ಶನಿವಾರ, ಡಿಸೆಂಬರ್ 15, 2012

...............

ಬಂತು - ಎಡೆಬಿಡದೆ ಬಂತು
ಕತ್ತಲು ಬೆಳಕನ್ನು ಹಿಮ್ಮೆಟ್ಟಿ ನಿಂತು
ಕುರುಡು ಪ್ರೇಮದಲ್ಲಿ
ಕುಟುಕು ಮಳೆಯಲ್ಲಿ
ಜೋಡಿ ಹರೆಯದ ಹರುಷದಲ್ಲಿ

ಉಕ್ಕುಕ್ಕಿ ಬಂತು
ಮಲ್ಲಿಗೆ ಸಂಪಿಗೆ ತಾಳೆಗರಿಯಲ್ಲಿ
ಅಡಗಿ ಕುಂತು

ಮೈತಳೆದು ಬಂತು
ಮಣ್ಣಾಗಿದ್ದದ್ದು ಹೊನ್ನಾಗಿ
ವಿಷವಾಗಿದ್ದದ್ದು ರಸವಾಗಿ
ಹೂವಾಗಿದ್ದದ್ದು ಗಮಲಾಗಿ

ಅವರೆಕಾಯಿಯ ಸೊಗಡಾಗಿ
ಮಾವಿನ ಹಣ್ಣಿನ ಸಿಹಿಯಾಗಿ
ಬಯಸುವಂತೆ ಬಂತು
ಬಯಕೆಗಳನ್ನೆಲ್ಲ ತಂತು

oo

ಈ ರಚನೆಯನ್ನು ಸಂಕಲನದಲ್ಲಿ ಸೇರಿಸಿದಾಗ ಏನೊಂದೂ ಹೆಸರಿಸಲು ತಿಳಿಯದೆ ಹೆಸರೊಂದು ಇರಲೆಬೇಕೆಂಬ ಹಟದಲ್ಲಿ  `ಶ್ರಾವಣದ ಮಳೆ' ಎಂದು ಸೂಚಿಸಿದ್ದೆ. ಆದರೆ ಅದು ಸೂಕ್ತವೇನೂ ಆಗಿರಲಿಲ್ಲ. ಚಿಲುಮೆ ಎಂಬರ್ಥದ ಊಟಿ ಎಂಬ ಹೆಸರು ಹೆಚ್ಚು ಒಪ್ಪಬಹುದೆಂದು ಕಾಣುತ್ತದೆ. ಆದರೂ ಹೆಸರಿಲ್ಲದೆಯೆ ಇದು ಹೆಚ್ಚು ಅರ್ಥಪೂರ್ಣ ಅನಿಸಿತು. ಹಾಗಾಗಿ ಇದನ್ನು ಬರೆದಾಗ ಮೂಡಿದ ಸಾಲುಗಳನ್ನು ಯಾವ ಹೆಸರೂ ಸೂಚಿಸದೆ ನಿಮ್ಮ ಮುಂದಿಡುತ್ತಿದ್ದೇನೆ.