ಗುರುವಾರ, ಮೇ 26, 2011

ಮಾಸ್ತಿಯವರದೊಂದು ಕತೆ ಕುರಿತು ಟಿಪ್ಪಣಿ

1994ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನಲ್ಲಿ `ಅನ್ಯಜ್ಞಾನಶಿಸ್ತುಗಳ ಮೂಲಕ ಕನ್ನಡ ಸಾಹಿತ್ಯ' ಎಂಬ ಕಮ್ಮಟವನ್ನು ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಿದ್ದ ನಾನು ಮನಶಾಸ್ತ್ರ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಟಿಪ್ಪಣಿಯೊಂದನ್ನು ಸಿದ್ಧಪಡಿಸಿದ್ದೆ. ನಂತರ ಅಕಾಡೆಮಿ ಕಮ್ಮಟ ಕುರಿತು ಪ್ರಕಟಿಸಿದ ಪುಸ್ತಕದಲ್ಲಿ ಸೇರಿಕೊಂಡಿತು. ಅದನ್ನಿಲ್ಲಿ  ತುಸು ಬದಲಾವಣೆಯೊಂದಿಗೆ ಮತ್ತೆ ನಿಮ್ಮ ಮುಂದಿರಿಸುತ್ತಿದ್ದೇನೆ. 
#

ಮಾಸ್ತಿ ಅವರ `ಗೌತಮಿ ಹೇಳಿದ ಕತೆ' 

ಈ ಕತೆಯ ವಿನ್ಯಾಸ ಗೌತಮಿ ನಿರೂಪಿಸುವ ಕತೆಯ ಹಿಂದೆ ಕೆಲಸ ಮಾಡುವ ನಿರೂಪಕಿಯ ಮನಸ್ಸನ್ನು ಚಿತ್ರಿಸುತ್ತದೆ. ಗೌತಮಿ ಕತೆ ನಿರೂಪಿಸಲು ಪ್ರೇರಿತಳಾಗಿದ್ದಾಳೋ ಇಲ್ಲವೆ ಪ್ರೇರಕ ಸ್ಥಾನದಲ್ಲಿ ನಿಂತು ಕತೆ ಹೇಳುತ್ತಿದ್ದಾಳೋ ನಿರ್ದಿಷ್ಟವಾಗಿ ಕಂಡುಕೊಳ್ಳುವುದು ಸುಲಭವಲ್ಲ ಎನ್ನುವ ಹಾಗೆ ಕತೆಯನ್ನು ಮಾಸ್ತಿ ಹೆಣೆದಿದ್ದಾರೆ.

ಶಕುಂತಲೆ ತನ್ನ ಮಗು ಭರತನೊಂದಿಗೆ ಆಶ್ರಮಕ್ಕೆ ಭೇಟಿ ನೀಡಿದ್ದಾಳೆ ಎನ್ನುವ ಒತ್ತಿನೊಂದಿಗೆ ಕತೆ ಆರಂಭವಾಗುತ್ತದೆ. ಆ ಕಾಲಕ್ಕೆ ಅವಳ ಸಖಿಯರಾದ ಅನಸೂಯ ಮತ್ತು ಪ್ರಿಯಂವದೆಯರಿಗೂ ಮದುವೆಯಾಗಿದೆ. ಅವರೂ ಮಕ್ಕಳನ್ನು ಪಡೆದು ತಾಯಂದಿರಾಗಿದ್ದಾರೆ. ಒಂದು ಕಡೆ ಶಕುಂತಲೆಯ ಬದುಕು ಸಂಸಾರದ ನೆಲೆಯಲ್ಲಿ ಎದುರಿಸಿದ ಎಲ್ಲ ಬಗೆಯ ಗಂಡಾಂತರಗಳನ್ನು ಕಂಡಿದ್ದರೂ ಅದನ್ನು ದಾಟಿದೆ, ಎಂದೋ ನಿರಾತಂಕ ಸ್ಥಿತಿಯನ್ನು ತಲುಪಿದ್ದು ನಿರಾಳತೆಯಿಂದ ಸಾಗುತ್ತಿದೆ.  ಮತ್ತೊಂದೆಡೆ ಅವಳ ಸಖಿಯರೂ ಅಶ್ರಮದ ಹೆಣ್ಣುಮಕ್ಕಳೂ ಆದ ಅನಸೂಯ ಮತ್ತು ಪ್ರಿಯಂವದೆಯರ ಬದುಕು ಹಾದಿ ತಪ್ಪದೆ ಸುಭದ್ರ ಸ್ಥಿತಿಯನ್ನು ಮುಟ್ಟಿದೆ. ಮುದುಕಿಯಾಗಿರುವ ಗೌತಮಿ, ಶಕುಂತಲೆ ಮತ್ತು ಅವಳ ಸಖಿಯರಂತೆ ಆಶ್ರಮಕ್ಕೆ ಅನಾಥ ಮಕ್ಕಳಂತೆ ಬಂದಿದ್ದು ಇವರೆಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಏರು ಪೇರು ಕಂಡವರೇ ಅಗಿದ್ದಾರೆ. ಅಲ್ಲದೆ ಕತೆ ಜರುಗುವ ಹೊತ್ತಿಗೆ ಸಂತೃಪ್ತ ಬದುಕಿನ ನೆಲೆಯನ್ನು ತಲುಪಿದ್ದಾರೆ.  ಗೌತಮಿ ಸಂತಸದ ಮನಸ್ಥಿತಿಯಲ್ಲಿದ್ದಾಳೆಂದು ಕತೆಯ ಮೊದಲ ಹಂತದಲ್ಲಿ ವಿವರಣೆ ದೊರಕುತ್ತದೆ. ಆಕೆಯ ಮನಸ್ಥಿತಿಗೆ ಶಕುಂತಲೆ ಆಶ್ರಮಕ್ಕೆ ಭೇಟಿ ನೀಡಿರುವುದು ಅಥವಾ ಶಕುಂತಲೆಯ ಬದುಕಿನ ಹಿನ್ನೆಲೆಯಲ್ಲಿ ತನಗೆ ತನ್ನದೆ ಕತೆ ನಿರೂಪಿಸಲು ಸಂದರ್ಭ ಒದಗಿರುವುದು ಕಾರಣವಿರಬಹುದು. ಶಕುಂತಲೆ ದುಷ್ಯಂತನನ್ನು ವರಿಸಿ ಹೋದಮೇಲೆ ಗೌತಮಿ ಅನಸೂಯ ಮತ್ತು ಪ್ರಿಯಂವದೆಯರಿಗೆ ಒತ್ತಾಯ ಮಾಡಿ ಮದುವೆಗೆ ಒಪ್ಪಿಸಿರುತ್ತಾಳೆ. ಗೌತಮಿ ತಾನೇಕೆ ಹಾಗೆ ನಡೆದುಕೊಂಡೆನೆಂದು ಹೇಳಲು ಶಕುಂತಲೆಯ ಸಖಿಯರಿಗೆ ಕತೆಯ ಮೂಲಕ ವಿವರಿಸತೊಡಗುತ್ತಾಳೆ. ಈ ಕತೆಯನ್ನು ಗೌತಮಿ ಈ ಮೊದಲೆ ಬೇರೆ ಯಾವ ಸಂದರ್ಭದಲ್ಲಿಯಾದರೂ ಹೇಳಬಹುದಿತ್ತು. ಆದರೆ ಆಕೆ ಹೇಳಿರಲಿಲ್ಲ. ಬದುಕಿನಲ್ಲಿ ತೊಡಕನೆದುರಿಸಿದ ಅಸ್ಥಿರ ಘಟ್ಟದಿಂದ ಎಲ್ಲ ಪಾತ್ರಗಳು ಮೇಲೆ ಬಂದು ನೆಮ್ಮದಿಯ ಸ್ಥಿತಿಯಲ್ಲಿರುವುದು ಗೌತಮಿ ನಿರೂಪಿಸುವ ಕತೆಯನ್ನು ಎಲ್ಲ ಪಾತ್ರಗಳೂ ನಿರ್ಲಿಪ್ತವಾಗಿ ದೂರದಿಂದ ನೋಡಲು ಮತ್ತು ಸ್ವೀಕರಿಸಲು ಸಾಧ್ಯವಾಗುವ ಮಾನಸಿಕ ವಾತಾವರಣ ರೂಪಿಸಲು ಕಾರಣವಾಗಿದೆ. ಇಂತಹ ಸ್ಥಿತಿಯಲ್ಲೂ ಗೌತಮಿ ತನ್ನ ಕತೆಯನ್ನು ಮತ್ತೊಬ್ಬರ ಕತೆಯಂತೆ ನಿರೂಪಿಸುತ್ತಾಳೆ.

ಅನಾಥೆಯಾಗಿ ಬಂದು ಸೇರಿದ್ದ ಆಶ್ರಮದ ಮತ್ತೊಬ್ಬ ಹುಡುಗಿ ಮಾಲಿನಿಯ ಕತೆಯೆಂಬಂತೆ ಗೌತಮಿ ತನ್ನ ಕತೆಯನ್ನು ಹೇಳುತ್ತಾಳೆ. ಒಂಬತ್ತು ಹತ್ತು ವರುಷದ ಮಾಲಿನಿ ಆಶ್ರಮದ ಮುಕ್ತ ವಾತಾವರಣದಲ್ಲಿ ಗಂಡು ಹೆಣ್ಣು ಎಂಬ ಭೇದಭಾವದ ಅರಿವಿಲ್ಲದೆ ತನ್ನ ಓರಗೆಯ ಹುಡುಗರಾದ ಭಾರದ್ವಾಜ ಮತ್ತು ದತ್ತ ಕಶ್ಯಪರೊಡನೆ ಬೆರೆತು ಬೆಳೆಯುತ್ತಾಳೆ. ಮದುವೆಯ ಮಾತಿಗೆ ಅವಳು ಸಮರ್ಥನೂ ಬಲಿಷ್ಟನೂ ಆಗಿ ಕಂಡುಬಂದಿದ್ದ ಭಾರದ್ವಾಜನ ಕಡೆಗೆ ಒಲಿಯುತ್ತಾಳೆ. ಒಮ್ಮೆ ಹೊಳೆಯ ಪ್ರವಾಹದಲ್ಲಿ ಈಜುತ್ತಿದ್ದ ಭಾರದ್ವಾಜ ಆಕಸ್ಮಿಕವಾಗಿ ತೇಲಿ ಬರುತ್ತಿದ್ದ ಮರಕ್ಕೆ ಸಿಲುಕಿ ಸಾಯುತ್ತಾನೆ. ಭಾರದ್ವಾಜನ ಸಾವಿನಿಂದ ತನ್ನ ಬದುಕು ದಿಕ್ಕು ಕೆಟ್ಟಿದ್ದನ್ನು ಅರಿತ ಮಾಲಿನಿ ಒಂದು ದಿನ ಹೊಳೆಗೆ ಹಾರುತ್ತಾಳೆ. ಹೊಳೆಯ ತುಂಬು ನೀರಿನಿಂದ ಅವಳನ್ನು ದತ್ತ ಹೊರಹಾಕುತ್ತಾನೆ. ಅಲ್ಲಿಂದ ಅವಳ ಮನಸ್ಸು ದತ್ತನನ್ನು ಪಡೆಯಲು ಹವಣಿಸುತ್ತದೆ. ಅರಿವಿಲ್ಲದೆ ಭಾರದ್ವಾಜನಲ್ಲಿ ಪಡೆದುಕೊಂಡದ್ದನ್ನು ಮಾಲಿನಿ ಅವನ ಸಾವಿನಿಂದ ಇದ್ದಕ್ಕಿದ್ದ ಹಾಗೆ ಕಳೆದುಕೊಂಡ ಮೇಲೆ ತನ್ನ ಜೀವನದ ಆಧಾರವನ್ನೆ ತಾನು ಕಳೆದುಕೊಂಡೆನೆಂದು  ಹೊಳೆಗೆ ಹಾರಲು ಹೊರಡುತ್ತಾಳೆ. ನಂತರ ತನ್ನ ಜೀವ ಉಳಿಸಿದ ದತ್ತನಲ್ಲಿ ತನ್ನ ನೆಚ್ಚಿನ ಜೀವವನ್ನು ತಣಿಸಿ, ತನಗೆ ಬದುಕು ಕೊಡುವ ಗಂಡನನ್ನು ಕಾಣುತ್ತಾಳೆ. ದತ್ತನನ್ನು ಬಯಸಿ ತನ್ನವನನ್ನಾಗಿ ಪಡೆಯಲು ಪ್ರಯತ್ನಿಸುತ್ತಾಳೆ. ಆಶ್ರಮದ ಮುಂದಣ ಕುಲಪತಿಯಾಗಲಿರುವ ದತ್ತ ತಾನು ಪತಿತನಾಗಬಾರದೆಂಬ ಮನಸ್ಥಿತಿ ಅವನದಾಗಿತ್ತೆಂದೂ ಆದರೆ ಅವನಲ್ಲಿ ಮಾಲಿನಿ ಕುರಿತು ಸುಪ್ತ ಬಯಕೆಯಿತ್ತೆಂದೂ ಗೌತಮಿ ಚಿತ್ರಿಸುತ್ತಾಳೆ. ಇಂಥ ಮನಸ್ಥಿತಿಯಲ್ಲಿದ್ದ ದತ್ತನ ತಲೆಯನ್ನು ತನ್ನ ಎದೆಯ ಬಳಿ ಸೆಳೆದುಕೊಳ್ಳಲು ಮಾಲಿನಿ ಕೈ ಚಾಚುತ್ತಾಳೆ. ಆಗ ದತ್ತ ಕಶ್ಯಪ ದಂಡದಂತೆ ನೆಲದ ಮೇಲೆ ಬಿದ್ದು ಅವಳ ಕಾಲುಗಳೆರಡನ್ನೂ  ತನ್ನೆರಡು ಕೈಗಳಿಂದ ಹಿಡಿದು ಅವಳಿಗೆ ಶರಣಾಗತನಾಗಿ ಅಂಗಲಾಚಿ ದೈನ್ಯದಿಂದ ತನ್ನನ್ನು ಕಾಪಾಡಲು ಬೇಡಿಕೊಳ್ಳುತ್ತಾನೆ. ದತ್ತ ಮಾಲಿನಿಗೆ ತನ್ನ ತೋಳನಲ್ಲಿ ಅಪ್ಪಿ ಹಿಡಿಯಬೇಕಾದವನು ಆಗಿದ್ದ. ಆದರೆ ಆತ ನಿಸ್ಸಹಾಯಕ ಬಾಲಕನಂತೆ ಕಾಪಾಡಲು ಅವಳನ್ನು ಬೇಡಿದಾಗ ಆಕೆ ತಾಯಿಯಂತೆ ಅವನನ್ನು ಕಾಣಲು ತೊಡಗುತ್ತಾಳೆ.  ಮಾಲಿನಿಯೇ ಗೌತಮಿ, ದತ್ತ ಕಶ್ಯಪನೇ ಕಣ್ವ ಮಹರ್ಷಿಯೆಂದು ಕತೆಯ ಕೊನೆಯ ಹಂತದಲ್ಲಿ ಪಾತ್ರಗಳ ಪರಸ್ಪರ ಮಾತುಕತೆಯ ಮೂಲಕ ತಿಳಿದುಬರುತ್ತದೆ.

ಈ ಕತೆಯ ನಿರೂಪಕಿ ಮತ್ತು ಕೇಂದ್ರ ಪಾತ್ರಧಾರಿ ಗೌತಮಿಯೇ ಅಗಿದ್ದು ಅವಳ ಕಣ್ಣುಗಳಿಂದ ಗ್ರಹಿಸಿದ ಕತೆಯಂತೆ ಮಾಸ್ತಿ ಕತೆ ಮಂಡಿಸಿದ್ದಾರೆ. ಕತೆಯ ಪ್ರಾರಂಭದಲ್ಲಿ ವಿವರಿಸಲಾಗಿರುವ ಆಕೆಯ ಸಂತಸ,  ಕೇವಲ ಕತೆ ಹೇಳಿಕೊಳ್ಳುವುದರಲ್ಲಿ ಕಾಣುವ ಹಂತವೋ ಅಥವಾ ಆಕೆ ತನ್ನ ಕತೆಯ ಮೂಲಕ ತನ್ನ ಕಣ್ಣ ಮುಂದಿನ ಹೆಣ್ಣುಮಕ್ಕಳಿಗೆ ಹೀಗಾಗಬಾರದು ಎಂಬ ನೀತಿಕತೆ ಹೇಳುವ ಸ್ಥಿತಿಯೋ ಇಲ್ಲವೆ ಸಕುಂತಲೆಯ ಬದುಕಿನ ಹಿನ್ನೆಲೆಯಲ್ಲಿ ತನ್ನ ಜೀವನ ಅರಿಯಲು ಕತೆಯನ್ನು ಹೆಣೆದ ಮನಸ್ಥಿತಿಯೋ, ಹೇಗೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾರದಷ್ಟು ಕತೆ ಸಂಕೀರ್ಣವಾಗಿದೆ. ಆದರೂ ಮಾಸ್ತಿಯವರ ಈ ಕತೆ ಒಬ್ಬರಿಗೊಬ್ಬರು ಎದುರಾದಾಗ ಮತ್ತೊಬ್ಬರ ಮೂಲಕ ತನ್ನನ್ನು ಕಂಡುಕೊಳ್ಳಬಹುದಾದ ಮಾನಸಿಕ ಸ್ಥಿತಿಯನ್ನು ಚಿತ್ರಿಸುವ ಚೌಕಟ್ಟಿನಲ್ಲಿದೆ.  




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ