ಮಂಗಳವಾರ, ಏಪ್ರಿಲ್ 23, 2013

ಮಗ ಆನಂದ ಬರೆದ ಕವಿತೆ

ಮೈಸೂರಿನ ರಿಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್ ನಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಎಡ್ ಕೋರ್ಸಿನ ಎಂಟನೆಯ ಸೆಮಿಸ್ಟರ್ ನಲ್ಲಿ ಅಧ್ಯಯನ ಮಾಡುತ್ತಿರುವ ನನ್ನ ಮಗ ಆನಂದ  ಕಳೆದ ತಿಂಗಳು ಕೊನೆಯ ವಾರದಲ್ಲಿ ಮನೆಗೆ ಬಂದಿದ್ದ. ಆ ಸಮಯದಲ್ಲಿ ಟಿವಿ ಚಾನೆಲ್‍ ಒಂದರಲ್ಲಿ ಅವನು ಈ ಮೊದಲು ಅರೆ ಬರೆಯಾಗಿ ನೋಡಿದ್ದ ಅಮೀರ್ ಖಾನನ ತಾರೇ ಜಮೀನ್ ಪರ್ ಸಿನಿಮಾ ಬರುತ್ತಿತ್ತು. ಈ ಸಾರಿಯೂ ಅವನಿಗಿದನ್ನು ಮೊದಲಿನಿಂದ ನೋಡಲು ಸಾಧ್ಯವಾಗಲಿಲ್ಲ. ಈ ಸಿನಿಮಾ ಕುರಿತು ಅವನ ಕುತೂಹಲ ಪೂರ್ತಾ ತಣಿಯದೆ ಇದ್ದುದರಿಂದ ಮಾರನೆಯ ದಿನ ಆತ ನೆಟ್ ನಲ್ಲಿ ಇಡಿಯಾಗಿ ನೋಡಿದ. ಆ ನಂತರ ಈ ಕೆಳಗಿನ ಸಾಲುಗಳನ್ನು ಬರೆದನಂತೆ. ಮಾರನೆಯ ದಿನ ಅವನು ಮರಳಿ ಮೈಸೂರಿಗೆ ಹೋಗಬೇಕಿತ್ತು. ಮಧ್ಯಾಹ್ನ ತನ್ನ ಬ್ಯಾಗು ಸಿದ್ಧ ಪಡಿಸಿಕೊಂಡ ನಂತರ ಈ ಪದ್ಯವನ್ನು ನನಗೆ ತೋರಿಸಿದ. ಹೇಗಿದೆ ಎಂದು ಕೇಳಿದ. ಇದನ್ನು ಓದಿದ ನನಗೆ ಅಡಿಗರ ನಿನಗೆ ನೀನೇ ಗೆಳೆಯ ಕವಿತೆ ನೆನಪಾಯಿತು. ಅವನು ಊರಿಗೆ ಹೋದ ಮೇಲೆ ಪದ್ಯ ಕಳಿಸು ಎಂದು ನಾನೇ ಕೇಳಿಕೊಂಡೆ. ಅವನು ಅದನ್ನು ಮತ್ತಷ್ಟು ತಿದ್ದಿ ನನಗೆ ಕಳಿಸಿಕೊಟ್ಟಂತೆ ಅನಿಸಿತು. ಅವನು ಶೃಂಗೇರಿಗೆ ಬಂದಿದ್ದ ಸಂದರ್ಭದಲ್ಲಿ ಎರಡು ಪದ್ಯ ಬರಹ ಮಾಡಿದ್ದ. ಮೈಸೂರಿನಲ್ಲಿ ಒಂದಷ್ಟು ಬರಹ ಮಾಡಿದ್ದ. ಹಾಗಾಗಿ ಅವನು ತನ್ನ ಐದು ರಚನೆಗಳನ್ನು ಕಳಿಸಿದ್ದ. ಅವುಗಳಲ್ಲಿ ಈ ಕೆಳಗಿನ ರಚನೆಗೆ ಒತ್ತಕ್ಷರವಿಲ್ಲದೆ ಬಳಸಿದ್ದ ಸಾಲಿನ ಕೊನೆಯ ಪದಗಳಿಗೆ ಒತ್ತಕ್ಷರ ಹಾಕಿ; ಅಲ್ಲಲ್ಲಿ ಅನಗತ್ಯವಾಗಿ ಅರ್ಧ ವಿರಾಮ ಚಿಹ್ನೆ ಬಳಸಿದ್ದ ಕಡೆ ತೆಗೆದು ಹಾಕಿ, ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಈಗ ನಿಮ್ಮ ಮುಂದಿರಿಸುತ್ತಿದ್ದೇನೆ.


 ಇರು ನಿನ್ನಂತೆ ನೀನು

ನೀನಾಗಿರು ನೀನು 
ನಿನಗೆ ತಿಳಿದಿಲ್ಲ ನಿನಗೆ ನೀನು
ಯೋಚಿಸಬೇಡ ಯಾಕೆ ಹೀಗೆಂದು

ಇರು ನೀನು ನಿನ್ನಂತೆ
ಅದೇ ತರುವುದು ನಿನಗೆ
ನಿನ್ನ ಛಾಪು

ಮುಚ್ಚಬೇಡ ನಿನ್ನ ಕದವ
ನಿನ್ನ ಆ ಯೋಚನಾ-ಲಹರಿ
ಮಾಡೀತು ನಿನ್ನನ್ನು ನಿನ್ನಂತೆ

ಆಲಿಸದಿರು ಬೆಣ್ಣೆಯ ಮಾತುಗಳನ್ನು
ಹೂಡು ಕೊಂಚ ಸಮಯ ನಿನ್ನಲ್ಲಿ
ಸರಿದಾರಿಯಲ್ಲಿ ಬೆಳೆಯುವಲ್ಲಿ
ತೋರಿಸು ಅದೇ ಆ ರಹದಾರಿ
ಯೋಚಿಸದವರಿಗೆ ಆ ಮೂಢರಿಗೆ

ಹಿಡಿಸದಿದ್ದರೆ ಪರವಾಗಿಲ್ಲ
ದೂರದ ಆ ಮಿಂಚಿನ ಕ್ಷಣಗಳು
ಬೇರೆಯವರು ಎಂದಿಗೂ ಬೇರೆಯವರೇ
ಅವರಾಗುವರು ಬೇರೆಯವರು
ಅವರದೇ ದಾರಿ ದಿಕ್ಕಿನಿಂದ

ಯಾಕದಕೆ ಬೇಸರ
ಖುಷಿ ಪಡು ನೀನು
ಅವರಂತಿಲ್ಲ ನಿನ್ನ ಆ ಏಕಾಂಗಿತನವೂ

ಬೆಲೆಕೊಡು ನಿನ್ನ ಇರುವಿಕೆಗೆ
ನಿನ್ನ ಏಕಾಕಿತನಕ್ಕೆ
ಬೆಳೆಸು ಹೆಮ್ಮರ ಎಂದಿಗೂ ಅಳಿಯದಂತೆ

ಎಲ್ಲರಂತಿರುವುದರಲ್ಲೇನಿದೆ ಸುಖ
ಯೋಚಿಸು ನೀನು ನಿನ್ನಂತೆ
ಬದುಕು ಬಾಳು ನಿನಗಿದೆ ನಿನ್ನದೆ ಹೊಸದಾರಿ
-ಆನಂದ