ಕಾಡುಗೊಲ್ಲ ಸಮುದಾಯದ ಮೊದಲ ಸಾಂಸ್ಕೃತಿಕ ವೀರ ಎತ್ತಪ್ಪ. ಅತನ ಆಶಯವನ್ನು ನಂತರದಲ್ಲಿ ಜುಂಜಪ್ಪ ಮುನ್ನಡೆಸಿದ್ದಾನೆ. ಕಾಡುಗೊಲ್ಲ ಸಮುದಾಯದಲ್ಲಿ ಇವರ ಕುರಿತು ಹೇಳುವ ಕತೆಗಳು, ಹಾಡುಗಳು, ಗಣೆಕಾವ್ಯಗಳು ಈ ಸಾಂಸ್ಕೃತಿಕ ವೀರನನ್ನು ಪರಿಚಯ ಮಾಡಿಕೊಟ್ಟಿವೆ. ಎತ್ತಪ್ಪನ ಕುರಿತ ಬರಹ ನಾಲ್ಕು ಭಾಗಗಳಲ್ಲಿವೆ.
1. ಶಿವನ ಕೃಪೆಯಿಂದ ಎತ್ತಪ್ಪ ಹಾಗೂ ಆತನ ಸಹಚರ ಮಾರಮುತ್ತಪ್ಪನ ಜನನ. ತುಪ್ಪಾಡಿ ಕಾವಲಿನಲ್ಲಿ ದನ ಮೇಯಿಸಿದ ಎತ್ತಪ್ಪ ಮೇಲುವರ್ಗದ ಆರ್ಥಿಕ ರಾಜಕಾರಣದ ಪರಿಣಾಮವಾಗಿ ಸಂಡೂರು ಕಾವಲಿನಲ್ಲಿ ಸೆರೆ ಬೀಳುವಂತೆ ಮುನಿಗಳಿಂದ ಶಾಪ ಪಡೆಯುವುದು. ಕಳ್ಳಮಡಗು ಕಾವಲಿನಲ್ಲಿ ಸ್ನಾನ ಮಾಡುತ್ತಿದ್ದ ದೇವಕನ್ನಿಕೆಯರೊಂದಿಗೆ ಎತ್ತಪ್ಪ ತುಂಟಾಟ ಆಡುವುದು. ಸಂಡೂರು ಕಾವಲಿನ ಬೇಡರು ಎತ್ತಪ್ಪನ ತಲೆ ತೆಗೆಯಲೆಂದು ಬಸುರಾದ ದೇವಕನ್ನಿಕೆಯರು ಶಾಪ ನೀಡುವುದು.
2. ಎತ್ತಪ್ಪನ ಮದುವೆ. ಕಾಡುಗೊಲ್ಲ ಸಮುದಾಯದ ಪಶುಪಾಲನ ವೃತ್ತಿಯ ಪಾವಿತ್ರ್ಯತೆಯನ್ನೂ ಆ ವೃತ್ತಿಯ ಆರ್ಥಿಕ ಭದ್ರತೆಯನ್ನೂ ಆತ ರೂಪಿಸುವುದು. ಬೇಡ ಬುಡಕಟ್ಟು ಸಮುದಾಯಗಳಿಂದ ಕಾಡುಗೊಲ್ಲರ ಸ್ವಂತಿಕೆಗೆ ಎದುರಾದ ಸವಾಲುಗಳನ್ನು ಗೆಲ್ಲುವುದು. ತನ್ನನ್ನು ಮೋಹಿಸಿ ಬಂದ ಬೇಡ ನಾರಿಯರನ್ನು ಎತ್ತಪ್ಪ ಓಡಿಸುವುದು. ಅವನನ್ನು ಬೇಡರ ಗುಡ್ಡದ ಬೋರಿ ಹಿಂಬಾಲಿಸುವುದು. ವೈರಿಗಳು ಎಸೆದ ಸವಾಲನ್ನೊಪ್ಪಿಕೊಂಡು ಅವರನ್ನು ಪಗಡೆಯಾಟದಲ್ಲಿ ಎತ್ತಪ್ಪ ಸೋಲಿಸುವುದು.
3. ಪಶುಪಾಲಕ ಎತ್ತಪ್ಪ ರಾಸುಗಳಿಗೆ ಹುಲ್ಲು ನೀರು ಅರಸುತ್ತ ಸಂಡೂರು ಕಾವಲಿಗೆ ಪಯಣ ಮಾಡುವುದು. ಮಡದಿ ಮಲ್ಲಮ್ಮಳಿಗೆ ತನ್ನ ಜೀವಿತದ ಕುರುಹು ತಿಳಿಸುವುದು. ಗುಡ್ಡದ ಬೋರಿಯ ಕಾಮದ ಬೇಡಿಕೆಯನ್ನು ತಳ್ಳಿಹಾಕುವುದು. ನಿರಾಶಳಾದ ಬೋರಿ ಸಂಡೂರು ಬೊಮ್ಮನನ್ನು ಎತ್ತಪ್ಪನ ವಿರುದ್ಧ ಎತ್ತಿಕಟ್ಟುವುದು.
4. ಗುಡ್ಡದ ಬೋರಿ ಎತ್ತಪ್ಪನ ವಿರುದ್ಧ ದ್ವೇಷ ಸಾಧನೆ ಮಾಡುವುದು. ಎತ್ತಪ್ಪನ ಸೆರೆ ಹಿಡಿಯಲು ಸಂಡೂರು ಬೊಮ್ಮನಿಗೆ ದಾಸಪ್ಪ ಸಹಾಯ ಮಾಡುವುದು. ಮಾರ ಮುತ್ತಣ್ಣನ ಎಚ್ಚರಿಕೆ ಕಡೆಗಣಿಸಿ ಸಂಡೂರು ಕಾವಲು ಪ್ರವೇಶಿಸಿದ ಎತ್ತಪ್ಪ ವೈರಿಗಳಿಗೆ ಸೆರೆ ಸಿಕ್ಕಿ ಶಿಕ್ಷೆ ಅನುಭವಿಸುವುದು. ಗುಡ್ಡದ ಬೋರಿಯ ಅಪೇಕ್ಷೆಯಂತೆ ಸಂಡೂರು ಬೊಮ್ಮ ದಾಸಯ್ಯನ ಮೂಲಕ ಯತ್ತಪ್ಪನ ತಲೆ ಕತ್ತರಿಸುವುದು.
ಈ ಕಥಾನಕದಲ್ಲಿ ಮುಖ್ಯವಾಗಿ ನಿರೂಪಿತವಾಗಿರುವ ಈ ಸಂಗತಿಗಳು - ಎತ್ತಪ್ಪ ಕಾಡುಗೊಲ್ಲ ಸಮುದಾಯದ ಆರ್ಥಿಕ ಬುನಾದಿಯನ್ನು ಭದ್ರಗೊಳಿಸಿದವನು; ಆ ಮೂಲಕ ಆ ಜನಾಂಗವನ್ನು ಸುಸ್ಥಿತಿಗೆ ಮತ್ತು ಬೆಳವಣಿಗೆಯ ಜಾಡಿಗೆ ತರಲು ಪ್ರಯತ್ನ ಮಾಡಿದವನು ಎಂದೇ ಬೋಧಿಸುತ್ತವೆ. ಈ ಉದ್ದೇಶ ಸಾಧನೆಗೆಂದೆ ಎತ್ತಪ್ಪನ ಜನನವಾಯಿತೆಂಬುದು ಕತೆಯ ನಿರೂಪ. ಈ ಅಂಶ ಕಾಡುಗೊಲ್ಲ ಸಮುದಾಯ ತನ್ನ ಆರಂಭಿಕ ಹಂತದಲ್ಲಿ ಅಂದರೆ, ಎತ್ತಪ್ಪನ ಕಾಲದಲ್ಲಿ ಎದುರಿಸುತ್ತಿದ್ದ ಬಡತನದ ಹೀನಸ್ಥಿತಿಯನ್ನು ಸೂಚಿಸುತ್ತದೆ. ತನ್ನ ಜನಾಂಗದ ಏಳಿಗೆಗೆ ದುಡಿದ ಎತ್ತಪ್ಪನಿಗೆ ಬೇಡ ಮಹಿಳೆಯರು ಮತ್ತು ಬೇಡ ನಾಯಕರು ವೈರಿಗಳಾಗಿ ಎದುರು ನಿಲ್ಲವರು. ಆದರೂ ಮೇಲುವರ್ಗದ ಮುನಿ ಮತ್ತು ದೇವಕನ್ನಿಕೆಯರು ಅವನ ವಿರುದ್ಧ ದ್ವೇಷ ಸಾಧಿಸುವರು. ಶ್ರಮಹೀನ ವೃತ್ತಿ ಸಮುದಾಯದ ಮುನಿಗಳು ತಮ್ಮ ಸುತ್ತಲ ಪ್ರದೇಶದ ಮೇಲಿನ ತಮ್ಮ ಆಜನ್ಮ ಅಧಿಕಾರವನ್ನು ಆಧರಿಸಿ, ತಮ್ಮ ಪ್ರದೇಶದಲ್ಲಿ ಬೆಳೆದ ಹಸಿರು ಮೇಯುವ ರಾಸುಗಳ ಉತ್ಪನ್ನದ ಮೇಲೂ ತಮ್ಮ ಹಕ್ಕು ಸ್ಥಾಪಿಸುವರು. ಮುನಿಗಳ ಶ್ರೇಷ್ಟತೆ ಕಲ್ಪನೆಯ ಮೂಲಕವೆ ಎತ್ತಪ್ಪ ತನ್ನ ಆರ್ಥಿಕ ಹಕ್ಕಿಗೆ ಎದುರಾದ ಆತಂಕವನ್ನು ನಿವಾರಿಸಿಕೊಳ್ಳುವನು. ಬಂಡವಾಳ ಸಾಮ್ರಾಜ್ಯಶಾಹಿ ಪ್ರವೃತ್ತಿಯಲ್ಲಿ ಮುನಿಗಳು ತಮ್ಮ ಸಂಪರ್ಕಕ್ಕೆ ಬಂದವರೆನ್ನೆಲ್ಲ ಆವರಿಸಿಕೊಳ್ಳುವರು. ಇಂಥ ಕ್ರಮಕ್ಕೆ ತಡೆಯೊಡ್ಡುವ ಎತ್ತಪ್ಪ ಆರ್ಥಿಕ ಶೋಷಣೆಯನ್ನೂ ಅದರಿಂದ ತನಗೆ ಉಂಟಾಗುತ್ತಿದ್ದ ನಷ್ಟವನ್ನೂ ತಪ್ಪಿಸಿಕೊಳ್ಳುವನು. ಶ್ರಮ ದುಡಿಮೆಯ ಹಾದಿ ಕಾಣದ ಮುನಿಗಳು ಇದರಿಂದ ಕುಪಿತರಾಗುವರು. ತಮ್ಮ ಕುಟಿಲ ನೀತಿಗೆ ಸೋಲುಣಿಸಿ ಎದುರಾದ ಎತ್ತಪ್ಪನನ್ನು ನಿರ್ನಾಮ ಮಾಡಲು ನಿರ್ಧರಿಸಿ ಶಾಪ ನೀಡುವರು. ಶಾಪ ಅವರ ಆ ಸಂದರ್ಭದ ಕೇವಲ ಕ್ರೋಪೋದ್ರಿಕ್ತ ಮಾತುಗಳಾಗಿರದೆ ದ್ವೇಷ ಸಾಧನೆಯ ಮೂಲ ಮಂತ್ರವಾಗಿದೆ. ಮುನಿ ಶಾಪದ ಮುಂದುವರೆದ ರೂಪವಾಗಿರುವ ದೇವ ಕನ್ನಿಕೆಯರ ಶಾಪ ಗ್ರಾಮ ದೇವತೆಗೆ ಸಂಬಂಧಿಸಿದಂತಿರುವ ಜಾತಿ ಸಂಕರದ ಕತೆಯನ್ನು ನೆನಪಿಗೆ ತರುತ್ತದೆ. ಅನುಲೋಮ ವಿವಾಹ ಪದ್ಧತಿಯಲ್ಲಿಲ್ಲದ ಜಾತಿ ಭೇದ ಮತ್ತು ಜಾತಿ ದ್ವೇಷವನ್ನು ವಿಲೋಮ ಪದ್ಧತಿಯಲ್ಲಿ ಅನುಸರಿಸಲಾಗಿದೆ. ವಿಲೋಮ ಸಂಬಂಧಗಳು ಕೆಳಜಾತಿ ಅಥವಾ ಜಾತಿಯಾಚೆಗಿನ ಸಮುದಾಯಗಳಿಗೆ ಸೇರಿದ ಪುರುಷರ ಜೀವಕ್ಕೆ ಸಂಚಕಾರ ತಂದೊಡ್ಡುತ್ತದೆ. ಇದು ನಿಷಿದ್ಧ. ವಿಲೋಮ ವಿವಾಹ ವಿರುದ್ಧ ಕೆಳಜಾತಿ ಪುರುಷರನ್ನು ನಿರ್ಬಂಧಿಸುವ ಮತ್ತು ಅಂಥ ನಡೆಯ ವಿರುದ್ಧ ಎಚ್ಚರ ನೀಡುವ ಕ್ರಮವಿದಾಗಿದೆ. ಮುನಿಗಳು ಆರ್ಥಿಕ ಶೋಷಣೆಗೆ ಅವಕಾಶ ದೊರಕದ ವಿರುದ್ಧ ಮತ್ತು ದೇವ ಕನ್ನಿಕೆಯರು ವಿಲೋಮ ಸಂಬಂಧದ ವಿರುದ್ಧ ತೆರೆಮರೆಯ ರಾಜಕಾರಣದಲ್ಲಿ ತೊಡಗಿ ದ್ವೇಷ ಸಾಧಿಸುವರು. ಈ ಏಕ ಮಾತ್ರ ಅಂಶ ಎತ್ತಪ್ಪನ ತಲೆತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎತ್ತಪ್ಪನನ್ನು ಸೆರೆ ಹಿಡಿಯುವಲ್ಲಿ ಮತ್ತು ಅವನ ತಲೆ ತೆಗೆಯುವಲ್ಲಿ ಮತ್ತೊಂದು ಬುಡಕಟ್ಟು ಸಮುದಾಯವಾದ ಬೇಡರನ್ನು ಎತ್ತಿ ಕಟ್ಟಲಾಗುತ್ತದೆ. ಹಾಗೆಯೇ ವೈಷ್ಣವ ಪಂಥಕ್ಕೆ ಸೇರಿದ ದಾಸಪ್ಪ ಸಂಪ್ರದಾಯದ ಜನರನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಯಾವುದೇ ಕೆಳ ಸಮುದಾಯವೊಂದು ತನ್ನ ಸಾಮಾಜಿಕ ವ್ಯವಸ್ಥೆಯ ಅಧೀನತೆಯನ್ನು ಧಿಕ್ಕರಿಸಿ ಶಕ್ತವಾಗುವ ಪ್ರಯತ್ನ ಮಾಡಿದ್ದಲ್ಲಿ ಆಗ ಅದನ್ನು ತನ್ನ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಉಳಿದ ಕೆಳ ಸಮುದಾಯಗಳನ್ನು ಛೂ ಬಿಟ್ಟು ಬೇಟೆಯಾಡುತ್ತದೆ. ಇದು ಮುನಿ ಸಮುದಾಯ ಸ್ವಹಿತ ರಕ್ಷಣೆ ಮಾಡಿಕೊಳ್ಳುವಲ್ಲಿ ಅನುಸರಿಸಿದ ರಾಜಕಾರಣದ ಸ್ವರೂಪವನ್ನೂ ಆರಂಭಿಕ ಹಂತದಿಂದಲೆ ಸ್ವ ಸಮುದಾಯ ಕೇಂದ್ರಿತ ರಾಜಕಾರಣ ರೂಢಿಸಿಕೊಂಡು ಬಂದ ಬಗೆಯನ್ನೂ ಅರುಹುತ್ತದೆ.
ಕಾಡುಗೊಲ್ಲ ಬುಡಕಟ್ಟಿನಲ್ಲಿ ರಾಸುಗಳ ಪಾಲನೆಯ ವೃತ್ತಿಯನ್ನು ಅರೆರಾಯ ಮತ್ತು ಬೋರೆರಾಯರ ಮಕ್ಕಳಾದ ಅಂಬೆರಾಯ ಮತ್ತು ತುಂಬೆರಾಯರು ಆರಂಭಿಸಿದರು. ಅವರು ಪಶುಪಾಲನೆಗಾಗಿಯೆ ಮದುವೆಯಾಗದೆ ತಮ್ಮ ಇಡೀ ಜೀವನವನ್ನು ಮೀಸಲಿಟ್ಟರು. ಸಮುದಾಯದ ಆರ್ಥಿಕ ನೆಲೆಗಟ್ಟಾದ ಪಶುಪಾಲನೆಯನ್ನು ಕಾಪಾಡುವಲ್ಲಿ ಮತ್ತು ಬೆಳೆಸುವಲ್ಲಿ ಮಾದರಿಯಾಗಿದ್ದಾರೆ. ಈ ಕಾಯಕ ಮುಂದುವರೆಸುವ ಜನರಿಗಾಗಿ ಹುಡುಕಾಟ ನಡೆಸುವ ಮಾರಸಂದ್ರದ ಮಾರಕ್ಕ ಎತ್ತಪ್ಪನ ಹುಟ್ಟಿಗೆ ಪ್ರೇರಕಳಾಗುತ್ತಾಳೆ. ಕಾಡುಗೊಲ್ಲರಂಥ ಬುಡಕಟ್ಟು ಸಮುದಾಯದ ಮೇಲೆ ವೈದಿಕ ಶೈವಪಂಥ ದಟ್ಟ ಪ್ರಭಾವ ಬೀರಿದ್ದಕ್ಕೆ ಎತ್ತಪ್ಪನ ಜನನ ಪ್ರಸಂಗ ನಿದರ್ಶನವಾಗಿದೆ. ಶಿವ ಕಲ್ಪನೆ ಈ ಬುಡಕಟ್ಟಿನ ಸಾಧಕ ಶಕ್ತಿಯಲ್ಲದಿದ್ದರೂ ಮೂಲ ಶಕ್ತಿಯೆಂದು ಬಿಂಬಿಸುವ ಪ್ರಯತ್ನವಿದೆ. ಆದರೂ ಎತ್ತಪ್ಪ ಮತ್ತು ಜುಂಜಪ್ಪ ಸಂಪ್ರದಾಯಗಳೇ ಕಾಡುಗೊಲ್ಲ ಸಮುದಾಯದ ಜೀವನ ವಿಧಾನ ರೂಪಿಸಿರುವ ಶಕ್ತಿಮೂಲ ಕೇಂದ್ರಗಳಾಗಿವೆ. ಬಸವ ಶೈವ ಪಂಥ ಹಾಗೂ ರಾಸುಗಳ ಪ್ರತೀಕ. ಆದರೂ ಈ ಸಮುದಾಯದ ಪಸುಪಾಲನೆಯ ಆಚರಣೆಗಳಲ್ಲಿ ಶೈವ ಆಚರಣೆಗಳು ಹಾಗೂ ನಂಬಿಕೆಗಳು ರೂಢವಾಗಿರುವುದು ಕಾಣುವುದಿಲ್ಲ. ಈ ಸಮುದಾಯ ಶಿಷ್ಟ ಪುರಾಣಗಳ ಪ್ರಭಾವಕ್ಕೆ ಒಳಗಾಗಿಯೂ ತನ್ನ ಸ್ವಂತಿಕೆ ಸಾಧಿಸಿರುವ ಪರಿಣಾಮವಿದು. ಹೀಗಿದ್ದರೂ ಮುನಿಗಳ ಮತ್ತು ದೇವ ಕನ್ನಿಕೆಯರ ಶಾಪ ಪ್ರಸಂಗಗಳು ಎತ್ತಪ್ಪನ ಕಥಾ ಚೌಕಟ್ಟನ್ನು ನಿರ್ಧರಿಸಿವೆ. ಇದು ಶಿಷ್ಟ ಪುರಾಣಗಳ ಮಾದರಿಯನ್ನು ಅನುಸರಿಸಿದ ಪರಿಣಾಮವಾಗಿದೆ. ಬುಡಕಟ್ಟು ಸಮುದಾಯಗಳು ಶಿಷ್ಟ ಸಮಾಜವನ್ನು ಮೀರಬಾರದ ಎಚ್ಚರಿಕೆ ಮತ್ತು ಮೀರಲಾಗದ ಸೀಮಿತತೆಯನ್ನು ಹುಟ್ಟುಹಾಕಿದೆ. ಶಿಷ್ಟರು ಹಾಕಿದ ಎಲ್ಲೆಯನ್ನು ಮೀರಿ ಸಮುದಾಯ ರಕ್ಷಣೆ ಮಾಡಹೊರಟ ಎತ್ತಪ್ಪ ಸರ್ವನಾಶವಾಗುವ ನಿರೂಪ ಬಹು ಸಮುದಾಯಗಳ ಒಕ್ಕೂಟವಾದ ಭಾರತೀಯ ಸಮಾಜದಲ್ಲಿ ಬುಡಕಟ್ಟುಗಳ ಸ್ಥಾನ-ಮಾನಗಳನ್ನು ನಿರ್ದೇಶಿಸಿದೆ. ಅಲ್ಲದೆ ಈ ನಿರೂಪದ ಸಂದೇಶ ಬಹು ಸಮುದಾಯಗಳ ಸಮಾಜದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಅನ್ವಯವಾಗುತ್ತದೆ.
ಗುಡ್ಡದ ಬೋರಿ ಪ್ರಸಂಗ ಎತ್ತಪ್ಪ ಕಥಾನಕದ ವಿಶೇಷ ಭಾಗವಾಗಿದೆ. ಶಿಷ್ಟ ಸಮಾಜ ಪುರುಷ ಪರ ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯಲು ಅವನಿಗೆ ಬಹುಬಗೆಯಲ್ಲಿ ಹೆಣ್ಣಿನ ಅನುಭೋಗದ ಹಕ್ಕು ನೀಡಿದೆ. ಆದರೆ ಎತ್ತಪ್ಪನಿಗೆ ತನ್ನ ಹಿರಿಯರಂತೆ ಸಮುದಾಯದ ಆರ್ಥಿಕ ನೆಲೆಗಟ್ಟು ಕಾಪಾಡುವಿಕೆ ಮುಖ್ಯವಾಗಿದೆ, ಮತ್ತು ಹೆಣ್ಣಿನ ಸಂಪರ್ಕದಂಥ ವೈಯಕ್ತಿಕ ಹಿತಾಸಕ್ತಿಯಿಂದ ಅದು ಕೆಡುವುದೆಂದು ಬೆದರಿದ್ದಾನೆ. ಹಾಗಾಗಿ ಎತ್ತಪ್ಪ ತಾನು ಕಟ್ಟಿಕೊಂಡ ಹೆಣ್ಣಿನೊಂದಿಗೆ ಸಂಸಾರವನ್ನೂ ಮಾಡದೆ, ಆಕೆ ಅಟ್ಟಿದ ಅಡುಗೆಯನ್ನೂ ಉಣ್ಣದೆ ಪಶುಪಾಲನೆ ಕೇಂದ್ರಿತ ಕಟ್ಟುನಿಟ್ಟಿನ ಆಚರಣೆಯನ್ನು ತನ್ನ ಜೀವಮಾನವಿಡೀ ಪಾಲಿಸುತ್ತಾನೆ. ಇದು ಸಮುದಾಯದ ಹಿತದಲ್ಲೆ ತನ್ನ ವೈಯಕ್ತಿಕ ಜೀವನ ಸಾಧನೆ ಕಾಣುವ ಬಗೆಯಾಗಿದೆ. ಸಮುದಾಯದ ಆರ್ಥಿಕ ವ್ಯವಸ್ಥೆ ಯಾವ ಬಗೆಯಲ್ಲೂ ಅಡಚಣೆಗೆ ಒಳಗಾಗಬಾರದೆಂಬ ಹಿತ ಕಾಯುವ ದೃಷ್ಟಿ ಅವನಲ್ಲಿ ಸದಾ ಎಚ್ಚರವಾಗಿದ್ದು ಕಾರ್ಯನಿರ್ವಹಿಸಿದೆ. ಗುಡ್ಡದ ಬೋರಿ ಎತ್ತಪ್ಪನನ್ನು ಉತ್ಕಟವಾಗಿ ಮೋಹಿಸುವುದು ಮತ್ತು ಹೆಣ್ಣಿನ ಉತ್ಕಟ ಮೋಹಕ್ಕೆ ಮಣಿಯದೆ ಅದನ್ನು ಕಡೆಗಣಿಸಿ ಎತ್ತಪ್ಪ ಮೀರಿ ನಿಲ್ಲುವುದು - ಇದು ವೈಯಕ್ತಿಕ ಮತ್ತು ಸಮುದಾಯ ಪರವಾದ ಹಿತಾಸಕ್ತಿಗಳು ಮುಖಾಮುಖಿಯಾದ ಚಿತ್ರಣ. ದೇವ ಕನ್ನಿಕೆಯರೊಂದಿಗಿನ ಅನುಭವದ ಪ್ರಸಂಗ ವಿಲೋಮ ವಿವಾಹ ಪದ್ಧತಿಗಳ ಮೌಲ್ಯ ಕಲ್ಪನೆಗಳಲ್ಲಿರುವ ಸಂಕುಚಿತ ದೃಷ್ಟಿಕೋನವನ್ನು ಕೆಣಕುತ್ತದೆ. ಅಲ್ಲದೆ ವೈಯಕ್ತಿಕ ಹಾಗೂ ಸಮುದಾಯ ಪರವಾದ ಹಿತಾಸಕ್ತಿಗಳು ಮೇಲುಗೈ ಪಡೆಯಲು ನಡೆಸಿದ ತಿಕ್ಕಾಟದಲ್ಲಿ ಎತ್ತಪ್ಪ ಹೆಣ್ಣಿನ ವಿಚಾರದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ನಿರಾಕರಿಸಿ ಪಾಲಿಸಿದ ಅತ್ಯುತ್ಕಟ ಶೀಲ ಶುಚಿತ್ವವೆ ಆತನ ಸಮುದಾಯ ಹಿತಾಸಕ್ತಿಯನ್ನು ಸೋಲಿಸುವ ರಣತಂತ್ರವಾಗಿ ಬಳಕೆಯಾಗುತ್ತದೆ. ಗುಡ್ಡದ ಬೋರಿಯ ಮೋಹ ದ್ವೇಷವಾಗಿ ಪರಿಣಮಿಸಿ, ಸೇಡು ತೀರಿಸಿಕೊಳ್ಳುವ ಹಂತ ತಲುಪುತ್ತದೆ. ಎತ್ತಪ್ಪನ ಜೀವನ ಮೌಲ್ಯವೇ ಹೇಗೆ ಅದರ ದುರಂತಕ್ಕೆ ಮೂಲಕಾರಣವಾಗಿದೆ ಎಂಬುದನ್ನು ಈ ಕಥನ ಹೀಗೆ ಚಿತ್ರಿಸಿದೆ. ಈ ಮೂಲಕ ಕಾಡುಗೊಲ್ಲ ಸಮುದಾಯ ಶಿಷ್ಟರ ಕೈಯಲ್ಲಿ ಅನುಭವಿಸಿದ ಅಪಮಾನ, ಸೋಲಿನ ಕಥಾನಕವಾಗಿ ಬದಲಾಗಿದೆ.
'ಹೆತ್ತ ತುಪ್ಪದಲ್ಲಿ ಹುಟ್ಟಿದವನು' ಅಥವಾ 'ಎತ್ತಿನ ಅಪ್ಪ' ಎಂದು ಎತ್ತಪ್ಪ ಪದದ ಅರ್ಥ ಹೊರಡುತ್ತದೆ. ಈ ವಿವರಣೆ ಕಾಡುಗೊಲ್ಲರಲ್ಲಿ ಎತ್ತಪ್ಪ ಕಥಾನಕದ ಮಹತ್ವ ಮತ್ತು ಅವರ ಆರ್ಥಿಕ ಜೀವನಕ್ಕೆ ಸಂಬಂಧಿಸಿರುವುದನ್ನು ಕಾಣಿಸುತ್ತದೆ. ಎತ್ತಪ್ಪ ಕಾಡುಗೊಲ್ಲ ಸಮುದಾಯದಲ್ಲಿ ಅಂಟು-ಮುಂಟು, ಮುಟ್ಟು-ಹೆರಿಗೆ ಕುರಿತು ನಿಷೇಧ ಭಾವ ರೂಢಿಸಿದವನು. ಹೆಂಗಸರು ಬಿಳಿ ಪತ್ತಲ ಮತ್ತು ಗೊಲ್ಲಕಡಗ ತೊಡುವ ನಿಯಮ ರೂಪಿಸಿದವನು.ಹಂದಿ ಕೋಳಿಗಳನ್ನು ಹಟ್ಟಿಯೊಳಗೆ ಸೇರಿಸದಿರುವ ನಿಯಮ, ಗೋಜನಿಗೆ ಕುಡಿಯುವ ಮತ್ತು ಮೀರಿದವರಿಗೆ ದಂಡ ವಿಧಿಸುವ ನಿಯಮ ವಿಧಿಸಿದವನು. ಆ ಮೂಲಕ ಸಮುದಾಯದ ಪಶುಪಾಲಕ ವೃತ್ತಿಯ ಮಹತ್ವವನ್ನು ಹೆಚ್ಚಿಸುವ ಮತ್ತು ಅದರ ರಕ್ಷಣೆಗೆ ಅಗತ್ಯವಾದ ಜೀವನ ಮೌಲ್ಯಗಳನ್ನು ರೂಢಿಗೆ ತಂದವನು ಎಂದೆ ಪ್ರತೀತಿ ಪಡೆದಿದ್ದಾನೆ.
ಕಾಡು ಗೊಲ್ಲ ಸಮುದಾಯದ ಎತ್ತಪ್ಪನ ಕಥಾನಕ ಶಿಷ್ಟ ಪುರಾಣಗಳಂತೆ ಕಟ್ಟುಕತೆಗಳಾಗಿರದೆ ಚಾರಿತ್ರಿಕ ಕಥನವಾಗಿದೆ. ತನ್ನನ್ನು ನಿರ್ನಾಮ ಮಾಡುವ ಉದ್ದೇಶದಿಂದ ವೈರಿಗಳು ನೀಡಿದ ಕರಾರುಬದ್ಧ ಪಂಥಾಹ್ವಾನವನ್ನು ಸ್ವೀಕರಿಸುವ ಎತ್ತಪ್ಪ ತನ್ನ ವೈರಿಗಳನ್ನು ಸೋಲಿಸಿದರೂ ಅವರ ಕರಾರುಗಳಿಂದಲೆ ಅವರನ್ನು ನಾಶಗೊಳಿಸದೆ ಮಾನವ ಪ್ರೀತಿಯನ್ನು ತೋರುತ್ತಾನೆ. ಮಾನವ ಸಂಸ್ಕೃತಿ ಕುರಿತ ವ್ಯಾಖ್ಯಾನಕ್ಕೆ ಷರಾ ಬರೆದು ಬುಡಕಟ್ಟು ಸಂಸ್ಕೃತಿಗಳ ಮೇರು ಹಂತವನ್ನು ಸಾಧಿಸಿದ್ದಾನೆ. ಭಾರತದ ಬಹು ಸಮುದಾಯ ಒಕ್ಕೂಟದಲ್ಲಿ ಕಾಡು ಗೊಲ್ಲ ಸಮುದಾಯಕ್ಕೆ ಸೀಮಿತಗೊಳ್ಳದ ಎತ್ತಪ್ಪನ ಕಥಾನಕ ಸಾಂಸ್ಕೃತಿಕ ಮಹತ್ವ ಪಡೆದ ಪಠ್ಯವಾಗಿದೆ.
(ಇದು ಮೀರಸಾಬಿಹಳ್ಳಿ ಶಿವಣ್ಣ ಅವರು ಕನ್ನಡದಲ್ಲಿ ಬರೆದ ಮತ್ತು ಜಿ ಎಸ್ ಉಜ್ಜನಪ್ಪ ಅದರ ಇಂಗ್ಲಿಶಾನುವಾದ ಮಾಡಿದ ಎತ್ತಪ್ಪ ಕೃತಿ ಕುರಿತ ಬರವಣಿಗೆ. ಇದನ್ನು ಕಳೆದೆರಡು ವರ್ಷಗಳ ಹಿಂದೆ ಬರೆದಿದ್ದರೂ ಈಗ ಅಷ್ಟಿಷ್ಟು ತಿದ್ದುಪಡಿಯೊಂದಿಗೆ ಇಲ್ಲಿ ಮತ್ತೆ ನಿಮ್ಮ ಮುಂದಿಡುತ್ತಿದ್ದೇನೆ.)