ಗುರುವಾರ, ಮೇ 26, 2011

ಮಾಸ್ತಿಯವರದೊಂದು ಕತೆ ಕುರಿತು ಟಿಪ್ಪಣಿ

1994ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನಲ್ಲಿ `ಅನ್ಯಜ್ಞಾನಶಿಸ್ತುಗಳ ಮೂಲಕ ಕನ್ನಡ ಸಾಹಿತ್ಯ' ಎಂಬ ಕಮ್ಮಟವನ್ನು ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಿದ್ದ ನಾನು ಮನಶಾಸ್ತ್ರ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಟಿಪ್ಪಣಿಯೊಂದನ್ನು ಸಿದ್ಧಪಡಿಸಿದ್ದೆ. ನಂತರ ಅಕಾಡೆಮಿ ಕಮ್ಮಟ ಕುರಿತು ಪ್ರಕಟಿಸಿದ ಪುಸ್ತಕದಲ್ಲಿ ಸೇರಿಕೊಂಡಿತು. ಅದನ್ನಿಲ್ಲಿ  ತುಸು ಬದಲಾವಣೆಯೊಂದಿಗೆ ಮತ್ತೆ ನಿಮ್ಮ ಮುಂದಿರಿಸುತ್ತಿದ್ದೇನೆ. 
#

ಮಾಸ್ತಿ ಅವರ `ಗೌತಮಿ ಹೇಳಿದ ಕತೆ' 

ಈ ಕತೆಯ ವಿನ್ಯಾಸ ಗೌತಮಿ ನಿರೂಪಿಸುವ ಕತೆಯ ಹಿಂದೆ ಕೆಲಸ ಮಾಡುವ ನಿರೂಪಕಿಯ ಮನಸ್ಸನ್ನು ಚಿತ್ರಿಸುತ್ತದೆ. ಗೌತಮಿ ಕತೆ ನಿರೂಪಿಸಲು ಪ್ರೇರಿತಳಾಗಿದ್ದಾಳೋ ಇಲ್ಲವೆ ಪ್ರೇರಕ ಸ್ಥಾನದಲ್ಲಿ ನಿಂತು ಕತೆ ಹೇಳುತ್ತಿದ್ದಾಳೋ ನಿರ್ದಿಷ್ಟವಾಗಿ ಕಂಡುಕೊಳ್ಳುವುದು ಸುಲಭವಲ್ಲ ಎನ್ನುವ ಹಾಗೆ ಕತೆಯನ್ನು ಮಾಸ್ತಿ ಹೆಣೆದಿದ್ದಾರೆ.

ಶಕುಂತಲೆ ತನ್ನ ಮಗು ಭರತನೊಂದಿಗೆ ಆಶ್ರಮಕ್ಕೆ ಭೇಟಿ ನೀಡಿದ್ದಾಳೆ ಎನ್ನುವ ಒತ್ತಿನೊಂದಿಗೆ ಕತೆ ಆರಂಭವಾಗುತ್ತದೆ. ಆ ಕಾಲಕ್ಕೆ ಅವಳ ಸಖಿಯರಾದ ಅನಸೂಯ ಮತ್ತು ಪ್ರಿಯಂವದೆಯರಿಗೂ ಮದುವೆಯಾಗಿದೆ. ಅವರೂ ಮಕ್ಕಳನ್ನು ಪಡೆದು ತಾಯಂದಿರಾಗಿದ್ದಾರೆ. ಒಂದು ಕಡೆ ಶಕುಂತಲೆಯ ಬದುಕು ಸಂಸಾರದ ನೆಲೆಯಲ್ಲಿ ಎದುರಿಸಿದ ಎಲ್ಲ ಬಗೆಯ ಗಂಡಾಂತರಗಳನ್ನು ಕಂಡಿದ್ದರೂ ಅದನ್ನು ದಾಟಿದೆ, ಎಂದೋ ನಿರಾತಂಕ ಸ್ಥಿತಿಯನ್ನು ತಲುಪಿದ್ದು ನಿರಾಳತೆಯಿಂದ ಸಾಗುತ್ತಿದೆ.  ಮತ್ತೊಂದೆಡೆ ಅವಳ ಸಖಿಯರೂ ಅಶ್ರಮದ ಹೆಣ್ಣುಮಕ್ಕಳೂ ಆದ ಅನಸೂಯ ಮತ್ತು ಪ್ರಿಯಂವದೆಯರ ಬದುಕು ಹಾದಿ ತಪ್ಪದೆ ಸುಭದ್ರ ಸ್ಥಿತಿಯನ್ನು ಮುಟ್ಟಿದೆ. ಮುದುಕಿಯಾಗಿರುವ ಗೌತಮಿ, ಶಕುಂತಲೆ ಮತ್ತು ಅವಳ ಸಖಿಯರಂತೆ ಆಶ್ರಮಕ್ಕೆ ಅನಾಥ ಮಕ್ಕಳಂತೆ ಬಂದಿದ್ದು ಇವರೆಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಏರು ಪೇರು ಕಂಡವರೇ ಅಗಿದ್ದಾರೆ. ಅಲ್ಲದೆ ಕತೆ ಜರುಗುವ ಹೊತ್ತಿಗೆ ಸಂತೃಪ್ತ ಬದುಕಿನ ನೆಲೆಯನ್ನು ತಲುಪಿದ್ದಾರೆ.  ಗೌತಮಿ ಸಂತಸದ ಮನಸ್ಥಿತಿಯಲ್ಲಿದ್ದಾಳೆಂದು ಕತೆಯ ಮೊದಲ ಹಂತದಲ್ಲಿ ವಿವರಣೆ ದೊರಕುತ್ತದೆ. ಆಕೆಯ ಮನಸ್ಥಿತಿಗೆ ಶಕುಂತಲೆ ಆಶ್ರಮಕ್ಕೆ ಭೇಟಿ ನೀಡಿರುವುದು ಅಥವಾ ಶಕುಂತಲೆಯ ಬದುಕಿನ ಹಿನ್ನೆಲೆಯಲ್ಲಿ ತನಗೆ ತನ್ನದೆ ಕತೆ ನಿರೂಪಿಸಲು ಸಂದರ್ಭ ಒದಗಿರುವುದು ಕಾರಣವಿರಬಹುದು. ಶಕುಂತಲೆ ದುಷ್ಯಂತನನ್ನು ವರಿಸಿ ಹೋದಮೇಲೆ ಗೌತಮಿ ಅನಸೂಯ ಮತ್ತು ಪ್ರಿಯಂವದೆಯರಿಗೆ ಒತ್ತಾಯ ಮಾಡಿ ಮದುವೆಗೆ ಒಪ್ಪಿಸಿರುತ್ತಾಳೆ. ಗೌತಮಿ ತಾನೇಕೆ ಹಾಗೆ ನಡೆದುಕೊಂಡೆನೆಂದು ಹೇಳಲು ಶಕುಂತಲೆಯ ಸಖಿಯರಿಗೆ ಕತೆಯ ಮೂಲಕ ವಿವರಿಸತೊಡಗುತ್ತಾಳೆ. ಈ ಕತೆಯನ್ನು ಗೌತಮಿ ಈ ಮೊದಲೆ ಬೇರೆ ಯಾವ ಸಂದರ್ಭದಲ್ಲಿಯಾದರೂ ಹೇಳಬಹುದಿತ್ತು. ಆದರೆ ಆಕೆ ಹೇಳಿರಲಿಲ್ಲ. ಬದುಕಿನಲ್ಲಿ ತೊಡಕನೆದುರಿಸಿದ ಅಸ್ಥಿರ ಘಟ್ಟದಿಂದ ಎಲ್ಲ ಪಾತ್ರಗಳು ಮೇಲೆ ಬಂದು ನೆಮ್ಮದಿಯ ಸ್ಥಿತಿಯಲ್ಲಿರುವುದು ಗೌತಮಿ ನಿರೂಪಿಸುವ ಕತೆಯನ್ನು ಎಲ್ಲ ಪಾತ್ರಗಳೂ ನಿರ್ಲಿಪ್ತವಾಗಿ ದೂರದಿಂದ ನೋಡಲು ಮತ್ತು ಸ್ವೀಕರಿಸಲು ಸಾಧ್ಯವಾಗುವ ಮಾನಸಿಕ ವಾತಾವರಣ ರೂಪಿಸಲು ಕಾರಣವಾಗಿದೆ. ಇಂತಹ ಸ್ಥಿತಿಯಲ್ಲೂ ಗೌತಮಿ ತನ್ನ ಕತೆಯನ್ನು ಮತ್ತೊಬ್ಬರ ಕತೆಯಂತೆ ನಿರೂಪಿಸುತ್ತಾಳೆ.

ಅನಾಥೆಯಾಗಿ ಬಂದು ಸೇರಿದ್ದ ಆಶ್ರಮದ ಮತ್ತೊಬ್ಬ ಹುಡುಗಿ ಮಾಲಿನಿಯ ಕತೆಯೆಂಬಂತೆ ಗೌತಮಿ ತನ್ನ ಕತೆಯನ್ನು ಹೇಳುತ್ತಾಳೆ. ಒಂಬತ್ತು ಹತ್ತು ವರುಷದ ಮಾಲಿನಿ ಆಶ್ರಮದ ಮುಕ್ತ ವಾತಾವರಣದಲ್ಲಿ ಗಂಡು ಹೆಣ್ಣು ಎಂಬ ಭೇದಭಾವದ ಅರಿವಿಲ್ಲದೆ ತನ್ನ ಓರಗೆಯ ಹುಡುಗರಾದ ಭಾರದ್ವಾಜ ಮತ್ತು ದತ್ತ ಕಶ್ಯಪರೊಡನೆ ಬೆರೆತು ಬೆಳೆಯುತ್ತಾಳೆ. ಮದುವೆಯ ಮಾತಿಗೆ ಅವಳು ಸಮರ್ಥನೂ ಬಲಿಷ್ಟನೂ ಆಗಿ ಕಂಡುಬಂದಿದ್ದ ಭಾರದ್ವಾಜನ ಕಡೆಗೆ ಒಲಿಯುತ್ತಾಳೆ. ಒಮ್ಮೆ ಹೊಳೆಯ ಪ್ರವಾಹದಲ್ಲಿ ಈಜುತ್ತಿದ್ದ ಭಾರದ್ವಾಜ ಆಕಸ್ಮಿಕವಾಗಿ ತೇಲಿ ಬರುತ್ತಿದ್ದ ಮರಕ್ಕೆ ಸಿಲುಕಿ ಸಾಯುತ್ತಾನೆ. ಭಾರದ್ವಾಜನ ಸಾವಿನಿಂದ ತನ್ನ ಬದುಕು ದಿಕ್ಕು ಕೆಟ್ಟಿದ್ದನ್ನು ಅರಿತ ಮಾಲಿನಿ ಒಂದು ದಿನ ಹೊಳೆಗೆ ಹಾರುತ್ತಾಳೆ. ಹೊಳೆಯ ತುಂಬು ನೀರಿನಿಂದ ಅವಳನ್ನು ದತ್ತ ಹೊರಹಾಕುತ್ತಾನೆ. ಅಲ್ಲಿಂದ ಅವಳ ಮನಸ್ಸು ದತ್ತನನ್ನು ಪಡೆಯಲು ಹವಣಿಸುತ್ತದೆ. ಅರಿವಿಲ್ಲದೆ ಭಾರದ್ವಾಜನಲ್ಲಿ ಪಡೆದುಕೊಂಡದ್ದನ್ನು ಮಾಲಿನಿ ಅವನ ಸಾವಿನಿಂದ ಇದ್ದಕ್ಕಿದ್ದ ಹಾಗೆ ಕಳೆದುಕೊಂಡ ಮೇಲೆ ತನ್ನ ಜೀವನದ ಆಧಾರವನ್ನೆ ತಾನು ಕಳೆದುಕೊಂಡೆನೆಂದು  ಹೊಳೆಗೆ ಹಾರಲು ಹೊರಡುತ್ತಾಳೆ. ನಂತರ ತನ್ನ ಜೀವ ಉಳಿಸಿದ ದತ್ತನಲ್ಲಿ ತನ್ನ ನೆಚ್ಚಿನ ಜೀವವನ್ನು ತಣಿಸಿ, ತನಗೆ ಬದುಕು ಕೊಡುವ ಗಂಡನನ್ನು ಕಾಣುತ್ತಾಳೆ. ದತ್ತನನ್ನು ಬಯಸಿ ತನ್ನವನನ್ನಾಗಿ ಪಡೆಯಲು ಪ್ರಯತ್ನಿಸುತ್ತಾಳೆ. ಆಶ್ರಮದ ಮುಂದಣ ಕುಲಪತಿಯಾಗಲಿರುವ ದತ್ತ ತಾನು ಪತಿತನಾಗಬಾರದೆಂಬ ಮನಸ್ಥಿತಿ ಅವನದಾಗಿತ್ತೆಂದೂ ಆದರೆ ಅವನಲ್ಲಿ ಮಾಲಿನಿ ಕುರಿತು ಸುಪ್ತ ಬಯಕೆಯಿತ್ತೆಂದೂ ಗೌತಮಿ ಚಿತ್ರಿಸುತ್ತಾಳೆ. ಇಂಥ ಮನಸ್ಥಿತಿಯಲ್ಲಿದ್ದ ದತ್ತನ ತಲೆಯನ್ನು ತನ್ನ ಎದೆಯ ಬಳಿ ಸೆಳೆದುಕೊಳ್ಳಲು ಮಾಲಿನಿ ಕೈ ಚಾಚುತ್ತಾಳೆ. ಆಗ ದತ್ತ ಕಶ್ಯಪ ದಂಡದಂತೆ ನೆಲದ ಮೇಲೆ ಬಿದ್ದು ಅವಳ ಕಾಲುಗಳೆರಡನ್ನೂ  ತನ್ನೆರಡು ಕೈಗಳಿಂದ ಹಿಡಿದು ಅವಳಿಗೆ ಶರಣಾಗತನಾಗಿ ಅಂಗಲಾಚಿ ದೈನ್ಯದಿಂದ ತನ್ನನ್ನು ಕಾಪಾಡಲು ಬೇಡಿಕೊಳ್ಳುತ್ತಾನೆ. ದತ್ತ ಮಾಲಿನಿಗೆ ತನ್ನ ತೋಳನಲ್ಲಿ ಅಪ್ಪಿ ಹಿಡಿಯಬೇಕಾದವನು ಆಗಿದ್ದ. ಆದರೆ ಆತ ನಿಸ್ಸಹಾಯಕ ಬಾಲಕನಂತೆ ಕಾಪಾಡಲು ಅವಳನ್ನು ಬೇಡಿದಾಗ ಆಕೆ ತಾಯಿಯಂತೆ ಅವನನ್ನು ಕಾಣಲು ತೊಡಗುತ್ತಾಳೆ.  ಮಾಲಿನಿಯೇ ಗೌತಮಿ, ದತ್ತ ಕಶ್ಯಪನೇ ಕಣ್ವ ಮಹರ್ಷಿಯೆಂದು ಕತೆಯ ಕೊನೆಯ ಹಂತದಲ್ಲಿ ಪಾತ್ರಗಳ ಪರಸ್ಪರ ಮಾತುಕತೆಯ ಮೂಲಕ ತಿಳಿದುಬರುತ್ತದೆ.

ಈ ಕತೆಯ ನಿರೂಪಕಿ ಮತ್ತು ಕೇಂದ್ರ ಪಾತ್ರಧಾರಿ ಗೌತಮಿಯೇ ಅಗಿದ್ದು ಅವಳ ಕಣ್ಣುಗಳಿಂದ ಗ್ರಹಿಸಿದ ಕತೆಯಂತೆ ಮಾಸ್ತಿ ಕತೆ ಮಂಡಿಸಿದ್ದಾರೆ. ಕತೆಯ ಪ್ರಾರಂಭದಲ್ಲಿ ವಿವರಿಸಲಾಗಿರುವ ಆಕೆಯ ಸಂತಸ,  ಕೇವಲ ಕತೆ ಹೇಳಿಕೊಳ್ಳುವುದರಲ್ಲಿ ಕಾಣುವ ಹಂತವೋ ಅಥವಾ ಆಕೆ ತನ್ನ ಕತೆಯ ಮೂಲಕ ತನ್ನ ಕಣ್ಣ ಮುಂದಿನ ಹೆಣ್ಣುಮಕ್ಕಳಿಗೆ ಹೀಗಾಗಬಾರದು ಎಂಬ ನೀತಿಕತೆ ಹೇಳುವ ಸ್ಥಿತಿಯೋ ಇಲ್ಲವೆ ಸಕುಂತಲೆಯ ಬದುಕಿನ ಹಿನ್ನೆಲೆಯಲ್ಲಿ ತನ್ನ ಜೀವನ ಅರಿಯಲು ಕತೆಯನ್ನು ಹೆಣೆದ ಮನಸ್ಥಿತಿಯೋ, ಹೇಗೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾರದಷ್ಟು ಕತೆ ಸಂಕೀರ್ಣವಾಗಿದೆ. ಆದರೂ ಮಾಸ್ತಿಯವರ ಈ ಕತೆ ಒಬ್ಬರಿಗೊಬ್ಬರು ಎದುರಾದಾಗ ಮತ್ತೊಬ್ಬರ ಮೂಲಕ ತನ್ನನ್ನು ಕಂಡುಕೊಳ್ಳಬಹುದಾದ ಮಾನಸಿಕ ಸ್ಥಿತಿಯನ್ನು ಚಿತ್ರಿಸುವ ಚೌಕಟ್ಟಿನಲ್ಲಿದೆ.  




ಶುಕ್ರವಾರ, ಮೇ 20, 2011

ಆಡು

1986ರ `ಸೃಜನವೇದಿ' ಸಾಹಿತ್ಯ ಪತ್ರಿಕೆಯ ಸಂಚಿಕೆಯೊಂದರಲ್ಲಿ ನನ್ನ ಮೊದಲ ಸಂಕಲನವನ್ನು  ಅರವಿಂದ ನಾಡಕರ್ಣಿ ವಿಮರ್ಶೆ ಮಾಡಿದರು. ಆಗವರು ಈ ರಚನೆ ಕುರಿತು ವಿಶೇಷ ಪ್ರಸ್ತಾಪ ಮಾಡಿದ್ದಾರೆ. ಇದರ ಭಾವ ವಲಯಕ್ಕಿರುವ ಸಾಮಾಜಿಕ ಆಯಾಮವನ್ನು ಗುರುತು ಮಾಡಿ ಹೇಳುವ ಮೂಲಕ ಸಾಹಿತ್ಯಿಕ ನೆಲೆಯನ್ನು  ಹೆಚ್ಚು ಮುನ್ನೆಲೆಗೆ ತಂದಿದ್ದಾರೆ. ಹೀಗಿದು ಹಿರಿಯ ಕವಿ ಮಿತ್ರರ ಗಮನ ಸೆಳೆದ ರಚನೆಯಾಗಿದೆ. ಅನ್ಯ ವಿಮರ್ಶ ಸ್ವ ವಿಮರ್ಶೆಯೂ ಆಗಿರುವ ಎಚ್ಚರವನ್ನು ಉಂಟುಮಾಡುತ್ತಲೆ  ಸಾಮಾಜಿಕ ಯಜಮಾನಿಕೆಗೆ ಪ್ರತಿರೋಧವನ್ನು ತಾರ್ಕಿಕವಾಗಿ ಮಂಡಿಸಿದೆ. ಇದು ನಿಮಗೂ ಇಷ್ಟವಾಗಬಹುದು ಎಂದು ಇಲ್ಲಿ ಮತ್ತೆ  ಮುಂದಿರಿಸುತ್ತಿದ್ದೇನೆ.
#


ಆಡು: ಮಾತು ಆಟ ನಗೆ
ಆಡು ನಿನ್ನ ನೀ ತೋರುತ್ತ
ಬೇರೆಯವರ ಅಳೆಯುತ್ತ


ಅಳತೆಗೆ ಸಿಕ್ಕಿದ್ದೇ ಸಾಕೆಂದು
ಪ್ರಾಣಿ ಚಿಕ್ಕದೋ ದೊಡ್ಡದೋ
ಅಳತೆ ಗೋಲನ್ನೇ ಲಾಠಿ ಮಾಡುತ್ತಿ ಯಾಕೆ?


ನಿನ್ನಳತೆ ಗೋಲೇ ಇರಬಹುದು
ಚಿಕ್ಕದು ದೊಡ್ಡದು - ಅದಕೆ
ಅದರ ಜಾಗ ತೋರಿಸಿರುವೆ ಏನು?


ಅಳತೆ ನಿನ್ನಳತೆ ಗೋಲಿಗೆ
ಯಾವುದೆಂದು ತಿಳಿದೆಯಾ?
ಅದೇ ನಿನ್ನಳೆವ ಕೋಲು ಕೂಡ!


ಬ್ರೂಸ್ಲಿಯ ಕರಾಟೆ ಕೈ ಚಳುಕಿಗೆ
ಮಹಮದಾಲಿಯ ಬಿಗಿ ಮುಷ್ಟಿಗೆ
ಮರೆತೆಯಾ ನಿನ್ನಾಟಿಕೆ?


ಕಾಲ್ಕೆರೆದು ಹಾತೊರೆಯುವ
ಮಿಂಚಿನ ಈರ್ಷ್ಯೆ ಸುಳಿಸುವ
ಕರೆಯೋಲೆ ಇದು ಕರೆಯೋಲೆ!


ಆಡು: ಮಾತು ಆಟ ನಗೆ
ಗುಣಿಸಿದ್ದು ಕೂಡಿ ಕಳೆದರೂ
ಗಣಿಕೆಯಾಗದ ಲೆಕ್ಕವಾಡು


ಅವರವರ ಶಕ್ತಿಗೆ ತಕ್ಕಷ್ಟು ದಾರಿ
ಯಾವತ್ತು ತೆರೆದು ಇದ್ದೇ ಇರುತ್ತೆ.
ನಿನ್ನ ಬೀದಿಯ ಹೆಸರು ಕುಲ ನೋಡು




'ಗಿಣ್ಣು' ಕವನ ಸಂಕಲನದಿಂದ

ಭಾನುವಾರ, ಮೇ 8, 2011

ಮುಖ ತೋರದವನು

ಭರವಸೆಯೆ ಬದುಕು, ಅದೇ ಸಮೃದ್ಧ ಜೀವನ ಎಂಬುದು ನಮ್ಮ ಪರಂಪರೆಯಿಂದ ಬಂದ ನಂಬಿಕೆ.  ಅಂಥ ನಂಬಿಕೆಯಿಂದ ಬದುಕನ್ನು ವ್ಯಕ್ತಿ ರೂಪದಲ್ಲಿ ಎದುರುಗೊಂಡ ಸ್ಥಿತಿಯಲ್ಲಿ  ವಾಸ್ತವ ಮೈಪಡೆದುಕೊಂಡ ನಾಟಕೀಯ ಬೆಳವಣಿಗೆ ಇಲ್ಲಿದೆ. 
ಬದುಕು ಭರವಸೆ ತುಂಬಿದ ಕೊಡವೂ ಅಲ್ಲ, ಬರಿ ಕೊಡವೂ ಅಲ್ಲ. ಅದು ನಿರೀಕ್ಷಿತ ಮಾನವೀಯ ಮುಖವಲ್ಲದ ಅನಿರೀಕ್ಷಿತವಾದ ಬದುಕಿನ ಮುಖ. . 
ಮೊದಲ ಸಂಕಲನ ಪ್ರಕಟವಾದಾಗ ಎಚ್ ಎಸ್ ವಿ ಈ ಕವಿತೆ ಕುರಿತು ಕಾಗದ ಬರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.


 

ಮುಖ ತೋರದವನು  



ಆತ ಬಂದ ಸುದ್ದಿ ಹೇಗೋ ತಿಳಿಯಿತು
ಬಂದನೆಂದು ನನಗೂ ಅನಿಸಿತು
ಅನಿಸಿತು ಅಂದರೇನು ಅದರ ಅನುಭವವೂ
ಇನ್ನು ಭ್ರಮೆ ಎಂಥದ್ದು? ಹೇಳು
ಅವನನ್ನು ಸ್ವಾಗತಿಸುವ ಸಂಭ್ರಮದಲ್ಲಿ ನಾನು 
ಮುಳುಗಿ ಹೋಗಿದ್ದೆ. ಸ್ವಾಗತಿಸುವ 
ತಯಾರಿ, ಸಂಭ್ರಮಗಳ ಭರಾಟೆಯಲ್ಲಿ
ಆತ ಮಾಯವಾದದ್ದು ನನಗೆ ತಿಳಿಯಲೇ ಇಲ್ಲ
ಎಲ್ಲೆಲ್ಲೂ ಭಣ ಭಣ! ಯಾಕೆ ಹೀಗೆ? ಎನ್ನುವ
ಪ್ರಶ್ನೆಯಲ್ಲೇ ಎಲ್ಲವೂ ನನ್ನ ಕೈಗೆ ಸಿಕ್ಕಿ ಬಿಟ್ಟಿತು
ಆತ ಬಂದದ್ದು ತಿಳಿಯಲಿಲ್ಲ, ಹೋದ
ದಾರಿ ಯಾವುದಿರಬಹುದೆಂದು ಭಾವಿಸಲಿ?
ಆತ ಹಿಡಿದ ಜಾಡಿನ ಪಯಣ, ಅದರ ದೆಸೆ
ಎಲ್ಲಿ ತಿರುಗಿದೆ ಎಂದು ತಿಳಿದು ಹೇಗೆ ಹಿಂಬಾಲಿಸಲಿ?
ಎಂಬ ಪ್ರಶ್ನೆಯಲ್ಲೆ ನಾನು ತೆಪ್ಪಗೆ ಕುಳಿತುಬಿಟ್ಟೆ.

ಅವನ ಪರಿಚಯವಿರಲಿಲ್ಲ. ಮುಖದ ಗುರುತು
ಹೊರಟು ಬಂದ ಊರು, ಅದರೆ ಪುರಾವೆ ಏನೂ ತಿಳಿದಿರಲಿಲ್ಲ.
ಆದರೂ ಅವನು ಬಂದದ್ದು ಹಿರಿದೆಂದೆ ತಿಳಿದೆ
ಎಲ್ಲಿ ಆತ ಬಂದದ್ದೇ ಇಲ್ಲವಲ್ಲ! ಬಂದ
ನೆಂದು ಬರಿ ಪುಕಾರು ಆದದ್ದು ಯಾರಿಗೂ ತಿಳಿಯಲಿಲ್ಲ
ಅವನು ಬಂದಿದ್ದರೆ ಮಾತ್ರ ತುಂಬ ಚೆಂದವಿತ್ತು
ಮುಖಾ-ಮುಖಿ ಕುಳಿತು ಭಾವನಾಟ್ಯದ ಕತೆಯನ್ನ
ಕತೆ ಎಲ್ಲಿಂದ ಬಂತು, ಬಂದದ್ದು ಈಗ ಕಟ್ಟುಕತೆಯಷ್ಟೆ.
ಈಗಲೂ ನನಗೆ ಅವನ ಎಲ್ಲೋ ನೋಡಿದ ನೆನಪು
ನೆನಪು ಸ್ಪಷ್ಟ ಇಲ್ಲ. ಆತ ತಿರುಗಿ ಬರುವ
ನಂಬಿಕೆ ನನಗೆ ಎಳ್ಳಷ್ಟೂ ಇಲ್ಲ. ಮುಖ ತೋರದೆ
ಹಾಗೆ ಹೊರಟು ಹೋದದ್ದು ಮಾತ್ರ
ನನಗೇನೂ ಕೊಟ್ಟಂತಾಗಲಿಲ್ಲ.

'ಗಿಣ್ಣು' ಕವನ ಸಂಕಲನದಿಂದ

ಭಾನುವಾರ, ಮೇ 1, 2011

1996ರಲ್ಲಿ ಸಂಚಯ ಪ್ರಕಟಿಸಿದ ನನ್ನ ಬರೆಹ

ಬಸವಣ್ಣನ ಒಂದು ವಚನ


ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ ದೇಹವೇ ದೇಗುಲ
ಶಿರ ಹೊನ್ನ ಕಳಸವಯ್ಯ
ಅಯ್ಯಾ ಕೂಡಲ ಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಈ ವಚನದ ಕೊನೆಯ ಸಾಲಿನಲ್ಲಿ ಬಸವಣ್ಣ ಸ್ಥಾವರ ಮತ್ತು ಜಂಗಮ ಚಿಂತನಾ ರೂಪಗಳನ್ನು ಕಟ್ಟಿಕೊಟ್ಟಿದ್ದಾನೆ. ಇವೆರಡರ ನಡುವೆ ಇರುವ ತಾರತಮ್ಯ ಪ್ರಜ್ಞೆಯನ್ನು ಖಚಿತ ಪಡಿಸಿ, ಮೌಲ್ಯ ಪರವಾದ ತನ್ನ ನಿಖರ ನಿಲುವನ್ನು ಸ್ಪಷ್ಟಪಡಿಸಿದ್ದಾನೆ. ಇದಕ್ಕಾಗಿ ಒಂದು ಸಾಮಾಜಿಕ ಪ್ರತಿಮೆಯನ್ನು ಬಳಸಿದ್ದಾನೆ. ಆ ಮೂಲಕ ತರತಮ ಭಾವ ಮತ್ತು ಅದರ ಪ್ರಜ್ಞೆಯನ್ನು ಖಚಿತವಾಗಿ ಬೆಳೆಸಿದ್ದಾನೆ. ಉಳ್ಳವರು ಮತ್ತು ಬಡವರು ಎಂಬ ಸಾಮಾಜಿಕ ವರ್ಗಗಳನ್ನು ಒಳಗೆ ತಂದಿರಿಸಿಕೊಂಡಿದ್ದಾನೆ. ಉಳ್ಳವರೆಂದರೆ, ಸಮಾಜದಲ್ಲಿ ಮೇಲುಜಾತಿಯನ್ನು ಹುಟ್ಟಿನಿಂದ ಪಡೆದವರು, ವಿದ್ಯೆ ಮತ್ತು ಅಧಿಕಾರದ ಸ್ಥಾನಮಾನಗಳನ್ನು ಪಡೆದವರು, ಇವೆರಡರ ಬಲದಿಂದ ಸಮಾಜಿಕ ಸ್ಥಾನಮಾನ, ಧಾರ್ಮಿಕ ಸ್ಥಾನಮಾನ, ಅಧಿಕಾರ, ಇವೆಲ್ಲದರ ಬಲದಿಂದ ಧನ-ಧಾನ್ಯಗಳನ್ನು ಹೇರಳವಾಗಿ ಹೊಂದಿದವರು. ಸಮಾಜದ ಎಲ್ಲ ಬಲಗಳನ್ನು ತಮ್ಮ ಕೈ ವಶ ಮಾಡಿಕೊಂಡವರು ಅರ್ಥಾತ್ ಯಜಮಾನ ಸ್ಥಾನದಲ್ಲಿರುವವರು. ಉಳ್ಳವರು  ಚಿಂತನಾ ರೂಪಕ್ಕೆ ಬದಲಾಗಿ ಬಸವಣ್ಣ ಬಡವರು ಚಿಂತನಾ ರೂಪವನ್ನು ಚಲಾವಣೆಗೆ ತಂದಿದ್ದಾನೆ. ಬಡವರೆಂದರೆ  ಉಳ್ಳವರು ಹೊಂದಿರುವುದನ್ನು ಪಡೆದುಕೊಳ್ಳಲಾಗದ ಬಲಹೀನರು, ದೀನರು. ಈ ಬಡವನಲ್ಲಿ ಲೌಕಿಕ ಸುಖ   ಸಾಧನಗಳ ಸವಲತ್ತುಗಳಿಲ್ಲ, ಆದರೆ ಸಮೃದ್ಧ ಭಾವ ಜೀವನ, ಸರಳತೆ, ಮುಗ್ಧತೆ, ನೆಮ್ಮದಿ, ವಿಕಾರವಲ್ಲದ ಸೀದಾ-ಸಾದಾ ಮೊದಲಾದ ತನ್ನತನಗಳಿವೆ.   
ಲೌಕಿಕ ಸವಲತ್ತುಗಳನ್ನುಳ್ಳ, ವ್ಯವಹಾರ ಬಲ್ಲ ಉಳ್ಳವರು ಕಲ್ಲುಮಣ್ಣಿನ ಶಿವಾಲಯ-ದೇವಾಲಯ ಕಟ್ಟಿಸಬಲ್ಲರು ಮತ್ತು ಇಂಥ ಕಲ್ಲು ಮಣ್ಣಿನ ಕಟ್ಟಡದ ಹಕ್ಕು-ಅಧಿಕಾರ ಪಡೆಯಬಲ್ಲರು, ತಮ್ಮ ಹುಸಿ ಘನತೆ, ಗೌರವ, ದೊಡ್ಡಸ್ಥಿಕೆ ಮೆರೆಯಬಲ್ಲರು. ಇದು ಉಳ್ಳವರ ಉಪಭೋಗ ಮತ್ತು ಲೌಕಿಕ ಜೀವನದ ಮೂಲ ಅಂಗ. ಆದರೆ ಬಡವರು ಶಿವಾಲಯವನ್ನು ಹೇಗೆ ಒಳಹೋಗಬಲ್ಲರು? ಬಡವನಿಗೆ ಶಿವಾಲಯದ ಹಕ್ಕು, ಅಧಿಕಾರ, ಒಳ ಹೊಕ್ಕುವ ಹಕ್ಕು ಉಪಭೋಗ ಜೀವನೂ ಅಲ್ಲ, ವ್ಯಾವಹಾರಿಕ ಜೀವನವೂ ಅಲ್ಲ. ಅದೊಂದು ಆನುಭಾವಿಕ ಕ್ರಿಯೆ. ಅಂತರಂಗ ಮತ್ತು ಬಹಿರಂಗ ಜೀವನವನ್ನು ತೊಳೆದು ಶುಚಿ ಮಾಡುವುದು, ಅದಕ್ಕಾಗಿ ವಿಶ್ವ ಚೇತನದ ಮೊರೆ ಹೋಗುವುದು ಅಥವಾ ಆ   ಚೇತನವನ್ನು ತನ್ನೊಳಗೆ ಆವಾಹಿಸಿಕೊಳ್ಳುವುದು ಆಗಿದೆ. ಹೀಗೆ ಉಳ್ಳವರು ಮತ್ತು ಬಡವರು ತಮ್ಮದೇ ಆದ ಬೇರೆ ಬೇರೆ ನೆಲೆಗಳಲ್ಲಿ ಶಿವಾಲಯ ಮಾಡುತ್ತಾರೆ.
ಬಸವಣ್ಣನ ಕಾಲದಲ್ಲಿ ಉಳ್ಳವರು ಶಿವಾಲಯ ಮಾಡುವುದು ರೂಢಿಯಲ್ಲಿತ್ತು. ಅದಕ್ಕೆ ವಿರುದ್ಧವಾಗಿ ಬಡವರೂ ಶಿವಾಲಯ ಮಾಡುವುದನ್ನು ರೂಢಿಗೆ ತರಬೇಕಿತ್ತು. ಉಪಭೋಗ ಜೀವನದ ಸ್ಥಾನದಲ್ಲಿ ಸ್ವಾನುಭವದ ಅಂತಸ್ಥ ಜೀವನ ಕ್ರಮವನ್ನು ಚಾಲ್ತಿಗೆ ತರಬೇಕಿತ್ತು. ಇಂಥ ಸಂದರ್ಭದಲ್ಲಿ 'ನಾನೇನು ಮಾಡಲಿ ಬಡವನಯ್ಯ' ಎಂದು ಬಸವಣ್ಣ ಅಸಹಾಯತನದ ಉದ್ಗಾರ ಮಾಡಿದ್ದಾನೆ. ಬಡವರು ಶಿವಾಲಯ ಮಾಡುವ ಕ್ರಮದ ಮೇಲೆ ಒತ್ತು ಹಾಕಿದ್ದಾನೆ.
ಈ ವಚನದ ನಾಯಕ 'ನಾನು'- ಬ್ರಾಹ್ಮಣ ಕುಲದಲ್ಲಿ ಹುಟ್ಟಿದವನೂ ಬಿಜ್ಜಳನ ಆಸ್ಥಾನದಲ್ಲಿ   ಭಂಡಾರಿಯಾಗಿದ್ದವನೂ ಎಲ್ಲ ಬಗೆಯ ಸ್ಥಾನಮಾನ ಗೌರವಾದರಗಳನ್ನು ಪಡೆಯುತ್ತಿದ್ದನೂ ಆದ ಬಸವಣ್ಣನಲ್ಲ; ಮೂಲಭೂತ ಸವಲತ್ತುಗಳಿಂದಲೂ ವಂಚಿತರಾಗಿ ಲೌಕಿಕ ಜೀವನ ನರಕವಾಗಿದ್ದ ಸಮಾಜದ ಬಲಹೀನ, ದೀನ ದಲಿತರ ಸಾಂಸ್ಕೃತಿಕ ಚಳವಳಿಯ ನೇತಾರನಾಗಿದ್ದ ಬಸವಣ್ಣ. ಹಾಗಾಗಿ ಲೌಕಿಕ ಸಲತ್ತುಗಳಿಲ್ಲದೆ ನರಕ ಜೀವನ ನಡೆಸುತ್ತಿರುವ ಬಡವನಿಗೆ ಇಲ್ಲಿ ಎಚ್ಚರಿಕೆ ಇದೆ. ಲೌಕಿಕವಾಗಿ ಬಡವನಾಗಿದ್ದೂ ಅಲೌಕಿಕವಾಗಿ ನಡೆಸಬಹುದಾದ ಸುಖ ಜೀವನದ  ಹೊಸ ಹಾದಿಯ ಕಡೆಗೆ ಗಮನ ಸೆಳೆಯಲಾಗಿದೆ.
ಇದು ಲೌಕಿಕ ಸವಲತ್ತುಗಳಿಲ್ಲದ ಬಡವನಿಗೆ ಆತ್ಮವಿಶ್ವಾಸ, ಸ್ವಾಭಿಮಾನ ಮೂಡಿಸುವ ಅಂತಸ್ಥ ಶಕ್ತಿಯ ಕಡೆ ತೋರುಬೆರಳಾಗಿದೆ. ಇದಕ್ಕೆ ಲಗತ್ತಾಗಿ 'ಕಾಲೇ ಕಂಭ ದೇಹವೇ ದೇಗುಲ ಶಿರಹೊನ್ನ ಕಳಸವಯ್ಯ' ಎಂಬ ಸಾಲು ಇದೆ. ಕಾಯದಿಂದ ಬಂದ ಕಾಯಕವನ್ನು ಮಾಡುವ ಕಾಯದ ಶಿವಾಲಯ  ಪರಿಯನ್ನು ಎತ್ತಿ ಹೇಳಿದ್ದಾನೆ. ಶಿವಾಲಯ ಮಾಡುವ ಸುಖದ ಲೋಕ ಕಾಯಕ ಮಾಡುವ ಕಾಯದಲ್ಲೇ ಅಡಗಿರುವುದನ್ನು ಬಿಚ್ಚಿ ತೋರಿದ್ದಾನೆ. ಜಗತ್ತಿನ ಸೃಷ್ಟಿ ಚೈತನ್ಯವೆಲ್ಲ ಮಾನವನ ಅಳತೆಗೆ ಮೀರದ ಅವನ ದೇಹದಲ್ಲೇ ಇರುವುದನ್ನು ದೇಹವೇ ದೇಗುಲ ಕಲ್ಪನೆಯ ಮೂಲಕ ಕಾಣಿಸಿದ್ದಾನೆ. ಅಂದರೆ ಈ ಜಗತ್ತನ್ನು ನಡೆಸುವ ಹಾಗೂ ಮಾನವನ ಅಳವಿಗೆ ಮೀರಿದ ದೈವಶಕ್ತಿಯನ್ನು ಮಾನವನ ಕಾಯದಲ್ಲೆ ಕಂಡುಕೊಳ್ಳಲಾಗಿದೆ. ಈ ಸಾಲು ನಾಥ ಪಂಥದ ಮೂಲ ತಿರುಳನ್ನು ಎತ್ತಿ ಹೇಳುವ ಪದಗುಚ್ಚಗಳಿಂತಿದೆ. ಈ ಜಗತ್ತಿನ ಸೃಷ್ಟಿ ಚೈತನ್ಯವನ್ನು ನಾಥಪಂಥಿಗಳು ತಮ್ಮ ಮೈಯಲ್ಲೇ ಕಂಡುಕೊಳ್ಳುತ್ತಾರೆ. ಆ  ಚೈತನ್ಯ ಸಿದ್ಧಿಗಾಗಿ ತಮ್ಮ ದೇಹದ ಮೇಲೆ ಒಡೆತನ ಸಾಧಿಸಲು ಅನೇಕ ಬಗೆಯ ಸಾಧನೆಗಳ ಮೂಲಕ ಶ್ರಮಿಸುತ್ತಾರೆ. ಬಸವಣ್ಣ ಈ ವಚನದಲ್ಲಿ ನಾಥಪಂಥದ ಸಿದ್ದಾಂತವನ್ನು ಸಾಮಾಜಿಕ ಪ್ರತಿಮೆಯಾಗಿ ಬಳಸಿಕೊಂಡಿದ್ದಾನೆ. ನಾಥ ಪಂಥದ ದೀಕ್ಷೆ ಪಡೆದಿದ್ದ ಅಥವಾ ಅದರ ಪ್ರಭಾವಕ್ಕೆ ಒಳಗಾಗಿದ್ದ ಅಲ್ಲಮ ಪ್ರಭುವಿನ ನಿಕಟ ಸಂಪರ್ಕದಲ್ಲಿ ಬಸವಣ್ಣನಿಗೆ ಇದು ಸರಳ ಸಾಮಾನ್ಯ ಸಂಗತಿಯಾಗಿಯೇ ಇದ್ದು ಅವನ ವಚನದಲ್ಲಿ ಒಳನುಸುಳಿದೆ. ಸ್ಥಾವರ ಮತ್ತು ಜಂಗಮ ಚಿಂತನಾ ರೂಪಗಳು ಪಡಿಮೂಡಿದ್ದೂ ಇದೇ ಮೂಲದಿಂದಲೇ ಇರಬಹುದಾಗಿದೆ. ದೇಹವೇ ದೇಗುಲವಾಗಿರುವ ಮಾನವನ ನಿಜಗುಣವನ್ನು ಅರಹುವ ಮೂಲಕ ಬಸವಣ್ಣ ಸಮಾಜದ ಮೂಢ ನಡೆ ಮತ್ತು ಅರಿವಿನ ನಡೆಗಳ ವ್ಯತ್ಯಾಸ ಮತ್ತು ತಿಳುವಳಿಕೆಯನ್ನು ಮೂಡಿಸಿದ್ದಾನೆ. ಈ ಮೂಲಕ  ಅರಿವಿನ ನಡೆ ಯಾವುದು ಎಂಬುದರ ಬಗ್ಗೆ ಹೊಸಹಾದಿ ತೋರಿಸಿದ್ದಾನೆ.
ಬೌದ್ಧ ಧರ್ಮ ಅವನತಿಯಾಗುತ್ತಿದ್ದ ವೇಳೆಯಲ್ಲಿ ಹುಟ್ಟಿದ ನಾಥಪಂಥ ಅವೈದಿಕ ಪಂಥಗಳಲ್ಲೊಂದು. ಈ ಪಂಥ ಹನ್ನೆರಡನೆಯ ಶತಮಾನದ ನಡೆದ ಚಳವಳಿಯಲ್ಲಿ ತಿಳಿದೊ ತಿಳಿಯದೆಯೊ ಬೇರುಬಿಟ್ಟಿತ್ತು ಎಂಬುದು ಈ ವಚನದಿಂದ ತಿಳಿಯುತ್ತದೆ. ಇಲ್ಲಿನ ನಾಥಪಂಥದ ಆಶಯಗಳು ಇರುವವರ ಮತ್ತು ಇರದವರ ನಡುವೆ ಗೆರೆ ಎಳೆದು ಇಲ್ಲದವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಮೂಡಿಸುವ ಪ್ರಯತ್ನದಲ್ಲಿ ಜಂಗಮ ಚಿಂತನಾ ರೂಪ ಯಶಸ್ವಿಯಾಗಿ ಮೈ ತಳೆದಿದೆ.
ಉಳ್ಳವರು ಶಿವಾಲಯ ಮಾಡುವ ಸ್ಥಾವರ ಧರ್ಮದ ವಿರುದ್ಧ ದೀನರ, ಬಲಹೀನರ, ಕೆಳವರ್ಗದ ಬಡಜನರ ಜಂಗಮ ಧರ್ಮವನ್ನು ಎತ್ತಿಹಿಡಿಯಲಾಗಿದೆ. ಅವೈದಿಕ ನಾಥಪಂಥ ಬಸವಣ್ಣನ ಈ ವಚನದಲ್ಲಿ ಮೈ ಪಡೆದು ಹನ್ನೆರಡನೆಯ ಶತಮಾನದಲ್ಲಿ ನಡೆದ ಚಳವಳಿಯ ಆಶಯಗಳನ್ನು ಬಿಂಬಿಸುವ ಸಾಮಾಜಿಕ ಪ್ರತಿಮೆಯಗಿ ಮೈ ತಳೆದಿದೆ.       

ಶನಿವಾರ, ಏಪ್ರಿಲ್ 23, 2011

ಕೊಂಡಿ

ವೇಣುಗೋಪಾಲ ಸೊರಬ ಅವರು ನನ್ನ ಕಾಲೇಜಿನ ದಿನಗಳಲ್ಲಿ ನಾನು ಗೀಚಿದ್ದನ್ನೆಲ್ಲ  ಓದುವ ಮೊದಲ ಓದುಗರಾಗಿದ್ದರು.  ವೈಎನ್ ಕೆ ಅಂದು ಪ್ರಜಾವಾಣಿ ಸಂಪಾದಕರಾಗಿದ್ದರು, ಅಲ್ಲದೆ ಸೊರಬ ಅವರ ನಿಕಟ ಪರಿಚಯದವರೂ ಆಗಿದ್ದಿರಬೇಕು. ಈ ಕವಿತೆಯನ್ನು ಓದಿದ ಸೊರಬ ಅವರು 'ನಿಮಗೆ ವೈಎನ್ ಕೆ ಅವರ ಪರಿಚಯ ಮಾಡಿಸುತ್ತೇನೆ. ಅವರಿಗೆ ಈ ಪದ್ಯ ತೋರಿಸೋಣ. ಅವರು ಹೊಸ ಬರೆಹಗಾರರಿಗೆ ಪ್ರೋತ್ಸಾಹ ನೀಡುತ್ತಾರೆ. ಪ್ರಜಾವಾಣಿಯಲ್ಲಿ ನಿಮ್ಮ ಪದ್ಯ ಪ್ರಕಟವಾಗಬಹುದು` ಎಂದರು. ನನ್ನ ಮೇಷ್ಟ್ರು ನನ್ನ ಹಿತವನ್ನೆ ಬಯಸಿದ್ದರು. ಆದರೆ ನನ್ನ ಮನಸ್ಸು ಇದು ಸರಿ ದಾರಿ  ಎಂದು ಒಪ್ಪಿಕೊಳ್ಳಲಿಲ್ಲ. ಅಂದ ಮೇಲೆ ಮೇಷ್ಟ್ರೊಂದಿಗೆ ವೈ ಎನ್ ಕೆ ಅವರನ್ನು ಕಾಣಲೂ ಹೋಗಲಿಲ್ಲ.. ಇದು ಅಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದರೆ ಯಾರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರುತ್ತಿತ್ತೋ ಕಾಣೆ. ನಂತರ 1985ರಲ್ಲಿ ಪ್ರಕಟವಾದ ನನ್ನ ಮೊದಲ ಕವನ ಸಂಕಲನ 'ಗಿಣ್ಣು' ಸೇರಿಕೊಂಡಿತು. ಯಾರ ಗಮನಕ್ಕೂ ಬಾರದೆ ಹೋಯಿತು. ಅದನ್ನಿಲ್ಲಿ ಮತ್ತೆ  ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಇಲ್ಲಿ ಪ್ರಕಟವಾಗಿರುವ ಉಳ್ಳವರ ಪರವಾದ ಬಲಿಷ್ಟ ವ್ಯವಸ್ಥೆ ತಂದೊಡ್ಡಿದ ದಾರುಣ ಸ್ಥಿತಿ ಮತ್ತು ಅದರಿಂದ ಉಂಟಾದ ದೀನ ಮತ್ತು ಅಸಹಾಯ ಸ್ಥಿತಿಯಲ್ಲೂ  ಬಲಿಯಾಗಲು ಸಿದ್ಧವಿಲ್ಲದ ಪ್ರಜ್ಞೆಯೇ ಪ್ರಭುತ್ವವ ವಿರೋಧಿ ಆಗಿದೆ.  ಇದು ಮಾನವನೊಳಗಿರುವ ಮತ್ತೊಬ್ಬನನ್ನು ತನ್ನ ಅಡಿಯಾಳಾಗಿಸಿಕೊಳ್ಳುವಲ್ಲಿನ ಹೆಗ್ಗಳಿಕೆಯ ಖುಷಿ ಮತ್ತು ಸರೀಕರ ಸರಿಸಮ ತಲೆ ಎತ್ತಲಾಗದೆ ಹೋದವನ ವಿಷಾದ - ಇವುಗಳ ನಡುವಿನ ತಿಕ್ಕಾಟವಾಗಿದೆ. ಕೆಳಗೆ ಬಿದ್ದವನ ಪರವಾದ ಓಲುವೆ ಮನ ಒಪ್ಪುವಂಥದ್ದಾಗಿದ್ದು ಅವನ ಮನಸ್ಥಿತಿ ಇಲ್ಲಿ ಕೇಂದ್ರಬಿಂದುವಾಗಿದೆ.
ಪ್ರತಿಮೆ ಮತ್ತು ಭಾವ ನಿರೂಪಣೆ ಇಲ್ಲಿ ಒಂದಕ್ಕೊಂದು ಹೆಣೆದುಕೊಂಡಿದ್ದು ತೀವ್ರ ಅನುಭವಕ್ಕೆ ಕಾರಣವಾಗಿರುವಂತೆ ಇದೆ.
#   .




ಕೊಂಡಿಗಳೋ ಕೊಂಡಿಗಳು
ಅರೆ-ಮರೆ ಬಾಚಿ ಬಿಗಿಯುವವೊ
ಕೊಕ್ಕೆಗಳೋ ಅಂಕುಶಗಳು
ಬಿಗಿ ಹಿಡಿದು ಜಡಿಯುವವೊ
ಕುಣಿಯುತ ಕುಳಿ ಗಣಿ ತೋಡುತ
ದಯೆಯ ಮುಖಕೆ ರಾಚುತ ಬಡಿಯುವವೊ


ಕೂದನಿ ಮಾರ್ದನಿ ಇಲ್ಲದ ಘೀಳೋ
ಇದು ಘೀಳು: ಕರಿ ಮಟ್ಟಿ ಯಾ ಗಟ್ಟಿ
ಜಗಜಟ್ಟಿಯ ತೊಡೆ ತೋಳಬಲದ ಘೀಳು.
ಅಂಕೆಗೆ ಪಂಖ ಚಾಮರ ಬೀಸುವ
ನಾಲ್ವರ ಹಿಂಡು ಭಾಜನ ಭೋಜನವೋ
ಅಬ್ಬರ ಉಬ್ಬರ ಹೂತ್ಕರಿಸೊ ಬಲವೋ


ಮುನ್ನೋಟದ ಹೆಜ್ಜೆ
ಅಳಿಸುವ ಛಲವೋ
ಮುಂಗಾಣುವ ಬಲ
ಸಡಿಲಿಸುವ ಹಟವೋ
ಅದು ಸಲ್ಲ ಇದು ಹೊಲ್ಲ
ಮೈ ಮನಗಳ ಕುಣಿಕೆಯೋ


ಕತ್ತರಿಸುವ ಉತ್ತರಿಸುವ
ಚಾಣದ ಏಟು ಉಳಿಯ ಪೋಕು
ತೆಗೆದ ಕೆತ್ತೆನೆಯ ಕುಸುರಿ ಕೆಲಸವೋ


ಉತ್ಬಿತ್ತು ಉತ್ಬಿತ್ತು ನಿರ್ಜೀವವೋ


ಮುರುಟಿರೋ ಕೈ ಕಾಲು ಎದೆ ಕಣ್ಣು
ತುಂಬ ಸುತ್ತಿದೆಯೋ ಕೊಂಡಿಯ ಗೂಡು


'ಗಿಣ್ಣು' ಕವನ ಸಂಕಲನದಿಂದ