ಶನಿವಾರ, ಜೂನ್ 25, 2011

ನಿಗುರಿ ನಿಂತವರು

ನಾವು ನಿಮಗೆ ಸೋತು ಬಿದ್ದಿದ್ದೀವಿ
ಇಂಚಿಂಚು  ಮೈ ಇರಿಯುತ್ತೆ  ಉರಿಯುತ್ತೆ
ಆದ್ರೂ ನಮ್ಮನ್ನ ಶರಣಾಗತ ಮಾಡಿದ್ದೀರಿ
ನಮ್ಮನ್ನ ಜೀತಕ್ಕಿಟ್ಟು ಜೀವ ತೆಗಿತಿರಿ
                            ಅವಶೇಷ ಮಾಡ್ತೀರಿ

ನಮ್ಮ ರಕ್ತ ಇನ್ನೂ ರಕ್ತಿ ಆಗಿಲ್ಲ
ನಮ್ಮೆದೆ ಊದ್ಕೊಂಡು ಬೂದಿ ಆಗಿಲ್ಲ
ನಮ್ಮ ಮಖಾ ಮಣ್ಣಗಾಕಿ ತುಳಿತಿರಿ
ನಿಗುರಿ  ನಿಲ್ಲೊ ಮನಸ್ಸನ್ನ ತುಳಿಲಾರ್ರಿ
                          ತುಳ್ದು ಸಾಯ್ಸಲಾರ್ರಿ

ಯಾವತ್ತೂ ನಾವು ಕೈ ಹಾಕಿದ್ರೆ ಅಪಹಾಸ್ಯ ಮಾಡಿ
ಮೇರೆ ಮೀರಿ ಬೆಳೆಯೊ ಕೋಟೆ ಗೋಡೆ ನೀವು
ಯಾವತ್ತೂ ನಿಮ್ಮ ವಿರುದ್ಧ ರೋಷ ಇದ್ದೇ ಇದೆ
ಕೈಕಾಲು ಮುರ್ದು ಮೋರಿಗೆ ತಳ್ಳೊ ಹಕ್ಕಿದೆ
                         ನಿಮಗೇನಿದೆ? ನಿಮಗೆ?

ಏನಿದೆ ಅಂದ್ರೆ ಹೇನಿದೆ,ತೂಗು ಮಂಚ ಇದೆ
ಪೊಗದಸ್ತಾಗಿ ತಿರುಗಾಡೊ ಊಟ ಗೂಟ ಇದೆ
ಹಳಸಲು ತೇಗು ತೇಗಿಕೊಂಡು ಮಜಾ ಮಾಡ್ತೀರಿ
ಗನ್ನು ಲೋಡು ಮಾಡೋ ಜನ  ಇಟ್ಕೊಂಡಿದ್ದೀರಿ
                               ಆ ಜನ  ನಾವಿದ್ದೀವಿ

ನಿಮ್ಮ ಇತಿ ಹಾಸ್ಯ ಮಾಡೋಕೆ
ದುಡುಮಿ ಹಾಸಿಗೆ ಮಂಚಕ್ಕೆ ಕಿಡಿ ಹಾರ್ಸೋಕೆ
ಸಿಕ್ಕಿದ ಕುರ್ಚಿ ಎಳ್ಕೊಂಡು ಕೂರೋ
ನಿಮ್ಮದೇ ಜನ ನಾವು, ನಾವಿದ್ದೀವಿ
ನಮ್ಮ ಮುರೀಲಾಗದ ಮನಸ್ಸು ಇನ್ನೂ ಇದೆ
#

ಇಲ್ಲಿ ಅಸಹಾಯಕತೆ  ಇದೆ, ಹತಾಶೆಯಿದೆ, ಶೋಷಿತ ಭಾವನೆಯಿದೆ, ಸಿಟ್ಟು-ಸೆಡವು ಇದೆ. ವ್ಯವಸ್ಥೆಯ ವಿರುದ್ಧ ಮಡುಗಟ್ಟಿದ ಅವೆಲ್ಲವೂ ಮುಖ್ಯವಾಗಿ ಇಲ್ಲಿ ಸಿಟ್ಟಿನ ಅಭಿವ್ಯಕ್ತಿಯೆ.
ರನ್ನನ ಗದಾಯುದ್ಧದಲ್ಲಿನ `ಕೋಪಾರುಣನೇತ್ರಂ..ನೀರೊಳಗಿರ್ದುಂ ಬೆಮರ್ತನುರುಗಪತಾಕಂ'  ಎಂಬ ಈ ಸಾಲು ಸಿಟ್ಟಿನ ಅಭಿವ್ಯಕ್ತಿಗೆ ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧವಾದುದು.ಇಲ್ಲಿ ದುರ್ಯೋಧನನ ಗುಟ್ಟು  ಬಯಲಾಗಿದೆ. ಅವನು ಸಾವಿನ ಯುದ್ಧದ ಹಿಡಿತದಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿದೆ. ಪಾಂಡವರ ವಿರುದ್ಧದ ಸಂಪೂರ್ಣ ಸೋಲು ಸನಿಹದಲ್ಲಿದೆ. ದುರ್ಯೋಧನನ ಅಸಹಾಯ ಸ್ಥಿತಿ ಹೇಡಿತನವೆಂದು ವಿರೋಧಿಗಳ ಕಣ್ಣಲ್ಲಿ ಕಾಣಲಿದೆ. ಅಷ್ಟೇಅಲ್ಲ  ಇದರಿಂದ ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆಯನ್ನೂ ತೆರೆದಿಟ್ಟಿದೆ.ಒಂದು ಕಡೆ ಇಡೀ ರಾಜ್ಯ ಕೋಶ ಸೈನ್ಯ ಬಂಧು ಬಳಗ ಎಲ್ಲವೂ ನಾಶವಾಗಿದ್ದು ತನ್ನ ಯುದ್ಧದ ನಿರ್ಣಯವನ್ನು ಅಣಕಿಸುತ್ತದೆ. ನಗೆಯ ಗೆಲುವು ತನ್ನದಾಗುವ ಬದಲು ತನ್ನ ಶತ್ರುಗಳ ವಶವಾಗಲಿದೆ. ಎಲ್ಲವನ್ನು ಕಳೆದುಕೊಂಡ ಭೀಕರ ಹತಾಶೆಯೇ ಸಿಟ್ಟಿನ ರೂಪ ಪಡೆದಿದೆ. ಇಂಗ್ಲಿಶರು ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಕಳೆದುಕೊಂಡ ನಂತರ  ಒಳಗಾದ ಅಸಹನೀಯವಾದ ಮನಸ್ಥಿತಿಯ ವ್ಯಗ್ರತೆಯನ್ನು 'ಲುಕ್ ಬ್ಯಾಕ್ ಇನ್ ಆಂಗರ್' ನಾಟಕ ಕಟ್ಟಿಕೊಡುವಂತೆ ಈ ಸಾಲಿದೆ. ದುರ್ಯೋಧನನ ಈ ಮನಸ್ಥಿತಿಯನ್ನು ಬಣ್ಣಿಸಲು ರನ್ನ ಅನುಸರಿಸಿದ ಅಲಂಕಾರಿಕ ವಿಧಾನದ ಬಗ್ಗೆ ಇದುವರೆಗೂ ಚರ್ಚೆ ನಡೆದಂತೆ ಕಂಡಿಲ್ಲ. ತಣ್ಣನೆಯ ನೀರೊಳಗಿದ್ದೂ ಬೆವರುವಷ್ಟು ಕೋಪ ಬಂದಿತ್ತೆಂಬ ವರ್ಣನೆ ಕೋಪದ ಅಗಾಧತೆಯನ್ನು ಮನವರಿಕೆ ಮಾಡಿಕೊಟ್ಟರೂ ಅದು ಉತ್ಪ್ರೇಕ್ಷೆಯಿಂದ ಕೂಡಿದೆಯಲ್ಲವೆ?
ಎಡಪಂಥೀಯ ಸೆಕ್ಯುಲರ್ ಆಶಯದ `ಇಕ್ಕರ್ಲಾ ಒದಿರ್ಲಾ'ದಂಥ ಕವಿತೆಗಳು ಡಿ ಆರ್ ನಾಗರಾಜ ಅವರಿಗೆ ಉತ್ಪ್ರೇಕ್ಷೆಯಾಗಿ ಕಂಡಿದೆ. ಹಾಗಾಗಿಯೆ ಅವರು ದಲಿತ ಕವಿ ಸಿದ್ಧಲಿಂಗಯ್ಯನವರನ್ನು `ಉತ್ಪ್ರೇಕ್ಷಾಲಂಕಾರ ಚಕ್ರವರ್ತಿ!' ಎಂದು ಘೋಷಿಸಿದ್ದಾರೆ. ಆದರೆ ಜಡ್ಡುಗಟ್ಟಿದ ಶ್ರೇಣೀಕೃತ ಸಮಾಜ ವ್ಯವಸ್ಥೆಯ ವಿರುದ್ಧ ಎತ್ತಿದ ಆಕ್ರೋಶ ಸ್ವಭಾವೋಕ್ತಿಯಾಗಿರಬೇಕಿತ್ತಲ್ಲ, ಉತ್ಪ್ರೇಕ್ಷೆ ಏಕಾಯಿತು? ಹೇಗಾಯಿತು? ಸಿದ್ಧಲಿಂಗಯ್ಯ ತಮ್ಮ ಕವಿತೆಗಳ ಮೂಲಕ ಹಂಚಿಕೊಂಡಿರುವ ಅನುಭವ ಅವಾಸ್ತವವೆ? ಅಥವಾ ದಲಿತ ಕವಿ ದಲಿತರ ದನಿಯಾಗಿ ಉಳಿಯದೆ ಇರಲು ಕಾರಣವೆ? ನನಗೆ ಸ್ವಲ್ಪ ಗೊಂದಲ.
ಹಾಗಾಗಿ ಈಗ ನಿಮ್ಮ ಮುಂದಿಟ್ಟಿರುವ ಕವಿತೆಯ ಸ್ವರೂಪವೇನು? ಸ್ವಭಾವೋಕ್ತಿಯೇ? ಉತ್ಪ್ರೇಕ್ಷೆಯೆ? ಯಾವುದು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ