ಶುಕ್ರವಾರ, ಮೇ 20, 2011

ಆಡು

1986ರ `ಸೃಜನವೇದಿ' ಸಾಹಿತ್ಯ ಪತ್ರಿಕೆಯ ಸಂಚಿಕೆಯೊಂದರಲ್ಲಿ ನನ್ನ ಮೊದಲ ಸಂಕಲನವನ್ನು  ಅರವಿಂದ ನಾಡಕರ್ಣಿ ವಿಮರ್ಶೆ ಮಾಡಿದರು. ಆಗವರು ಈ ರಚನೆ ಕುರಿತು ವಿಶೇಷ ಪ್ರಸ್ತಾಪ ಮಾಡಿದ್ದಾರೆ. ಇದರ ಭಾವ ವಲಯಕ್ಕಿರುವ ಸಾಮಾಜಿಕ ಆಯಾಮವನ್ನು ಗುರುತು ಮಾಡಿ ಹೇಳುವ ಮೂಲಕ ಸಾಹಿತ್ಯಿಕ ನೆಲೆಯನ್ನು  ಹೆಚ್ಚು ಮುನ್ನೆಲೆಗೆ ತಂದಿದ್ದಾರೆ. ಹೀಗಿದು ಹಿರಿಯ ಕವಿ ಮಿತ್ರರ ಗಮನ ಸೆಳೆದ ರಚನೆಯಾಗಿದೆ. ಅನ್ಯ ವಿಮರ್ಶ ಸ್ವ ವಿಮರ್ಶೆಯೂ ಆಗಿರುವ ಎಚ್ಚರವನ್ನು ಉಂಟುಮಾಡುತ್ತಲೆ  ಸಾಮಾಜಿಕ ಯಜಮಾನಿಕೆಗೆ ಪ್ರತಿರೋಧವನ್ನು ತಾರ್ಕಿಕವಾಗಿ ಮಂಡಿಸಿದೆ. ಇದು ನಿಮಗೂ ಇಷ್ಟವಾಗಬಹುದು ಎಂದು ಇಲ್ಲಿ ಮತ್ತೆ  ಮುಂದಿರಿಸುತ್ತಿದ್ದೇನೆ.
#


ಆಡು: ಮಾತು ಆಟ ನಗೆ
ಆಡು ನಿನ್ನ ನೀ ತೋರುತ್ತ
ಬೇರೆಯವರ ಅಳೆಯುತ್ತ


ಅಳತೆಗೆ ಸಿಕ್ಕಿದ್ದೇ ಸಾಕೆಂದು
ಪ್ರಾಣಿ ಚಿಕ್ಕದೋ ದೊಡ್ಡದೋ
ಅಳತೆ ಗೋಲನ್ನೇ ಲಾಠಿ ಮಾಡುತ್ತಿ ಯಾಕೆ?


ನಿನ್ನಳತೆ ಗೋಲೇ ಇರಬಹುದು
ಚಿಕ್ಕದು ದೊಡ್ಡದು - ಅದಕೆ
ಅದರ ಜಾಗ ತೋರಿಸಿರುವೆ ಏನು?


ಅಳತೆ ನಿನ್ನಳತೆ ಗೋಲಿಗೆ
ಯಾವುದೆಂದು ತಿಳಿದೆಯಾ?
ಅದೇ ನಿನ್ನಳೆವ ಕೋಲು ಕೂಡ!


ಬ್ರೂಸ್ಲಿಯ ಕರಾಟೆ ಕೈ ಚಳುಕಿಗೆ
ಮಹಮದಾಲಿಯ ಬಿಗಿ ಮುಷ್ಟಿಗೆ
ಮರೆತೆಯಾ ನಿನ್ನಾಟಿಕೆ?


ಕಾಲ್ಕೆರೆದು ಹಾತೊರೆಯುವ
ಮಿಂಚಿನ ಈರ್ಷ್ಯೆ ಸುಳಿಸುವ
ಕರೆಯೋಲೆ ಇದು ಕರೆಯೋಲೆ!


ಆಡು: ಮಾತು ಆಟ ನಗೆ
ಗುಣಿಸಿದ್ದು ಕೂಡಿ ಕಳೆದರೂ
ಗಣಿಕೆಯಾಗದ ಲೆಕ್ಕವಾಡು


ಅವರವರ ಶಕ್ತಿಗೆ ತಕ್ಕಷ್ಟು ದಾರಿ
ಯಾವತ್ತು ತೆರೆದು ಇದ್ದೇ ಇರುತ್ತೆ.
ನಿನ್ನ ಬೀದಿಯ ಹೆಸರು ಕುಲ ನೋಡು




'ಗಿಣ್ಣು' ಕವನ ಸಂಕಲನದಿಂದ

2 ಕಾಮೆಂಟ್‌ಗಳು:

  1. ಸರ್,

    ಕವನದ ಆಶಯ ನಂಗೆ ಅಶ್ಟಾಗಿ ಗೊತ್ತಾಗ್ತಿಲ್ಲ. ಆದ್ರೆ, ಲಯವಂತೂ ಚೆನ್ನಾಗಿದೆ. ಹೀಗೆ ಬರೀತಾ ಇರಿ. ಆಮೇಲೆ, "ಬೆಳಕಿನ ಕಲ್ಲು" ಅಂತ ನಿಮ್ಮ ಬ್ಲಾಗಿಗೆ ಹೆಸರಿಟ್ಟಿದ್ದೀರಲ್ಲ ಯಾಕೆ ತಿಳಿಸ್ತೀರಾ?

    ಪ್ರತ್ಯುತ್ತರಅಳಿಸಿ
  2. ಅನುಭವದಿಂದ ಹುಟ್ಟಿದ ಹಲವು ಮನಸ್ಸುಗಳ ಭಾವ ಮತ್ತು ವಿಚಾರಗಳು ಪರಸ್ಪರ ಪ್ರತಿಫಲನಗೊಂಡು ಯಾವುದೊ ಒಂದು ಮನಸ್ಸಿನಲ್ಲಿ ಹರಳುಗಟ್ಟಿದ ರೂಪವೇ ಬರೆಹ. ವಜ್ರ ಕಣ್ಣು ಕೋರೈಸುವಂತೆ ಜಗ್ಗನೆ ಬೆಳಕು ಚಿಮ್ಮಿ ಸುತ್ತಲ ಪರಿಸರವನ್ನು ಬೆಳಗಿಸುವ ರೀತಿಯೂ ಇದೇ ಬಗೆಯದು. ಬೆಳಕಿನ ಕಲ್ಲು ಎಂಬುದು ವಜ್ರದ ಮತ್ತೊಂದು ಅಭಿವ್ಯಕ್ತಿ ರೂಪ ಅಷ್ಟೆ.

    ಪ್ರತ್ಯುತ್ತರಅಳಿಸಿ