂಗಿತವೆ


ತೆಕ್ಕೆಯೊಳಗಿದ್ದೂ ಕುಶಲ ಹೊರಗಿಣುಕುವ
ನುಣುಪಿನೆಳೆ ನೆಯ್ದ ಬಂಧದ ಭೃಂಗವೆ


ತಬ್ಬಿ ಬಾಚುವ ಚಾಚಿದ ಹಸ್ತಲಾಘವವೆ

ಹರಿಯದ ಬಿಗಿಯದ ತುಯ್ತಕ್ಕೆ ಸಿಲುಕಿ
ಉಬ್ಬರವಿಳಿತದಲೇ ಲೀನವಾದ ಬಲವೆ


ಏರೋಪ್ಲೇನಿನೆಳೆತಕ್ಕೆ ಮೇಲೇರಿ
ಬೂಟುಗಾಲಿನ ತುಳಿತಕ್ಕೆ ನಲುಗುವ
ಅಭಂಗ ಸಾಹಸ ಮೆರೆವ ಪ್ರೇಮವೆ


ನಲಿವ ಮುರಿದ ಬಾಗಿಲ ಬೀಗ ಎಷ್ಟು ಭದ್ರ?

ಕೊಂಡಿ ಕಳಚಿದ ಸೋದರ ನೇತ್ರ ಬಂಧ?

ಹೊಡೆದಾಡುವ ಒಡಂಬಡದ ಹಿಡಿತ
ಗ್ರಹಿತವೇ ಇಲ್ಲವೆನ್ನುವಷ್ಟು ಶುಷ್ಕ?


ಈ ವ್ಯವಹಾರದಲಿ ಎತ್ತ ಸಾಗಲೆನುವ
ಪ್ರಶ್ನೆಯೆ ಇಲ್ಲದ ಕುರುಡ ಕೋಲು ಕುಟ್ಟುತ್ತ



ಸವೆದ ದಾರಿಯ ಹೊಳಹು ಸಿಗದಿದ್ದರೇನು
ಕಾಲಿನ ಸವೆತವಾದರೂ ತಿಳಿಯಬೇಡವೆ?
ಅಳತೆಗೆ, ಮಿಂಚುವ ಪ್ರಖರ ಅನಿಸಿಕೆಗೆ?


'ಗಿಣ್ಣು' ಕವನ ಸಂಕಲನದಿಂದ

ಗುರುವಾರ, ಮೇ 26, 2011

ಮಾಸ್ತಿಯವರದೊಂದು ಕತೆ ಕುರಿತು ಟಿಪ್ಪಣಿ

1994ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನಲ್ಲಿ `ಅನ್ಯಜ್ಞಾನಶಿಸ್ತುಗಳ ಮೂಲಕ ಕನ್ನಡ ಸಾಹಿತ್ಯ' ಎಂಬ ಕಮ್ಮಟವನ್ನು ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಿದ್ದ ನಾನು ಮನಶಾಸ್ತ್ರ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಟಿಪ್ಪಣಿಯೊಂದನ್ನು ಸಿದ್ಧಪಡಿಸಿದ್ದೆ. ನಂತರ ಅಕಾಡೆಮಿ ಕಮ್ಮಟ ಕುರಿತು ಪ್ರಕಟಿಸಿದ ಪುಸ್ತಕದಲ್ಲಿ ಸೇರಿಕೊಂಡಿತು. ಅದನ್ನಿಲ್ಲಿ  ತುಸು ಬದಲಾವಣೆಯೊಂದಿಗೆ ಮತ್ತೆ ನಿಮ್ಮ ಮುಂದಿರಿಸುತ್ತಿದ್ದೇನೆ. 
#

ಮಾಸ್ತಿ ಅವರ `ಗೌತಮಿ ಹೇಳಿದ ಕತೆ' 

ಈ ಕತೆಯ ವಿನ್ಯಾಸ ಗೌತಮಿ ನಿರೂಪಿಸುವ ಕತೆಯ ಹಿಂದೆ ಕೆಲಸ ಮಾಡುವ ನಿರೂಪಕಿಯ ಮನಸ್ಸನ್ನು ಚಿತ್ರಿಸುತ್ತದೆ. ಗೌತಮಿ ಕತೆ ನಿರೂಪಿಸಲು ಪ್ರೇರಿತಳಾಗಿದ್ದಾಳೋ ಇಲ್ಲವೆ ಪ್ರೇರಕ ಸ್ಥಾನದಲ್ಲಿ ನಿಂತು ಕತೆ ಹೇಳುತ್ತಿದ್ದಾಳೋ ನಿರ್ದಿಷ್ಟವಾಗಿ ಕಂಡುಕೊಳ್ಳುವುದು ಸುಲಭವಲ್ಲ ಎನ್ನುವ ಹಾಗೆ ಕತೆಯನ್ನು ಮಾಸ್ತಿ ಹೆಣೆದಿದ್ದಾರೆ.

ಶಕುಂತಲೆ ತನ್ನ ಮಗು ಭರತನೊಂದಿಗೆ ಆಶ್ರಮಕ್ಕೆ ಭೇಟಿ ನೀಡಿದ್ದಾಳೆ ಎನ್ನುವ ಒತ್ತಿನೊಂದಿಗೆ ಕತೆ ಆರಂಭವಾಗುತ್ತದೆ. ಆ ಕಾಲಕ್ಕೆ ಅವಳ ಸಖಿಯರಾದ ಅನಸೂಯ ಮತ್ತು ಪ್ರಿಯಂವದೆಯರಿಗೂ ಮದುವೆಯಾಗಿದೆ. ಅವರೂ ಮಕ್ಕಳನ್ನು ಪಡೆದು ತಾಯಂದಿರಾಗಿದ್ದಾರೆ. ಒಂದು ಕಡೆ ಶಕುಂತಲೆಯ ಬದುಕು ಸಂಸಾರದ ನೆಲೆಯಲ್ಲಿ ಎದುರಿಸಿದ ಎಲ್ಲ ಬಗೆಯ ಗಂಡಾಂತರಗಳನ್ನು ಕಂಡಿದ್ದರೂ ಅದನ್ನು ದಾಟಿದೆ, ಎಂದೋ ನಿರಾತಂಕ ಸ್ಥಿತಿಯನ್ನು ತಲುಪಿದ್ದು ನಿರಾಳತೆಯಿಂದ ಸಾಗುತ್ತಿದೆ.  ಮತ್ತೊಂದೆಡೆ ಅವಳ ಸಖಿಯರೂ ಅಶ್ರಮದ ಹೆಣ್ಣುಮಕ್ಕಳೂ ಆದ ಅನಸೂಯ ಮತ್ತು ಪ್ರಿಯಂವದೆಯರ ಬದುಕು ಹಾದಿ ತಪ್ಪದೆ ಸುಭದ್ರ ಸ್ಥಿತಿಯನ್ನು ಮುಟ್ಟಿದೆ. ಮುದುಕಿಯಾಗಿರುವ ಗೌತಮಿ, ಶಕುಂತಲೆ ಮತ್ತು ಅವಳ ಸಖಿಯರಂತೆ ಆಶ್ರಮಕ್ಕೆ ಅನಾಥ ಮಕ್ಕಳಂತೆ ಬಂದಿದ್ದು ಇವರೆಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಏರು ಪೇರು ಕಂಡವರೇ ಅಗಿದ್ದಾರೆ. ಅಲ್ಲದೆ ಕತೆ ಜರುಗುವ ಹೊತ್ತಿಗೆ ಸಂತೃಪ್ತ ಬದುಕಿನ ನೆಲೆಯನ್ನು ತಲುಪಿದ್ದಾರೆ.  ಗೌತಮಿ ಸಂತಸದ ಮನಸ್ಥಿತಿಯಲ್ಲಿದ್ದಾಳೆಂದು ಕತೆಯ ಮೊದಲ ಹಂತದಲ್ಲಿ ವಿವರಣೆ ದೊರಕುತ್ತದೆ. ಆಕೆಯ ಮನಸ್ಥಿತಿಗೆ ಶಕುಂತಲೆ ಆಶ್ರಮಕ್ಕೆ ಭೇಟಿ ನೀಡಿರುವುದು ಅಥವಾ ಶಕುಂತಲೆಯ ಬದುಕಿನ ಹಿನ್ನೆಲೆಯಲ್ಲಿ ತನಗೆ ತನ್ನದೆ ಕತೆ ನಿರೂಪಿಸಲು ಸಂದರ್ಭ ಒದಗಿರುವುದು ಕಾರಣವಿರಬಹುದು. ಶಕುಂತಲೆ ದುಷ್ಯಂತನನ್ನು ವರಿಸಿ ಹೋದಮೇಲೆ ಗೌತಮಿ ಅನಸೂಯ ಮತ್ತು ಪ್ರಿಯಂವದೆಯರಿಗೆ ಒತ್ತಾಯ ಮಾಡಿ ಮದುವೆಗೆ ಒಪ್ಪಿಸಿರುತ್ತಾಳೆ. ಗೌತಮಿ ತಾನೇಕೆ ಹಾಗೆ ನಡೆದುಕೊಂಡೆನೆಂದು ಹೇಳಲು ಶಕುಂತಲೆಯ ಸಖಿಯರಿಗೆ ಕತೆಯ ಮೂಲಕ ವಿವರಿಸತೊಡಗುತ್ತಾಳೆ. ಈ ಕತೆಯನ್ನು ಗೌತಮಿ ಈ ಮೊದಲೆ ಬೇರೆ ಯಾವ ಸಂದರ್ಭದಲ್ಲಿಯಾದರೂ ಹೇಳಬಹುದಿತ್ತು. ಆದರೆ ಆಕೆ ಹೇಳಿರಲಿಲ್ಲ. ಬದುಕಿನಲ್ಲಿ ತೊಡಕನೆದುರಿಸಿದ ಅಸ್ಥಿರ ಘಟ್ಟದಿಂದ ಎಲ್ಲ ಪಾತ್ರಗಳು ಮೇಲೆ ಬಂದು ನೆಮ್ಮದಿಯ ಸ್ಥಿತಿಯಲ್ಲಿರುವುದು ಗೌತಮಿ ನಿರೂಪಿಸುವ ಕತೆಯನ್ನು ಎಲ್ಲ ಪಾತ್ರಗಳೂ ನಿರ್ಲಿಪ್ತವಾಗಿ ದೂರದಿಂದ ನೋಡಲು ಮತ್ತು ಸ್ವೀಕರಿಸಲು ಸಾಧ್ಯವಾಗುವ ಮಾನಸಿಕ ವಾತಾವರಣ ರೂಪಿಸಲು ಕಾರಣವಾಗಿದೆ. ಇಂತಹ ಸ್ಥಿತಿಯಲ್ಲೂ ಗೌತಮಿ ತನ್ನ ಕತೆಯನ್ನು ಮತ್ತೊಬ್ಬರ ಕತೆಯಂತೆ ನಿರೂಪಿಸುತ್ತಾಳೆ.

ಅನಾಥೆಯಾಗಿ ಬಂದು ಸೇರಿದ್ದ ಆಶ್ರಮದ ಮತ್ತೊಬ್ಬ ಹುಡುಗಿ ಮಾಲಿನಿಯ ಕತೆಯೆಂಬಂತೆ ಗೌತಮಿ ತನ್ನ ಕತೆಯನ್ನು ಹೇಳುತ್ತಾಳೆ. ಒಂಬತ್ತು ಹತ್ತು ವರುಷದ ಮಾಲಿನಿ ಆಶ್ರಮದ ಮುಕ್ತ ವಾತಾವರಣದಲ್ಲಿ ಗಂಡು ಹೆಣ್ಣು ಎಂಬ ಭೇದಭಾವದ ಅರಿವಿಲ್ಲದೆ ತನ್ನ ಓರಗೆಯ ಹುಡುಗರಾದ ಭಾರದ್ವಾಜ ಮತ್ತು ದತ್ತ ಕಶ್ಯಪರೊಡನೆ ಬೆರೆತು ಬೆಳೆಯುತ್ತಾಳೆ. ಮದುವೆಯ ಮಾತಿಗೆ ಅವಳು ಸಮರ್ಥನೂ ಬಲಿಷ್ಟನೂ ಆಗಿ ಕಂಡುಬಂದಿದ್ದ ಭಾರದ್ವಾಜನ ಕಡೆಗೆ ಒಲಿಯುತ್ತಾಳೆ. ಒಮ್ಮೆ ಹೊಳೆಯ ಪ್ರವಾಹದಲ್ಲಿ ಈಜುತ್ತಿದ್ದ ಭಾರದ್ವಾಜ ಆಕಸ್ಮಿಕವಾಗಿ ತೇಲಿ ಬರುತ್ತಿದ್ದ ಮರಕ್ಕೆ ಸಿಲುಕಿ ಸಾಯುತ್ತಾನೆ. ಭಾರದ್ವಾಜನ ಸಾವಿನಿಂದ ತನ್ನ ಬದುಕು ದಿಕ್ಕು ಕೆಟ್ಟಿದ್ದನ್ನು ಅರಿತ ಮಾಲಿನಿ ಒಂದು ದಿನ ಹೊಳೆಗೆ ಹಾರುತ್ತಾಳೆ. ಹೊಳೆಯ ತುಂಬು ನೀರಿನಿಂದ ಅವಳನ್ನು ದತ್ತ ಹೊರಹಾಕುತ್ತಾನೆ. ಅಲ್ಲಿಂದ ಅವಳ ಮನಸ್ಸು ದತ್ತನನ್ನು ಪಡೆಯಲು ಹವಣಿಸುತ್ತದೆ. ಅರಿವಿಲ್ಲದೆ ಭಾರದ್ವಾಜನಲ್ಲಿ ಪಡೆದುಕೊಂಡದ್ದನ್ನು ಮಾಲಿನಿ ಅವನ ಸಾವಿನಿಂದ ಇದ್ದಕ್ಕಿದ್ದ ಹಾಗೆ ಕಳೆದುಕೊಂಡ ಮೇಲೆ ತನ್ನ ಜೀವನದ ಆಧಾರವನ್ನೆ ತಾನು ಕಳೆದುಕೊಂಡೆನೆಂದು  ಹೊಳೆಗೆ ಹಾರಲು ಹೊರಡುತ್ತಾಳೆ. ನಂತರ ತನ್ನ ಜೀವ ಉಳಿಸಿದ ದತ್ತನಲ್ಲಿ ತನ್ನ ನೆಚ್ಚಿನ ಜೀವವನ್ನು ತಣಿಸಿ, ತನಗೆ ಬದುಕು ಕೊಡುವ ಗಂಡನನ್ನು ಕಾಣುತ್ತಾಳೆ. ದತ್ತನನ್ನು ಬಯಸಿ ತನ್ನವನನ್ನಾಗಿ ಪಡೆಯಲು ಪ್ರಯತ್ನಿಸುತ್ತಾಳೆ. ಆಶ್ರಮದ ಮುಂದಣ ಕುಲಪತಿಯಾಗಲಿರುವ ದತ್ತ ತಾನು ಪತಿತನಾಗಬಾರದೆಂಬ ಮನಸ್ಥಿತಿ ಅವನದಾಗಿತ್ತೆಂದೂ ಆದರೆ ಅವನಲ್ಲಿ ಮಾಲಿನಿ ಕುರಿತು ಸುಪ್ತ ಬಯಕೆಯಿತ್ತೆಂದೂ ಗೌತಮಿ ಚಿತ್ರಿಸುತ್ತಾಳೆ. ಇಂಥ ಮನಸ್ಥಿತಿಯಲ್ಲಿದ್ದ ದತ್ತನ ತಲೆಯನ್ನು ತನ್ನ ಎದೆಯ ಬಳಿ ಸೆಳೆದುಕೊಳ್ಳಲು ಮಾಲಿನಿ ಕೈ ಚಾಚುತ್ತಾಳೆ. ಆಗ ದತ್ತ ಕಶ್ಯಪ ದಂಡದಂತೆ ನೆಲದ ಮೇಲೆ ಬಿದ್ದು ಅವಳ ಕಾಲುಗಳೆರಡನ್ನೂ  ತನ್ನೆರಡು ಕೈಗಳಿಂದ ಹಿಡಿದು ಅವಳಿಗೆ ಶರಣಾಗತನಾಗಿ ಅಂಗಲಾಚಿ ದೈನ್ಯದಿಂದ ತನ್ನನ್ನು ಕಾಪಾಡಲು ಬೇಡಿಕೊಳ್ಳುತ್ತಾನೆ. ದತ್ತ ಮಾಲಿನಿಗೆ ತನ್ನ ತೋಳನಲ್ಲಿ ಅಪ್ಪಿ ಹಿಡಿಯಬೇಕಾದವನು ಆಗಿದ್ದ. ಆದರೆ ಆತ ನಿಸ್ಸಹಾಯಕ ಬಾಲಕನಂತೆ ಕಾಪಾಡಲು ಅವಳನ್ನು ಬೇಡಿದಾಗ ಆಕೆ ತಾಯಿಯಂತೆ ಅವನನ್ನು ಕಾಣಲು ತೊಡಗುತ್ತಾಳೆ.  ಮಾಲಿನಿಯೇ ಗೌತಮಿ, ದತ್ತ ಕಶ್ಯಪನೇ ಕಣ್ವ ಮಹರ್ಷಿಯೆಂದು ಕತೆಯ ಕೊನೆಯ ಹಂತದಲ್ಲಿ ಪಾತ್ರಗಳ ಪರಸ್ಪರ ಮಾತುಕತೆಯ ಮೂಲಕ ತಿಳಿದುಬರುತ್ತದೆ.

ಈ ಕತೆಯ ನಿರೂಪಕಿ ಮತ್ತು ಕೇಂದ್ರ ಪಾತ್ರಧಾರಿ ಗೌತಮಿಯೇ ಅಗಿದ್ದು ಅವಳ ಕಣ್ಣುಗಳಿಂದ ಗ್ರಹಿಸಿದ ಕತೆಯಂತೆ ಮಾಸ್ತಿ ಕತೆ ಮಂಡಿಸಿದ್ದಾರೆ. ಕತೆಯ ಪ್ರಾರಂಭದಲ್ಲಿ ವಿವರಿಸಲಾಗಿರುವ ಆಕೆಯ ಸಂತಸ,  ಕೇವಲ ಕತೆ ಹೇಳಿಕೊಳ್ಳುವುದರಲ್ಲಿ ಕಾಣುವ ಹಂತವೋ ಅಥವಾ ಆಕೆ ತನ್ನ ಕತೆಯ ಮೂಲಕ ತನ್ನ ಕಣ್ಣ ಮುಂದಿನ ಹೆಣ್ಣುಮಕ್ಕಳಿಗೆ ಹೀಗಾಗಬಾರದು ಎಂಬ ನೀತಿಕತೆ ಹೇಳುವ ಸ್ಥಿತಿಯೋ ಇಲ್ಲವೆ ಸಕುಂತಲೆಯ ಬದುಕಿನ ಹಿನ್ನೆಲೆಯಲ್ಲಿ ತನ್ನ ಜೀವನ ಅರಿಯಲು ಕತೆಯನ್ನು ಹೆಣೆದ ಮನಸ್ಥಿತಿಯೋ, ಹೇಗೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾರದಷ್ಟು ಕತೆ ಸಂಕೀರ್ಣವಾಗಿದೆ. ಆದರೂ ಮಾಸ್ತಿಯವರ ಈ ಕತೆ ಒಬ್ಬರಿಗೊಬ್ಬರು ಎದುರಾದಾಗ ಮತ್ತೊಬ್ಬರ ಮೂಲಕ ತನ್ನನ್ನು ಕಂಡುಕೊಳ್ಳಬಹುದಾದ ಮಾನಸಿಕ ಸ್ಥಿತಿಯನ್ನು ಚಿತ್ರಿಸುವ ಚೌಕಟ್ಟಿನಲ್ಲಿದೆ.  




ಶುಕ್ರವಾರ, ಮೇ 20, 2011

ಆಡು

1986ರ `ಸೃಜನವೇದಿ' ಸಾಹಿತ್ಯ ಪತ್ರಿಕೆಯ ಸಂಚಿಕೆಯೊಂದರಲ್ಲಿ ನನ್ನ ಮೊದಲ ಸಂಕಲನವನ್ನು  ಅರವಿಂದ ನಾಡಕರ್ಣಿ ವಿಮರ್ಶೆ ಮಾಡಿದರು. ಆಗವರು ಈ ರಚನೆ ಕುರಿತು ವಿಶೇಷ ಪ್ರಸ್ತಾಪ ಮಾಡಿದ್ದಾರೆ. ಇದರ ಭಾವ ವಲಯಕ್ಕಿರುವ ಸಾಮಾಜಿಕ ಆಯಾಮವನ್ನು ಗುರುತು ಮಾಡಿ ಹೇಳುವ ಮೂಲಕ ಸಾಹಿತ್ಯಿಕ ನೆಲೆಯನ್ನು  ಹೆಚ್ಚು ಮುನ್ನೆಲೆಗೆ ತಂದಿದ್ದಾರೆ. ಹೀಗಿದು ಹಿರಿಯ ಕವಿ ಮಿತ್ರರ ಗಮನ ಸೆಳೆದ ರಚನೆಯಾಗಿದೆ. ಅನ್ಯ ವಿಮರ್ಶ ಸ್ವ ವಿಮರ್ಶೆಯೂ ಆಗಿರುವ ಎಚ್ಚರವನ್ನು ಉಂಟುಮಾಡುತ್ತಲೆ  ಸಾಮಾಜಿಕ ಯಜಮಾನಿಕೆಗೆ ಪ್ರತಿರೋಧವನ್ನು ತಾರ್ಕಿಕವಾಗಿ ಮಂಡಿಸಿದೆ. ಇದು ನಿಮಗೂ ಇಷ್ಟವಾಗಬಹುದು ಎಂದು ಇಲ್ಲಿ ಮತ್ತೆ  ಮುಂದಿರಿಸುತ್ತಿದ್ದೇನೆ.
#


ಆಡು: ಮಾತು ಆಟ ನಗೆ
ಆಡು ನಿನ್ನ ನೀ ತೋರುತ್ತ
ಬೇರೆಯವರ ಅಳೆಯುತ್ತ


ಅಳತೆಗೆ ಸಿಕ್ಕಿದ್ದೇ ಸಾಕೆಂದು
ಪ್ರಾಣಿ ಚಿಕ್ಕದೋ ದೊಡ್ಡದೋ
ಅಳತೆ ಗೋಲನ್ನೇ ಲಾಠಿ ಮಾಡುತ್ತಿ ಯಾಕೆ?


ನಿನ್ನಳತೆ ಗೋಲೇ ಇರಬಹುದು
ಚಿಕ್ಕದು ದೊಡ್ಡದು - ಅದಕೆ
ಅದರ ಜಾಗ ತೋರಿಸಿರುವೆ ಏನು?


ಅಳತೆ ನಿನ್ನಳತೆ ಗೋಲಿಗೆ
ಯಾವುದೆಂದು ತಿಳಿದೆಯಾ?
ಅದೇ ನಿನ್ನಳೆವ ಕೋಲು ಕೂಡ!


ಬ್ರೂಸ್ಲಿಯ ಕರಾಟೆ ಕೈ ಚಳುಕಿಗೆ
ಮಹಮದಾಲಿಯ ಬಿಗಿ ಮುಷ್ಟಿಗೆ
ಮರೆತೆಯಾ ನಿನ್ನಾಟಿಕೆ?


ಕಾಲ್ಕೆರೆದು ಹಾತೊರೆಯುವ
ಮಿಂಚಿನ ಈರ್ಷ್ಯೆ ಸುಳಿಸುವ
ಕರೆಯೋಲೆ ಇದು ಕರೆಯೋಲೆ!


ಆಡು: ಮಾತು ಆಟ ನಗೆ
ಗುಣಿಸಿದ್ದು ಕೂಡಿ ಕಳೆದರೂ
ಗಣಿಕೆಯಾಗದ ಲೆಕ್ಕವಾಡು


ಅವರವರ ಶಕ್ತಿಗೆ ತಕ್ಕಷ್ಟು ದಾರಿ
ಯಾವತ್ತು ತೆರೆದು ಇದ್ದೇ ಇರುತ್ತೆ.
ನಿನ್ನ ಬೀದಿಯ ಹೆಸರು ಕುಲ ನೋಡು




'ಗಿಣ್ಣು' ಕವನ ಸಂಕಲನದಿಂದ

ಭಾನುವಾರ, ಮೇ 8, 2011

ಮುಖ ತೋರದವನು

ಭರವಸೆಯೆ ಬದುಕು, ಅದೇ ಸಮೃದ್ಧ ಜೀವನ ಎಂಬುದು ನಮ್ಮ ಪರಂಪರೆಯಿಂದ ಬಂದ ನಂಬಿಕೆ.  ಅಂಥ ನಂಬಿಕೆಯಿಂದ ಬದುಕನ್ನು ವ್ಯಕ್ತಿ ರೂಪದಲ್ಲಿ ಎದುರುಗೊಂಡ ಸ್ಥಿತಿಯಲ್ಲಿ  ವಾಸ್ತವ ಮೈಪಡೆದುಕೊಂಡ ನಾಟಕೀಯ ಬೆಳವಣಿಗೆ ಇಲ್ಲಿದೆ. 
ಬದುಕು ಭರವಸೆ ತುಂಬಿದ ಕೊಡವೂ ಅಲ್ಲ, ಬರಿ ಕೊಡವೂ ಅಲ್ಲ. ಅದು ನಿರೀಕ್ಷಿತ ಮಾನವೀಯ ಮುಖವಲ್ಲದ ಅನಿರೀಕ್ಷಿತವಾದ ಬದುಕಿನ ಮುಖ. . 
ಮೊದಲ ಸಂಕಲನ ಪ್ರಕಟವಾದಾಗ ಎಚ್ ಎಸ್ ವಿ ಈ ಕವಿತೆ ಕುರಿತು ಕಾಗದ ಬರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.


 

ಮುಖ ತೋರದವನು  



ಆತ ಬಂದ ಸುದ್ದಿ ಹೇಗೋ ತಿಳಿಯಿತು
ಬಂದನೆಂದು ನನಗೂ ಅನಿಸಿತು
ಅನಿಸಿತು ಅಂದರೇನು ಅದರ ಅನುಭವವೂ
ಇನ್ನು ಭ್ರಮೆ ಎಂಥದ್ದು? ಹೇಳು
ಅವನನ್ನು ಸ್ವಾಗತಿಸುವ ಸಂಭ್ರಮದಲ್ಲಿ ನಾನು 
ಮುಳುಗಿ ಹೋಗಿದ್ದೆ. ಸ್ವಾಗತಿಸುವ 
ತಯಾರಿ, ಸಂಭ್ರಮಗಳ ಭರಾಟೆಯಲ್ಲಿ
ಆತ ಮಾಯವಾದದ್ದು ನನಗೆ ತಿಳಿಯಲೇ ಇಲ್ಲ
ಎಲ್ಲೆಲ್ಲೂ ಭಣ ಭಣ! ಯಾಕೆ ಹೀಗೆ? ಎನ್ನುವ
ಪ್ರಶ್ನೆಯಲ್ಲೇ ಎಲ್ಲವೂ ನನ್ನ ಕೈಗೆ ಸಿಕ್ಕಿ ಬಿಟ್ಟಿತು
ಆತ ಬಂದದ್ದು ತಿಳಿಯಲಿಲ್ಲ, ಹೋದ
ದಾರಿ ಯಾವುದಿರಬಹುದೆಂದು ಭಾವಿಸಲಿ?
ಆತ ಹಿಡಿದ ಜಾಡಿನ ಪಯಣ, ಅದರ ದೆಸೆ
ಎಲ್ಲಿ ತಿರುಗಿದೆ ಎಂದು ತಿಳಿದು ಹೇಗೆ ಹಿಂಬಾಲಿಸಲಿ?
ಎಂಬ ಪ್ರಶ್ನೆಯಲ್ಲೆ ನಾನು ತೆಪ್ಪಗೆ ಕುಳಿತುಬಿಟ್ಟೆ.

ಅವನ ಪರಿಚಯವಿರಲಿಲ್ಲ. ಮುಖದ ಗುರುತು
ಹೊರಟು ಬಂದ ಊರು, ಅದರೆ ಪುರಾವೆ ಏನೂ ತಿಳಿದಿರಲಿಲ್ಲ.
ಆದರೂ ಅವನು ಬಂದದ್ದು ಹಿರಿದೆಂದೆ ತಿಳಿದೆ
ಎಲ್ಲಿ ಆತ ಬಂದದ್ದೇ ಇಲ್ಲವಲ್ಲ! ಬಂದ
ನೆಂದು ಬರಿ ಪುಕಾರು ಆದದ್ದು ಯಾರಿಗೂ ತಿಳಿಯಲಿಲ್ಲ
ಅವನು ಬಂದಿದ್ದರೆ ಮಾತ್ರ ತುಂಬ ಚೆಂದವಿತ್ತು
ಮುಖಾ-ಮುಖಿ ಕುಳಿತು ಭಾವನಾಟ್ಯದ ಕತೆಯನ್ನ
ಕತೆ ಎಲ್ಲಿಂದ ಬಂತು, ಬಂದದ್ದು ಈಗ ಕಟ್ಟುಕತೆಯಷ್ಟೆ.
ಈಗಲೂ ನನಗೆ ಅವನ ಎಲ್ಲೋ ನೋಡಿದ ನೆನಪು
ನೆನಪು ಸ್ಪಷ್ಟ ಇಲ್ಲ. ಆತ ತಿರುಗಿ ಬರುವ
ನಂಬಿಕೆ ನನಗೆ ಎಳ್ಳಷ್ಟೂ ಇಲ್ಲ. ಮುಖ ತೋರದೆ
ಹಾಗೆ ಹೊರಟು ಹೋದದ್ದು ಮಾತ್ರ
ನನಗೇನೂ ಕೊಟ್ಟಂತಾಗಲಿಲ್ಲ.

'ಗಿಣ್ಣು' ಕವನ ಸಂಕಲನದಿಂದ

ಭಾನುವಾರ, ಮೇ 1, 2011

1996ರಲ್ಲಿ ಸಂಚಯ ಪ್ರಕಟಿಸಿದ ನನ್ನ ಬರೆಹ

ಬಸವಣ್ಣನ ಒಂದು ವಚನ


ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ ದೇಹವೇ ದೇಗುಲ
ಶಿರ ಹೊನ್ನ ಕಳಸವಯ್ಯ
ಅಯ್ಯಾ ಕೂಡಲ ಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಈ ವಚನದ ಕೊನೆಯ ಸಾಲಿನಲ್ಲಿ ಬಸವಣ್ಣ ಸ್ಥಾವರ ಮತ್ತು ಜಂಗಮ ಚಿಂತನಾ ರೂಪಗಳನ್ನು ಕಟ್ಟಿಕೊಟ್ಟಿದ್ದಾನೆ. ಇವೆರಡರ ನಡುವೆ ಇರುವ ತಾರತಮ್ಯ ಪ್ರಜ್ಞೆಯನ್ನು ಖಚಿತ ಪಡಿಸಿ, ಮೌಲ್ಯ ಪರವಾದ ತನ್ನ ನಿಖರ ನಿಲುವನ್ನು ಸ್ಪಷ್ಟಪಡಿಸಿದ್ದಾನೆ. ಇದಕ್ಕಾಗಿ ಒಂದು ಸಾಮಾಜಿಕ ಪ್ರತಿಮೆಯನ್ನು ಬಳಸಿದ್ದಾನೆ. ಆ ಮೂಲಕ ತರತಮ ಭಾವ ಮತ್ತು ಅದರ ಪ್ರಜ್ಞೆಯನ್ನು ಖಚಿತವಾಗಿ ಬೆಳೆಸಿದ್ದಾನೆ. ಉಳ್ಳವರು ಮತ್ತು ಬಡವರು ಎಂಬ ಸಾಮಾಜಿಕ ವರ್ಗಗಳನ್ನು ಒಳಗೆ ತಂದಿರಿಸಿಕೊಂಡಿದ್ದಾನೆ. ಉಳ್ಳವರೆಂದರೆ, ಸಮಾಜದಲ್ಲಿ ಮೇಲುಜಾತಿಯನ್ನು ಹುಟ್ಟಿನಿಂದ ಪಡೆದವರು, ವಿದ್ಯೆ ಮತ್ತು ಅಧಿಕಾರದ ಸ್ಥಾನಮಾನಗಳನ್ನು ಪಡೆದವರು, ಇವೆರಡರ ಬಲದಿಂದ ಸಮಾಜಿಕ ಸ್ಥಾನಮಾನ, ಧಾರ್ಮಿಕ ಸ್ಥಾನಮಾನ, ಅಧಿಕಾರ, ಇವೆಲ್ಲದರ ಬಲದಿಂದ ಧನ-ಧಾನ್ಯಗಳನ್ನು ಹೇರಳವಾಗಿ ಹೊಂದಿದವರು. ಸಮಾಜದ ಎಲ್ಲ ಬಲಗಳನ್ನು ತಮ್ಮ ಕೈ ವಶ ಮಾಡಿಕೊಂಡವರು ಅರ್ಥಾತ್ ಯಜಮಾನ ಸ್ಥಾನದಲ್ಲಿರುವವರು. ಉಳ್ಳವರು  ಚಿಂತನಾ ರೂಪಕ್ಕೆ ಬದಲಾಗಿ ಬಸವಣ್ಣ ಬಡವರು ಚಿಂತನಾ ರೂಪವನ್ನು ಚಲಾವಣೆಗೆ ತಂದಿದ್ದಾನೆ. ಬಡವರೆಂದರೆ  ಉಳ್ಳವರು ಹೊಂದಿರುವುದನ್ನು ಪಡೆದುಕೊಳ್ಳಲಾಗದ ಬಲಹೀನರು, ದೀನರು. ಈ ಬಡವನಲ್ಲಿ ಲೌಕಿಕ ಸುಖ   ಸಾಧನಗಳ ಸವಲತ್ತುಗಳಿಲ್ಲ, ಆದರೆ ಸಮೃದ್ಧ ಭಾವ ಜೀವನ, ಸರಳತೆ, ಮುಗ್ಧತೆ, ನೆಮ್ಮದಿ, ವಿಕಾರವಲ್ಲದ ಸೀದಾ-ಸಾದಾ ಮೊದಲಾದ ತನ್ನತನಗಳಿವೆ.   
ಲೌಕಿಕ ಸವಲತ್ತುಗಳನ್ನುಳ್ಳ, ವ್ಯವಹಾರ ಬಲ್ಲ ಉಳ್ಳವರು ಕಲ್ಲುಮಣ್ಣಿನ ಶಿವಾಲಯ-ದೇವಾಲಯ ಕಟ್ಟಿಸಬಲ್ಲರು ಮತ್ತು ಇಂಥ ಕಲ್ಲು ಮಣ್ಣಿನ ಕಟ್ಟಡದ ಹಕ್ಕು-ಅಧಿಕಾರ ಪಡೆಯಬಲ್ಲರು, ತಮ್ಮ ಹುಸಿ ಘನತೆ, ಗೌರವ, ದೊಡ್ಡಸ್ಥಿಕೆ ಮೆರೆಯಬಲ್ಲರು. ಇದು ಉಳ್ಳವರ ಉಪಭೋಗ ಮತ್ತು ಲೌಕಿಕ ಜೀವನದ ಮೂಲ ಅಂಗ. ಆದರೆ ಬಡವರು ಶಿವಾಲಯವನ್ನು ಹೇಗೆ ಒಳಹೋಗಬಲ್ಲರು? ಬಡವನಿಗೆ ಶಿವಾಲಯದ ಹಕ್ಕು, ಅಧಿಕಾರ, ಒಳ ಹೊಕ್ಕುವ ಹಕ್ಕು ಉಪಭೋಗ ಜೀವನೂ ಅಲ್ಲ, ವ್ಯಾವಹಾರಿಕ ಜೀವನವೂ ಅಲ್ಲ. ಅದೊಂದು ಆನುಭಾವಿಕ ಕ್ರಿಯೆ. ಅಂತರಂಗ ಮತ್ತು ಬಹಿರಂಗ ಜೀವನವನ್ನು ತೊಳೆದು ಶುಚಿ ಮಾಡುವುದು, ಅದಕ್ಕಾಗಿ ವಿಶ್ವ ಚೇತನದ ಮೊರೆ ಹೋಗುವುದು ಅಥವಾ ಆ   ಚೇತನವನ್ನು ತನ್ನೊಳಗೆ ಆವಾಹಿಸಿಕೊಳ್ಳುವುದು ಆಗಿದೆ. ಹೀಗೆ ಉಳ್ಳವರು ಮತ್ತು ಬಡವರು ತಮ್ಮದೇ ಆದ ಬೇರೆ ಬೇರೆ ನೆಲೆಗಳಲ್ಲಿ ಶಿವಾಲಯ ಮಾಡುತ್ತಾರೆ.
ಬಸವಣ್ಣನ ಕಾಲದಲ್ಲಿ ಉಳ್ಳವರು ಶಿವಾಲಯ ಮಾಡುವುದು ರೂಢಿಯಲ್ಲಿತ್ತು. ಅದಕ್ಕೆ ವಿರುದ್ಧವಾಗಿ ಬಡವರೂ ಶಿವಾಲಯ ಮಾಡುವುದನ್ನು ರೂಢಿಗೆ ತರಬೇಕಿತ್ತು. ಉಪಭೋಗ ಜೀವನದ ಸ್ಥಾನದಲ್ಲಿ ಸ್ವಾನುಭವದ ಅಂತಸ್ಥ ಜೀವನ ಕ್ರಮವನ್ನು ಚಾಲ್ತಿಗೆ ತರಬೇಕಿತ್ತು. ಇಂಥ ಸಂದರ್ಭದಲ್ಲಿ 'ನಾನೇನು ಮಾಡಲಿ ಬಡವನಯ್ಯ' ಎಂದು ಬಸವಣ್ಣ ಅಸಹಾಯತನದ ಉದ್ಗಾರ ಮಾಡಿದ್ದಾನೆ. ಬಡವರು ಶಿವಾಲಯ ಮಾಡುವ ಕ್ರಮದ ಮೇಲೆ ಒತ್ತು ಹಾಕಿದ್ದಾನೆ.
ಈ ವಚನದ ನಾಯಕ 'ನಾನು'- ಬ್ರಾಹ್ಮಣ ಕುಲದಲ್ಲಿ ಹುಟ್ಟಿದವನೂ ಬಿಜ್ಜಳನ ಆಸ್ಥಾನದಲ್ಲಿ   ಭಂಡಾರಿಯಾಗಿದ್ದವನೂ ಎಲ್ಲ ಬಗೆಯ ಸ್ಥಾನಮಾನ ಗೌರವಾದರಗಳನ್ನು ಪಡೆಯುತ್ತಿದ್ದನೂ ಆದ ಬಸವಣ್ಣನಲ್ಲ; ಮೂಲಭೂತ ಸವಲತ್ತುಗಳಿಂದಲೂ ವಂಚಿತರಾಗಿ ಲೌಕಿಕ ಜೀವನ ನರಕವಾಗಿದ್ದ ಸಮಾಜದ ಬಲಹೀನ, ದೀನ ದಲಿತರ ಸಾಂಸ್ಕೃತಿಕ ಚಳವಳಿಯ ನೇತಾರನಾಗಿದ್ದ ಬಸವಣ್ಣ. ಹಾಗಾಗಿ ಲೌಕಿಕ ಸಲತ್ತುಗಳಿಲ್ಲದೆ ನರಕ ಜೀವನ ನಡೆಸುತ್ತಿರುವ ಬಡವನಿಗೆ ಇಲ್ಲಿ ಎಚ್ಚರಿಕೆ ಇದೆ. ಲೌಕಿಕವಾಗಿ ಬಡವನಾಗಿದ್ದೂ ಅಲೌಕಿಕವಾಗಿ ನಡೆಸಬಹುದಾದ ಸುಖ ಜೀವನದ  ಹೊಸ ಹಾದಿಯ ಕಡೆಗೆ ಗಮನ ಸೆಳೆಯಲಾಗಿದೆ.
ಇದು ಲೌಕಿಕ ಸವಲತ್ತುಗಳಿಲ್ಲದ ಬಡವನಿಗೆ ಆತ್ಮವಿಶ್ವಾಸ, ಸ್ವಾಭಿಮಾನ ಮೂಡಿಸುವ ಅಂತಸ್ಥ ಶಕ್ತಿಯ ಕಡೆ ತೋರುಬೆರಳಾಗಿದೆ. ಇದಕ್ಕೆ ಲಗತ್ತಾಗಿ 'ಕಾಲೇ ಕಂಭ ದೇಹವೇ ದೇಗುಲ ಶಿರಹೊನ್ನ ಕಳಸವಯ್ಯ' ಎಂಬ ಸಾಲು ಇದೆ. ಕಾಯದಿಂದ ಬಂದ ಕಾಯಕವನ್ನು ಮಾಡುವ ಕಾಯದ ಶಿವಾಲಯ  ಪರಿಯನ್ನು ಎತ್ತಿ ಹೇಳಿದ್ದಾನೆ. ಶಿವಾಲಯ ಮಾಡುವ ಸುಖದ ಲೋಕ ಕಾಯಕ ಮಾಡುವ ಕಾಯದಲ್ಲೇ ಅಡಗಿರುವುದನ್ನು ಬಿಚ್ಚಿ ತೋರಿದ್ದಾನೆ. ಜಗತ್ತಿನ ಸೃಷ್ಟಿ ಚೈತನ್ಯವೆಲ್ಲ ಮಾನವನ ಅಳತೆಗೆ ಮೀರದ ಅವನ ದೇಹದಲ್ಲೇ ಇರುವುದನ್ನು ದೇಹವೇ ದೇಗುಲ ಕಲ್ಪನೆಯ ಮೂಲಕ ಕಾಣಿಸಿದ್ದಾನೆ. ಅಂದರೆ ಈ ಜಗತ್ತನ್ನು ನಡೆಸುವ ಹಾಗೂ ಮಾನವನ ಅಳವಿಗೆ ಮೀರಿದ ದೈವಶಕ್ತಿಯನ್ನು ಮಾನವನ ಕಾಯದಲ್ಲೆ ಕಂಡುಕೊಳ್ಳಲಾಗಿದೆ. ಈ ಸಾಲು ನಾಥ ಪಂಥದ ಮೂಲ ತಿರುಳನ್ನು ಎತ್ತಿ ಹೇಳುವ ಪದಗುಚ್ಚಗಳಿಂತಿದೆ. ಈ ಜಗತ್ತಿನ ಸೃಷ್ಟಿ ಚೈತನ್ಯವನ್ನು ನಾಥಪಂಥಿಗಳು ತಮ್ಮ ಮೈಯಲ್ಲೇ ಕಂಡುಕೊಳ್ಳುತ್ತಾರೆ. ಆ  ಚೈತನ್ಯ ಸಿದ್ಧಿಗಾಗಿ ತಮ್ಮ ದೇಹದ ಮೇಲೆ ಒಡೆತನ ಸಾಧಿಸಲು ಅನೇಕ ಬಗೆಯ ಸಾಧನೆಗಳ ಮೂಲಕ ಶ್ರಮಿಸುತ್ತಾರೆ. ಬಸವಣ್ಣ ಈ ವಚನದಲ್ಲಿ ನಾಥಪಂಥದ ಸಿದ್ದಾಂತವನ್ನು ಸಾಮಾಜಿಕ ಪ್ರತಿಮೆಯಾಗಿ ಬಳಸಿಕೊಂಡಿದ್ದಾನೆ. ನಾಥ ಪಂಥದ ದೀಕ್ಷೆ ಪಡೆದಿದ್ದ ಅಥವಾ ಅದರ ಪ್ರಭಾವಕ್ಕೆ ಒಳಗಾಗಿದ್ದ ಅಲ್ಲಮ ಪ್ರಭುವಿನ ನಿಕಟ ಸಂಪರ್ಕದಲ್ಲಿ ಬಸವಣ್ಣನಿಗೆ ಇದು ಸರಳ ಸಾಮಾನ್ಯ ಸಂಗತಿಯಾಗಿಯೇ ಇದ್ದು ಅವನ ವಚನದಲ್ಲಿ ಒಳನುಸುಳಿದೆ. ಸ್ಥಾವರ ಮತ್ತು ಜಂಗಮ ಚಿಂತನಾ ರೂಪಗಳು ಪಡಿಮೂಡಿದ್ದೂ ಇದೇ ಮೂಲದಿಂದಲೇ ಇರಬಹುದಾಗಿದೆ. ದೇಹವೇ ದೇಗುಲವಾಗಿರುವ ಮಾನವನ ನಿಜಗುಣವನ್ನು ಅರಹುವ ಮೂಲಕ ಬಸವಣ್ಣ ಸಮಾಜದ ಮೂಢ ನಡೆ ಮತ್ತು ಅರಿವಿನ ನಡೆಗಳ ವ್ಯತ್ಯಾಸ ಮತ್ತು ತಿಳುವಳಿಕೆಯನ್ನು ಮೂಡಿಸಿದ್ದಾನೆ. ಈ ಮೂಲಕ  ಅರಿವಿನ ನಡೆ ಯಾವುದು ಎಂಬುದರ ಬಗ್ಗೆ ಹೊಸಹಾದಿ ತೋರಿಸಿದ್ದಾನೆ.
ಬೌದ್ಧ ಧರ್ಮ ಅವನತಿಯಾಗುತ್ತಿದ್ದ ವೇಳೆಯಲ್ಲಿ ಹುಟ್ಟಿದ ನಾಥಪಂಥ ಅವೈದಿಕ ಪಂಥಗಳಲ್ಲೊಂದು. ಈ ಪಂಥ ಹನ್ನೆರಡನೆಯ ಶತಮಾನದ ನಡೆದ ಚಳವಳಿಯಲ್ಲಿ ತಿಳಿದೊ ತಿಳಿಯದೆಯೊ ಬೇರುಬಿಟ್ಟಿತ್ತು ಎಂಬುದು ಈ ವಚನದಿಂದ ತಿಳಿಯುತ್ತದೆ. ಇಲ್ಲಿನ ನಾಥಪಂಥದ ಆಶಯಗಳು ಇರುವವರ ಮತ್ತು ಇರದವರ ನಡುವೆ ಗೆರೆ ಎಳೆದು ಇಲ್ಲದವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಮೂಡಿಸುವ ಪ್ರಯತ್ನದಲ್ಲಿ ಜಂಗಮ ಚಿಂತನಾ ರೂಪ ಯಶಸ್ವಿಯಾಗಿ ಮೈ ತಳೆದಿದೆ.
ಉಳ್ಳವರು ಶಿವಾಲಯ ಮಾಡುವ ಸ್ಥಾವರ ಧರ್ಮದ ವಿರುದ್ಧ ದೀನರ, ಬಲಹೀನರ, ಕೆಳವರ್ಗದ ಬಡಜನರ ಜಂಗಮ ಧರ್ಮವನ್ನು ಎತ್ತಿಹಿಡಿಯಲಾಗಿದೆ. ಅವೈದಿಕ ನಾಥಪಂಥ ಬಸವಣ್ಣನ ಈ ವಚನದಲ್ಲಿ ಮೈ ಪಡೆದು ಹನ್ನೆರಡನೆಯ ಶತಮಾನದಲ್ಲಿ ನಡೆದ ಚಳವಳಿಯ ಆಶಯಗಳನ್ನು ಬಿಂಬಿಸುವ ಸಾಮಾಜಿಕ ಪ್ರತಿಮೆಯಗಿ ಮೈ ತಳೆದಿದೆ.