ಬುಧವಾರ, ನವೆಂಬರ್ 28, 2012

ಮಲ್ಲಿಗೆಯ ಚಂದ್ರ

ಮಲ್ಲಿಗೆಯ ಚಂದ್ರ
ನಸುನಗುತ ಬಂದ
ಮನಮೋಹ ಹೊತ್ತು ತಂದ

ಇಳಿಮುಖದ ರವಿಯ
ಬೆದರಿಕೆಯ ಇರುಳ
ಅಣಕಿಸುತ ತಂಪು ಕವಿದ

ತಾಳೆಗರಿ ಜಡೆಯ
ಒನೆದಾಡೊ ಮಗುದೆ
ನಡೆದಾಡಿ ಬಳಿಗೆ ಬರುತ

ನಡುವನ್ನೆ ಹಿಡಿದು
ಪರಿಮಳವ ಹರಡಿ
ತೂಗಾಡಿ ತೊನೆದು ಕುಣಿದು

ಬಳಕುತ್ತ ಬಳಸಿ
ಹಿಡಿಯುತ್ತ ಹಿಡಿಸಿ
ನಲಿಯುತ್ತ ಹೆಜ್ಜೆಗೊಲಿಸಿ

ಧೀಂ ಧೀಂ ತಕಿಟ
ತೋಂ ತೋಂ ತಕಿಟ
ಮಣಿವಲ್ಲಿ ಮುಗುಳು ಅರಸಿ

ಬಿದ್ದನೊಬ್ಬ ಕಡೆ
ನಿಂತಳೊಂದು ಕಡೆ
ಅಯ್ಯೊ ಎನುವರಿಲದೆ

ಮಲ್ಲಿಗೆಯ ಚಂದ್ರ
ವಿಷತುಂಬಿ ನಿಂತ
ಮಧುಮಾಸ ಮರೆತು ನಡೆದ

ಶನಿವಾರ, ನವೆಂಬರ್ 10, 2012

ಹೇಳೊ ಹೇಳು

ಅಲ್ಲಮ ನಿನಗೆ ಎಲ್ಲಿಂದ ಬಂತೊ ಆ ಮಿಡಿತ
ಆ ಲತೆ ಹೇಗೆ ಮನಸೋತು ಬಂದಳೊ ಆಗ

ಬವಳಿ ಬಂದು ಮೈಮರೆತು ಹೇಗೆ ಬಿದ್ದಳೊ
ತತುಕ್ಷಣವೆ ಧಿಮಿಗುಡುವ ಮೃದಂಗ ಹಾರಿತೆಲ್ಲಿಗೊ

ಅದೇನು ಕಾತುರ, ಜತೆಜತೆಯ ಆತುರ ಹೀಗೆ?
ಬೆನ್ಬಿಡದೆ ಏಕೆ ಹಿಂಬಾಲಿಸಿದೆ ನೀ ಹಾಗೆ?

ಅರಿಯದೆ ನಿನಗರಿಯದೆ ? ಹೇಳು ಈಗ
ಕಾಮಲತೆ ಜತೆಗೆ ಹೇಗೆ ಹಬ್ಬಿಕೊಂಡೆ ಆಗ?

ಕಡೆಮೊದಲು ಕಾಣದೆ ತಬ್ಬಿ ಉಬ್ಬಿ ನೀವಿದ್ದು
ಮೈದುಂಬಿ ತವಕದುಬ್ಬೇಗದಲ್ಲಿ ಲೋಕ ಮರೆತದ್ದು

ಎಷ್ಟುಸಲ ನೀ ಕಾಲ ಕಳೆದದ್ದು ಎಷ್ಟುಸಲ?
ಆ ಲತೆ ಹೋದರೆ ಅಳುತ ಮೈಮರೆತೆ ಎಷ್ಟುಸಲ?

ಬಿಡದೆ ಬಿಟ್ಟರೂ ಬಿಡದೆ ಕಾಡಿದ್ದು ಎಷ್ಟುಸಲ? 
ಒಂದು ಬಿಟ್ಟು ಮತ್ತೊಂದು ಹುಡುಕಿದುದು ಸುಲಭ ಫಲ?

ಅಲ್ಲಮ ನಿನಗೆ ಎಲ್ಲಿಂದ ಬಂತೊ ಆ ಮಿಡಿತ
ಹೊಸ ಮೆರಗು ಬೆರಗು ಬೆಳೆ ಬೆಳೆದ ಜೀವಸ್ಪಂದ

ಹೇಳೊ ಹೇಳು ನೀ ಏಕಾಏಕಿ ಸಾಧಿಸಿದೆಯೊ ಹೊಸ ಬೆಳಕ?

ಭಾನುವಾರ, ಸೆಪ್ಟೆಂಬರ್ 16, 2012

ಎತ್ತಪ್ಪನ ಕಥನ


ಕಾಡುಗೊಲ್ಲ ಸಮುದಾಯದ ಮೊದಲ ಸಾಂಸ್ಕೃತಿಕ ವೀರ ಎತ್ತಪ್ಪ. ಅತನ ಆಶಯವನ್ನು ನಂತರದಲ್ಲಿ ಜುಂಜಪ್ಪ ಮುನ್ನಡೆಸಿದ್ದಾನೆ. ಕಾಡುಗೊಲ್ಲ ಸಮುದಾಯದಲ್ಲಿ ಇವರ ಕುರಿತು ಹೇಳುವ ಕತೆಗಳು, ಹಾಡುಗಳು, ಗಣೆಕಾವ್ಯಗಳು ಈ ಸಾಂಸ್ಕೃತಿಕ ವೀರನನ್ನು ಪರಿಚಯ ಮಾಡಿಕೊಟ್ಟಿವೆ. ಎತ್ತಪ್ಪನ ಕುರಿತ ಬರಹ ನಾಲ್ಕು ಭಾಗಗಳಲ್ಲಿವೆ.
1. ಶಿವನ ಕೃಪೆಯಿಂದ ಎತ್ತಪ್ಪ ಹಾಗೂ ಆತನ ಸಹಚರ ಮಾರಮುತ್ತಪ್ಪನ ಜನನ. ತುಪ್ಪಾಡಿ ಕಾವಲಿನಲ್ಲಿ ದನ ಮೇಯಿಸಿದ ಎತ್ತಪ್ಪ ಮೇಲುವರ್ಗದ ಆರ್ಥಿಕ ರಾಜಕಾರಣದ ಪರಿಣಾಮವಾಗಿ ಸಂಡೂರು ಕಾವಲಿನಲ್ಲಿ ಸೆರೆ ಬೀಳುವಂತೆ ಮುನಿಗಳಿಂದ ಶಾಪ ಪಡೆಯುವುದು. ಕಳ್ಳಮಡಗು ಕಾವಲಿನಲ್ಲಿ ಸ್ನಾನ ಮಾಡುತ್ತಿದ್ದ ದೇವಕನ್ನಿಕೆಯರೊಂದಿಗೆ ಎತ್ತಪ್ಪ ತುಂಟಾಟ ಆಡುವುದು. ಸಂಡೂರು ಕಾವಲಿನ ಬೇಡರು ಎತ್ತಪ್ಪನ ತಲೆ ತೆಗೆಯಲೆಂದು ಬಸುರಾದ ದೇವಕನ್ನಿಕೆಯರು ಶಾಪ ನೀಡುವುದು. 
2. ಎತ್ತಪ್ಪನ ಮದುವೆ. ಕಾಡುಗೊಲ್ಲ ಸಮುದಾಯದ ಪಶುಪಾಲನ ವೃತ್ತಿಯ ಪಾವಿತ್ರ್ಯತೆಯನ್ನೂ ಆ ವೃತ್ತಿಯ ಆರ್ಥಿಕ ಭದ್ರತೆಯನ್ನೂ ಆತ ರೂಪಿಸುವುದು. ಬೇಡ ಬುಡಕಟ್ಟು ಸಮುದಾಯಗಳಿಂದ ಕಾಡುಗೊಲ್ಲರ ಸ್ವಂತಿಕೆಗೆ ಎದುರಾದ ಸವಾಲುಗಳನ್ನು ಗೆಲ್ಲುವುದು. ತನ್ನನ್ನು ಮೋಹಿಸಿ ಬಂದ ಬೇಡ ನಾರಿಯರನ್ನು ಎತ್ತಪ್ಪ ಓಡಿಸುವುದು. ಅವನನ್ನು ಬೇಡರ ಗುಡ್ಡದ ಬೋರಿ ಹಿಂಬಾಲಿಸುವುದು. ವೈರಿಗಳು ಎಸೆದ ಸವಾಲನ್ನೊಪ್ಪಿಕೊಂಡು ಅವರನ್ನು ಪಗಡೆಯಾಟದಲ್ಲಿ ಎತ್ತಪ್ಪ ಸೋಲಿಸುವುದು. 
3. ಪಶುಪಾಲಕ ಎತ್ತಪ್ಪ ರಾಸುಗಳಿಗೆ ಹುಲ್ಲು ನೀರು ಅರಸುತ್ತ ಸಂಡೂರು ಕಾವಲಿಗೆ ಪಯಣ ಮಾಡುವುದು. ಮಡದಿ ಮಲ್ಲಮ್ಮಳಿಗೆ ತನ್ನ ಜೀವಿತದ ಕುರುಹು ತಿಳಿಸುವುದು. ಗುಡ್ಡದ ಬೋರಿಯ ಕಾಮದ ಬೇಡಿಕೆಯನ್ನು ತಳ್ಳಿಹಾಕುವುದು. ನಿರಾಶಳಾದ ಬೋರಿ ಸಂಡೂರು ಬೊಮ್ಮನನ್ನು ಎತ್ತಪ್ಪನ ವಿರುದ್ಧ ಎತ್ತಿಕಟ್ಟುವುದು. 
4. ಗುಡ್ಡದ ಬೋರಿ ಎತ್ತಪ್ಪನ ವಿರುದ್ಧ ದ್ವೇಷ ಸಾಧನೆ ಮಾಡುವುದು. ಎತ್ತಪ್ಪನ ಸೆರೆ ಹಿಡಿಯಲು ಸಂಡೂರು ಬೊಮ್ಮನಿಗೆ ದಾಸಪ್ಪ ಸಹಾಯ ಮಾಡುವುದು. ಮಾರ ಮುತ್ತಣ್ಣನ ಎಚ್ಚರಿಕೆ ಕಡೆಗಣಿಸಿ ಸಂಡೂರು ಕಾವಲು ಪ್ರವೇಶಿಸಿದ ಎತ್ತಪ್ಪ ವೈರಿಗಳಿಗೆ ಸೆರೆ ಸಿಕ್ಕಿ ಶಿಕ್ಷೆ ಅನುಭವಿಸುವುದು. ಗುಡ್ಡದ ಬೋರಿಯ ಅಪೇಕ್ಷೆಯಂತೆ ಸಂಡೂರು ಬೊಮ್ಮ ದಾಸಯ್ಯನ ಮೂಲಕ ಯತ್ತಪ್ಪನ ತಲೆ ಕತ್ತರಿಸುವುದು.
ಈ ಕಥಾನಕದಲ್ಲಿ ಮುಖ್ಯವಾಗಿ ನಿರೂಪಿತವಾಗಿರುವ ಈ ಸಂಗತಿಗಳು - ಎತ್ತಪ್ಪ ಕಾಡುಗೊಲ್ಲ ಸಮುದಾಯದ ಆರ್ಥಿಕ ಬುನಾದಿಯನ್ನು ಭದ್ರಗೊಳಿಸಿದವನು; ಆ ಮೂಲಕ ಆ ಜನಾಂಗವನ್ನು ಸುಸ್ಥಿತಿಗೆ ಮತ್ತು ಬೆಳವಣಿಗೆಯ ಜಾಡಿಗೆ ತರಲು ಪ್ರಯತ್ನ ಮಾಡಿದವನು ಎಂದೇ ಬೋಧಿಸುತ್ತವೆ. ಈ ಉದ್ದೇಶ ಸಾಧನೆಗೆಂದೆ ಎತ್ತಪ್ಪನ ಜನನವಾಯಿತೆಂಬುದು ಕತೆಯ ನಿರೂಪ. ಈ ಅಂಶ ಕಾಡುಗೊಲ್ಲ ಸಮುದಾಯ ತನ್ನ ಆರಂಭಿಕ ಹಂತದಲ್ಲಿ ಅಂದರೆ, ಎತ್ತಪ್ಪನ ಕಾಲದಲ್ಲಿ ಎದುರಿಸುತ್ತಿದ್ದ ಬಡತನದ ಹೀನಸ್ಥಿತಿಯನ್ನು ಸೂಚಿಸುತ್ತದೆ.  ತನ್ನ ಜನಾಂಗದ ಏಳಿಗೆಗೆ ದುಡಿದ ಎತ್ತಪ್ಪನಿಗೆ ಬೇಡ ಮಹಿಳೆಯರು ಮತ್ತು ಬೇಡ ನಾಯಕರು ವೈರಿಗಳಾಗಿ ಎದುರು ನಿಲ್ಲವರು. ಆದರೂ ಮೇಲುವರ್ಗದ ಮುನಿ ಮತ್ತು ದೇವಕನ್ನಿಕೆಯರು ಅವನ ವಿರುದ್ಧ ದ್ವೇಷ ಸಾಧಿಸುವರು. ಶ್ರಮಹೀನ ವೃತ್ತಿ ಸಮುದಾಯದ ಮುನಿಗಳು ತಮ್ಮ ಸುತ್ತಲ ಪ್ರದೇಶದ ಮೇಲಿನ ತಮ್ಮ ಆಜನ್ಮ ಅಧಿಕಾರವನ್ನು  ಆಧರಿಸಿ, ತಮ್ಮ ಪ್ರದೇಶದಲ್ಲಿ ಬೆಳೆದ ಹಸಿರು ಮೇಯುವ ರಾಸುಗಳ ಉತ್ಪನ್ನದ ಮೇಲೂ ತಮ್ಮ ಹಕ್ಕು ಸ್ಥಾಪಿಸುವರು. ಮುನಿಗಳ ಶ್ರೇಷ್ಟತೆ ಕಲ್ಪನೆಯ ಮೂಲಕವೆ ಎತ್ತಪ್ಪ ತನ್ನ ಆರ್ಥಿಕ ಹಕ್ಕಿಗೆ ಎದುರಾದ ಆತಂಕವನ್ನು ನಿವಾರಿಸಿಕೊಳ್ಳುವನು.  ಬಂಡವಾಳ ಸಾಮ್ರಾಜ್ಯಶಾಹಿ ಪ್ರವೃತ್ತಿಯಲ್ಲಿ ಮುನಿಗಳು ತಮ್ಮ ಸಂಪರ್ಕಕ್ಕೆ ಬಂದವರೆನ್ನೆಲ್ಲ ಆವರಿಸಿಕೊಳ್ಳುವರು. ಇಂಥ ಕ್ರಮಕ್ಕೆ ತಡೆಯೊಡ್ಡುವ ಎತ್ತಪ್ಪ ಆರ್ಥಿಕ ಶೋಷಣೆಯನ್ನೂ ಅದರಿಂದ ತನಗೆ ಉಂಟಾಗುತ್ತಿದ್ದ ನಷ್ಟವನ್ನೂ ತಪ್ಪಿಸಿಕೊಳ್ಳುವನು. ಶ್ರಮ ದುಡಿಮೆಯ ಹಾದಿ ಕಾಣದ ಮುನಿಗಳು ಇದರಿಂದ ಕುಪಿತರಾಗುವರು. ತಮ್ಮ ಕುಟಿಲ ನೀತಿಗೆ ಸೋಲುಣಿಸಿ ಎದುರಾದ ಎತ್ತಪ್ಪನನ್ನು ನಿರ್ನಾಮ ಮಾಡಲು ನಿರ್ಧರಿಸಿ  ಶಾಪ ನೀಡುವರು. ಶಾಪ ಅವರ ಆ ಸಂದರ್ಭದ ಕೇವಲ ಕ್ರೋಪೋದ್ರಿಕ್ತ ಮಾತುಗಳಾಗಿರದೆ ದ್ವೇಷ ಸಾಧನೆಯ ಮೂಲ ಮಂತ್ರವಾಗಿದೆ. ಮುನಿ ಶಾಪದ ಮುಂದುವರೆದ ರೂಪವಾಗಿರುವ ದೇವ ಕನ್ನಿಕೆಯರ ಶಾಪ ಗ್ರಾಮ ದೇವತೆಗೆ ಸಂಬಂಧಿಸಿದಂತಿರುವ ಜಾತಿ ಸಂಕರದ ಕತೆಯನ್ನು ನೆನಪಿಗೆ ತರುತ್ತದೆ. ಅನುಲೋಮ ವಿವಾಹ ಪದ್ಧತಿಯಲ್ಲಿಲ್ಲದ ಜಾತಿ ಭೇದ ಮತ್ತು ಜಾತಿ ದ್ವೇಷವನ್ನು ವಿಲೋಮ ಪದ್ಧತಿಯಲ್ಲಿ ಅನುಸರಿಸಲಾಗಿದೆ.  ವಿಲೋಮ ಸಂಬಂಧಗಳು ಕೆಳಜಾತಿ ಅಥವಾ ಜಾತಿಯಾಚೆಗಿನ ಸಮುದಾಯಗಳಿಗೆ ಸೇರಿದ ಪುರುಷರ ಜೀವಕ್ಕೆ ಸಂಚಕಾರ ತಂದೊಡ್ಡುತ್ತದೆ. ಇದು ನಿಷಿದ್ಧ. ವಿಲೋಮ ವಿವಾಹ ವಿರುದ್ಧ ಕೆಳಜಾತಿ ಪುರುಷರನ್ನು ನಿರ್ಬಂಧಿಸುವ ಮತ್ತು ಅಂಥ ನಡೆಯ ವಿರುದ್ಧ ಎಚ್ಚರ ನೀಡುವ ಕ್ರಮವಿದಾಗಿದೆ. ಮುನಿಗಳು ಆರ್ಥಿಕ ಶೋಷಣೆಗೆ ಅವಕಾಶ ದೊರಕದ ವಿರುದ್ಧ ಮತ್ತು ದೇವ ಕನ್ನಿಕೆಯರು ವಿಲೋಮ ಸಂಬಂಧದ ವಿರುದ್ಧ ತೆರೆಮರೆಯ ರಾಜಕಾರಣದಲ್ಲಿ ತೊಡಗಿ ದ್ವೇಷ ಸಾಧಿಸುವರು. ಈ ಏಕ ಮಾತ್ರ ಅಂಶ ಎತ್ತಪ್ಪನ ತಲೆತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎತ್ತಪ್ಪನನ್ನು ಸೆರೆ ಹಿಡಿಯುವಲ್ಲಿ ಮತ್ತು ಅವನ ತಲೆ ತೆಗೆಯುವಲ್ಲಿ ಮತ್ತೊಂದು ಬುಡಕಟ್ಟು ಸಮುದಾಯವಾದ ಬೇಡರನ್ನು ಎತ್ತಿ ಕಟ್ಟಲಾಗುತ್ತದೆ. ಹಾಗೆಯೇ ವೈಷ್ಣವ ಪಂಥಕ್ಕೆ ಸೇರಿದ ದಾಸಪ್ಪ ಸಂಪ್ರದಾಯದ  ಜನರನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಯಾವುದೇ ಕೆಳ ಸಮುದಾಯವೊಂದು ತನ್ನ ಸಾಮಾಜಿಕ ವ್ಯವಸ್ಥೆಯ ಅಧೀನತೆಯನ್ನು ಧಿಕ್ಕರಿಸಿ ಶಕ್ತವಾಗುವ ಪ್ರಯತ್ನ ಮಾಡಿದ್ದಲ್ಲಿ ಆಗ ಅದನ್ನು ತನ್ನ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಉಳಿದ ಕೆಳ ಸಮುದಾಯಗಳನ್ನು  ಛೂ ಬಿಟ್ಟು ಬೇಟೆಯಾಡುತ್ತದೆ. ಇದು ಮುನಿ ಸಮುದಾಯ ಸ್ವಹಿತ ರಕ್ಷಣೆ ಮಾಡಿಕೊಳ್ಳುವಲ್ಲಿ ಅನುಸರಿಸಿದ ರಾಜಕಾರಣದ ಸ್ವರೂಪವನ್ನೂ ಆರಂಭಿಕ ಹಂತದಿಂದಲೆ ಸ್ವ ಸಮುದಾಯ ಕೇಂದ್ರಿತ ರಾಜಕಾರಣ ರೂಢಿಸಿಕೊಂಡು ಬಂದ ಬಗೆಯನ್ನೂ  ಅರುಹುತ್ತದೆ.  
ಕಾಡುಗೊಲ್ಲ ಬುಡಕಟ್ಟಿನಲ್ಲಿ ರಾಸುಗಳ ಪಾಲನೆಯ ವೃತ್ತಿಯನ್ನು ಅರೆರಾಯ ಮತ್ತು ಬೋರೆರಾಯರ ಮಕ್ಕಳಾದ ಅಂಬೆರಾಯ ಮತ್ತು ತುಂಬೆರಾಯರು ಆರಂಭಿಸಿದರು. ಅವರು ಪಶುಪಾಲನೆಗಾಗಿಯೆ ಮದುವೆಯಾಗದೆ ತಮ್ಮ ಇಡೀ ಜೀವನವನ್ನು ಮೀಸಲಿಟ್ಟರು.  ಸಮುದಾಯದ ಆರ್ಥಿಕ ನೆಲೆಗಟ್ಟಾದ ಪಶುಪಾಲನೆಯನ್ನು ಕಾಪಾಡುವಲ್ಲಿ ಮತ್ತು ಬೆಳೆಸುವಲ್ಲಿ ಮಾದರಿಯಾಗಿದ್ದಾರೆ. ಈ ಕಾಯಕ ಮುಂದುವರೆಸುವ ಜನರಿಗಾಗಿ ಹುಡುಕಾಟ ನಡೆಸುವ ಮಾರಸಂದ್ರದ ಮಾರಕ್ಕ ಎತ್ತಪ್ಪನ ಹುಟ್ಟಿಗೆ ಪ್ರೇರಕಳಾಗುತ್ತಾಳೆ. ಕಾಡುಗೊಲ್ಲರಂಥ ಬುಡಕಟ್ಟು ಸಮುದಾಯದ ಮೇಲೆ ವೈದಿಕ ಶೈವಪಂಥ ದಟ್ಟ ಪ್ರಭಾವ ಬೀರಿದ್ದಕ್ಕೆ ಎತ್ತಪ್ಪನ ಜನನ ಪ್ರಸಂಗ ನಿದರ್ಶನವಾಗಿದೆ. ಶಿವ ಕಲ್ಪನೆ ಈ ಬುಡಕಟ್ಟಿನ ಸಾಧಕ ಶಕ್ತಿಯಲ್ಲದಿದ್ದರೂ ಮೂಲ ಶಕ್ತಿಯೆಂದು ಬಿಂಬಿಸುವ ಪ್ರಯತ್ನವಿದೆ. ಆದರೂ ಎತ್ತಪ್ಪ ಮತ್ತು ಜುಂಜಪ್ಪ ಸಂಪ್ರದಾಯಗಳೇ ಕಾಡುಗೊಲ್ಲ ಸಮುದಾಯದ ಜೀವನ ವಿಧಾನ ರೂಪಿಸಿರುವ ಶಕ್ತಿಮೂಲ ಕೇಂದ್ರಗಳಾಗಿವೆ. ಬಸವ ಶೈವ ಪಂಥ ಹಾಗೂ ರಾಸುಗಳ ಪ್ರತೀಕ. ಆದರೂ  ಈ ಸಮುದಾಯದ ಪಸುಪಾಲನೆಯ ಆಚರಣೆಗಳಲ್ಲಿ ಶೈವ ಆಚರಣೆಗಳು ಹಾಗೂ ನಂಬಿಕೆಗಳು ರೂಢವಾಗಿರುವುದು ಕಾಣುವುದಿಲ್ಲ. ಈ ಸಮುದಾಯ ಶಿಷ್ಟ ಪುರಾಣಗಳ ಪ್ರಭಾವಕ್ಕೆ ಒಳಗಾಗಿಯೂ ತನ್ನ ಸ್ವಂತಿಕೆ ಸಾಧಿಸಿರುವ ಪರಿಣಾಮವಿದು. ಹೀಗಿದ್ದರೂ ಮುನಿಗಳ ಮತ್ತು ದೇವ ಕನ್ನಿಕೆಯರ ಶಾಪ ಪ್ರಸಂಗಗಳು  ಎತ್ತಪ್ಪನ ಕಥಾ ಚೌಕಟ್ಟನ್ನು ನಿರ್ಧರಿಸಿವೆ. ಇದು ಶಿಷ್ಟ ಪುರಾಣಗಳ ಮಾದರಿಯನ್ನು ಅನುಸರಿಸಿದ ಪರಿಣಾಮವಾಗಿದೆ. ಬುಡಕಟ್ಟು ಸಮುದಾಯಗಳು ಶಿಷ್ಟ ಸಮಾಜವನ್ನು ಮೀರಬಾರದ ಎಚ್ಚರಿಕೆ ಮತ್ತು ಮೀರಲಾಗದ ಸೀಮಿತತೆಯನ್ನು ಹುಟ್ಟುಹಾಕಿದೆ.  ಶಿಷ್ಟರು ಹಾಕಿದ ಎಲ್ಲೆಯನ್ನು ಮೀರಿ ಸಮುದಾಯ ರಕ್ಷಣೆ ಮಾಡಹೊರಟ ಎತ್ತಪ್ಪ ಸರ್ವನಾಶವಾಗುವ ನಿರೂಪ ಬಹು ಸಮುದಾಯಗಳ ಒಕ್ಕೂಟವಾದ ಭಾರತೀಯ ಸಮಾಜದಲ್ಲಿ ಬುಡಕಟ್ಟುಗಳ ಸ್ಥಾನ-ಮಾನಗಳನ್ನು ನಿರ್ದೇಶಿಸಿದೆ. ಅಲ್ಲದೆ ಈ ನಿರೂಪದ ಸಂದೇಶ ಬಹು ಸಮುದಾಯಗಳ ಸಮಾಜದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಅನ್ವಯವಾಗುತ್ತದೆ.
ಗುಡ್ಡದ ಬೋರಿ ಪ್ರಸಂಗ ಎತ್ತಪ್ಪ ಕಥಾನಕದ ವಿಶೇಷ ಭಾಗವಾಗಿದೆ. ಶಿಷ್ಟ ಸಮಾಜ ಪುರುಷ ಪರ ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯಲು ಅವನಿಗೆ ಬಹುಬಗೆಯಲ್ಲಿ ಹೆಣ್ಣಿನ ಅನುಭೋಗದ ಹಕ್ಕು ನೀಡಿದೆ. ಆದರೆ ಎತ್ತಪ್ಪನಿಗೆ ತನ್ನ ಹಿರಿಯರಂತೆ ಸಮುದಾಯದ ಆರ್ಥಿಕ ನೆಲೆಗಟ್ಟು ಕಾಪಾಡುವಿಕೆ ಮುಖ್ಯವಾಗಿದೆ, ಮತ್ತು ಹೆಣ್ಣಿನ ಸಂಪರ್ಕದಂಥ ವೈಯಕ್ತಿಕ ಹಿತಾಸಕ್ತಿಯಿಂದ ಅದು ಕೆಡುವುದೆಂದು ಬೆದರಿದ್ದಾನೆ. ಹಾಗಾಗಿ ಎತ್ತಪ್ಪ ತಾನು ಕಟ್ಟಿಕೊಂಡ ಹೆಣ್ಣಿನೊಂದಿಗೆ ಸಂಸಾರವನ್ನೂ ಮಾಡದೆ, ಆಕೆ ಅಟ್ಟಿದ ಅಡುಗೆಯನ್ನೂ ಉಣ್ಣದೆ ಪಶುಪಾಲನೆ ಕೇಂದ್ರಿತ ಕಟ್ಟುನಿಟ್ಟಿನ ಆಚರಣೆಯನ್ನು ತನ್ನ ಜೀವಮಾನವಿಡೀ ಪಾಲಿಸುತ್ತಾನೆ. ಇದು ಸಮುದಾಯದ ಹಿತದಲ್ಲೆ ತನ್ನ ವೈಯಕ್ತಿಕ ಜೀವನ ಸಾಧನೆ ಕಾಣುವ ಬಗೆಯಾಗಿದೆ. ಸಮುದಾಯದ ಆರ್ಥಿಕ ವ್ಯವಸ್ಥೆ ಯಾವ ಬಗೆಯಲ್ಲೂ ಅಡಚಣೆಗೆ ಒಳಗಾಗಬಾರದೆಂಬ ಹಿತ ಕಾಯುವ ದೃಷ್ಟಿ ಅವನಲ್ಲಿ ಸದಾ ಎಚ್ಚರವಾಗಿದ್ದು ಕಾರ್ಯನಿರ್ವಹಿಸಿದೆ. ಗುಡ್ಡದ ಬೋರಿ ಎತ್ತಪ್ಪನನ್ನು ಉತ್ಕಟವಾಗಿ ಮೋಹಿಸುವುದು ಮತ್ತು ಹೆಣ್ಣಿನ ಉತ್ಕಟ ಮೋಹಕ್ಕೆ ಮಣಿಯದೆ ಅದನ್ನು ಕಡೆಗಣಿಸಿ ಎತ್ತಪ್ಪ ಮೀರಿ ನಿಲ್ಲುವುದು - ಇದು ವೈಯಕ್ತಿಕ ಮತ್ತು ಸಮುದಾಯ ಪರವಾದ ಹಿತಾಸಕ್ತಿಗಳು ಮುಖಾಮುಖಿಯಾದ ಚಿತ್ರಣ. ದೇವ ಕನ್ನಿಕೆಯರೊಂದಿಗಿನ ಅನುಭವದ ಪ್ರಸಂಗ ವಿಲೋಮ ವಿವಾಹ ಪದ್ಧತಿಗಳ ಮೌಲ್ಯ ಕಲ್ಪನೆಗಳಲ್ಲಿರುವ ಸಂಕುಚಿತ ದೃಷ್ಟಿಕೋನವನ್ನು ಕೆಣಕುತ್ತದೆ.  ಅಲ್ಲದೆ ವೈಯಕ್ತಿಕ ಹಾಗೂ ಸಮುದಾಯ ಪರವಾದ ಹಿತಾಸಕ್ತಿಗಳು ಮೇಲುಗೈ ಪಡೆಯಲು ನಡೆಸಿದ  ತಿಕ್ಕಾಟದಲ್ಲಿ ಎತ್ತಪ್ಪ ಹೆಣ್ಣಿನ ವಿಚಾರದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ನಿರಾಕರಿಸಿ ಪಾಲಿಸಿದ ಅತ್ಯುತ್ಕಟ ಶೀಲ ಶುಚಿತ್ವವೆ ಆತನ ಸಮುದಾಯ ಹಿತಾಸಕ್ತಿಯನ್ನು ಸೋಲಿಸುವ ರಣತಂತ್ರವಾಗಿ ಬಳಕೆಯಾಗುತ್ತದೆ. ಗುಡ್ಡದ ಬೋರಿಯ ಮೋಹ ದ್ವೇಷವಾಗಿ ಪರಿಣಮಿಸಿ, ಸೇಡು ತೀರಿಸಿಕೊಳ್ಳುವ ಹಂತ ತಲುಪುತ್ತದೆ. ಎತ್ತಪ್ಪನ ಜೀವನ ಮೌಲ್ಯವೇ ಹೇಗೆ ಅದರ ದುರಂತಕ್ಕೆ ಮೂಲಕಾರಣವಾಗಿದೆ ಎಂಬುದನ್ನು ಈ ಕಥನ ಹೀಗೆ ಚಿತ್ರಿಸಿದೆ. ಈ ಮೂಲಕ ಕಾಡುಗೊಲ್ಲ ಸಮುದಾಯ ಶಿಷ್ಟರ ಕೈಯಲ್ಲಿ   ಅನುಭವಿಸಿದ ಅಪಮಾನ, ಸೋಲಿನ ಕಥಾನಕವಾಗಿ ಬದಲಾಗಿದೆ. 
'ಹೆತ್ತ ತುಪ್ಪದಲ್ಲಿ ಹುಟ್ಟಿದವನು' ಅಥವಾ 'ಎತ್ತಿನ ಅಪ್ಪ' ಎಂದು  ಎತ್ತಪ್ಪ ಪದದ ಅರ್ಥ ಹೊರಡುತ್ತದೆ. ಈ ವಿವರಣೆ ಕಾಡುಗೊಲ್ಲರಲ್ಲಿ ಎತ್ತಪ್ಪ ಕಥಾನಕದ ಮಹತ್ವ ಮತ್ತು ಅವರ ಆರ್ಥಿಕ ಜೀವನಕ್ಕೆ ಸಂಬಂಧಿಸಿರುವುದನ್ನು ಕಾಣಿಸುತ್ತದೆ. ಎತ್ತಪ್ಪ ಕಾಡುಗೊಲ್ಲ ಸಮುದಾಯದಲ್ಲಿ ಅಂಟು-ಮುಂಟು, ಮುಟ್ಟು-ಹೆರಿಗೆ ಕುರಿತು ನಿಷೇಧ ಭಾವ ರೂಢಿಸಿದವನು. ಹೆಂಗಸರು ಬಿಳಿ ಪತ್ತಲ ಮತ್ತು ಗೊಲ್ಲಕಡಗ ತೊಡುವ ನಿಯಮ ರೂಪಿಸಿದವನು.ಹಂದಿ ಕೋಳಿಗಳನ್ನು ಹಟ್ಟಿಯೊಳಗೆ ಸೇರಿಸದಿರುವ ನಿಯಮ, ಗೋಜನಿಗೆ ಕುಡಿಯುವ ಮತ್ತು ಮೀರಿದವರಿಗೆ ದಂಡ ವಿಧಿಸುವ ನಿಯಮ ವಿಧಿಸಿದವನು. ಆ ಮೂಲಕ ಸಮುದಾಯದ ಪಶುಪಾಲಕ ವೃತ್ತಿಯ ಮಹತ್ವವನ್ನು ಹೆಚ್ಚಿಸುವ ಮತ್ತು ಅದರ ರಕ್ಷಣೆಗೆ ಅಗತ್ಯವಾದ ಜೀವನ ಮೌಲ್ಯಗಳನ್ನು ರೂಢಿಗೆ ತಂದವನು ಎಂದೆ ಪ್ರತೀತಿ ಪಡೆದಿದ್ದಾನೆ. 
ಕಾಡು ಗೊಲ್ಲ ಸಮುದಾಯದ ಎತ್ತಪ್ಪನ ಕಥಾನಕ ಶಿಷ್ಟ ಪುರಾಣಗಳಂತೆ ಕಟ್ಟುಕತೆಗಳಾಗಿರದೆ ಚಾರಿತ್ರಿಕ ಕಥನವಾಗಿದೆ. ತನ್ನನ್ನು  ನಿರ್ನಾಮ ಮಾಡುವ ಉದ್ದೇಶದಿಂದ ವೈರಿಗಳು ನೀಡಿದ ಕರಾರುಬದ್ಧ ಪಂಥಾಹ್ವಾನವನ್ನು ಸ್ವೀಕರಿಸುವ ಎತ್ತಪ್ಪ ತನ್ನ ವೈರಿಗಳನ್ನು ಸೋಲಿಸಿದರೂ ಅವರ ಕರಾರುಗಳಿಂದಲೆ ಅವರನ್ನು ನಾಶಗೊಳಿಸದೆ  ಮಾನವ ಪ್ರೀತಿಯನ್ನು ತೋರುತ್ತಾನೆ. ಮಾನವ ಸಂಸ್ಕೃತಿ ಕುರಿತ ವ್ಯಾಖ್ಯಾನಕ್ಕೆ ಷರಾ ಬರೆದು ಬುಡಕಟ್ಟು ಸಂಸ್ಕೃತಿಗಳ ಮೇರು ಹಂತವನ್ನು ಸಾಧಿಸಿದ್ದಾನೆ. ಭಾರತದ ಬಹು ಸಮುದಾಯ ಒಕ್ಕೂಟದಲ್ಲಿ  ಕಾಡು ಗೊಲ್ಲ ಸಮುದಾಯಕ್ಕೆ ಸೀಮಿತಗೊಳ್ಳದ ಎತ್ತಪ್ಪನ ಕಥಾನಕ ಸಾಂಸ್ಕೃತಿಕ ಮಹತ್ವ ಪಡೆದ ಪಠ್ಯವಾಗಿದೆ. 

(ಇದು ಮೀರಸಾಬಿಹಳ್ಳಿ ಶಿವಣ್ಣ ಅವರು ಕನ್ನಡದಲ್ಲಿ ಬರೆದ ಮತ್ತು ಜಿ ಎಸ್ ಉಜ್ಜನಪ್ಪ ಅದರ ಇಂಗ್ಲಿಶಾನುವಾದ ಮಾಡಿದ ಎತ್ತಪ್ಪ ಕೃತಿ ಕುರಿತ ಬರವಣಿಗೆ. ಇದನ್ನು ಕಳೆದೆರಡು ವರ್ಷಗಳ ಹಿಂದೆ ಬರೆದಿದ್ದರೂ ಈಗ ಅಷ್ಟಿಷ್ಟು ತಿದ್ದುಪಡಿಯೊಂದಿಗೆ ಇಲ್ಲಿ ಮತ್ತೆ ನಿಮ್ಮ ಮುಂದಿಡುತ್ತಿದ್ದೇನೆ.)

ಸೋಮವಾರ, ಅಕ್ಟೋಬರ್ 31, 2011

ಬೆಲೆ

ಇಲ್ಲಿನ ಜಮೀನ್ದಾರಿ ಮನಸ್ಥಿತಿ ಮತ್ತು ಪ್ರತಿರೋಧ ಸ್ವಂತಿಕೆಯ ಪ್ರಶ್ನೆಯೊಂದಿಗೆ  ತಳಕು ಹಾಕಿಕೊಂಡಿವೆ.  ಉಪಮೇಯ ಮತ್ತು ಉಪಮಾನಗಳಾಗಿ ವಿರುದ್ಧಾರ್ಥಗಳನ್ನು ಹೊರಚೆಲ್ಲಿವೆ. ಇವು ಓದುಗನಲ್ಲಿ ಗೊಂದಲ/ಸಂಕೀರ್ಣತೆಯನ್ನೂ ಉಂಟುಮಾಡುತ್ತವೆ. ಇದು ಈ ಕಾಲದ ಗುಣವೇ? ಈ ಕಾರಣದಿಂದ ಇಲ್ಲಿ ಮತ್ತೆ ಮರುಮಂಡಿಸುತ್ತಿದ್ದೇನೆ.


#


ಸೂರ್ಯಪ್ಪ ತೆಂಗಿನ ಮರದ ಗರಿ ಅಂಚಿಗೆ ಇಳ್ದು
ಹೋಗಿದ್ದೆ ತಡ, ಒಳಗ್ಹೋಗಿ ಪಗಡದಸ್ತಾಗಿ
ಉಂಡುಬಿಟ್ಟು ಜಗಲಿ ಮ್ಯಾಲೆ ಕುಂತಿದ್ರು ಹಳ್ಳಿಮಂದಿ.
ಆ ವರ್ಷ ಮಳೆರಾಯ ಬಂದ್ಬುಟ್ಟು 'ಟಪ್ ಟಪ್'
ಊರಧಣಿ ಬರವಾಗ 'ಚರಪ್ ಚರಪ್' ಅಂತ ಜೋಡು ಅನ್ನೋ
ಅಂಗೆ, ಯಾವತ್ನಂಗೂ ಹಟ ಮಾಡ್ದೆ ರಾಯ
ಬಂದಿದ್ದು ಊರಧಣಿಗೆ ಅಲ್ಲ
ಒಂದೆರಡು ತುಕಡಾ ಪಾತಿ ಇದ್ದವ್ರಗೂ ಏನಂದಿಯಾ?
ಅದ್ನ ಹೇಳಕಾದಾತಾ?

ವತಾರನೆ ಊರಧಣಿ ಇದ್ದಕ್ಕಿದ್ದಂಗೆ ಹಳ್ಳಿ ರೈತರ್ ನ
ಕರ್ದು ನೋಡ್ರೆಪ ನಾನು ಕಬ್ಬು ಹಾಕ್ತೀನಿ
ನೀನು ಭತ್ತ ಹಾಕ್ಲಾ, ಅವ್ನು ರಾಗಿ ಹಾಕ್ಲಿ ಎಂದವ್ನೆ ಮತ್ತೆ
ಲೇ, ನೀನು ಉರುಳಿ ಹಾಕ್ಲಾ ಅವ್ನು ಶೇಂಗಾ ಹಾಕ್ಲಿ
ಮಳೆ ಎಲ್ಲದ್ದಕೂ ಹದವಾಗಾಗದೆ.
ನೀನು ಬದ್ನೆ ಹಾಕು ನೆಲ ಪಸಂದಾಗದೆ
ನಿನ್ನ ಹೊಲ ತೊಗರಿಗೆ ಲಾಯಕ್ಕಾಗದೆ ಕಣ್ಲಾ
ಅಂತ ಒಬ್ಬೊಬ್ಬನಿಗೆ ಒಂದೊಂದು ಬೆಳೆ
ಹಾಕಾಕೆ ಹೇಳುದ್ರೆ ಮೀರಕಾದಾತಾ !
ಎಲ್ರುನೂವೆ ಕತ್ತು ಬಗ್ಗಿಸಿದ್ದೋರು ಮಿಸುಕಾಡಲಿಲ್ಲ.
ಬೆಟ್ಟ ಅವ್ನಲ್ಲ, ಅದೇ ಚಿಕ್ಕಮಾರನ ಹೈದ
ಇಲ್ಲಪ್ಪೋ ನಾನೀಸಲ ಗದ್ದೇಲಿ ಕಬ್ಬು ಹಾಕ್ಬೇಕಂತೀವ್ನಿ
ನಾನು ಕಬ್ಬು ಹಾಕ್ತೀನಿ ಅಂತ ಅಂದೇಬುಟ್ಟ ಯಾರ
ಮಕಾನು ನೋಡ್ದಿರಾ ಆಟೊಂದ್ ಜನಗಳ್ ಎದುರ್ಗೆ
ಊರಧಣಿ ದುಡಕವ್ರಲ್ಲ ಅಂತ  ಎಲ್ರೂಗೂ ಗೊತ್ಹೇಳಿ
ಆದ್ರೂ ಅವ್ನು  ಅಂಗಂದಿದ್ದು ಯಾರೋ ಒಪ್ಕೋಳಿಲ್ಲ.

ನೀನ್ ಮೂರೆಕ್ರೆ ಗದ್ದೇಲಿ ಎಷ್ಟ್ ಬೆಳ್ದಿ?
ಕಾರ್ಕಾನೆಗೂ ಆಲೆಮನೆಗೂ ಆಗೋವಷ್ಟು ನನ್ನ ಗದ್ದೇಲಿ
ಬೆಳಿತದೆ. ಹೆಚ್ಚಗೆ ಬೆಳಂದಗಾಗದೆ ಧಾರ್ಣೆ ಏರ್ತದೆ.
ನೀನೂ ಹಾಕುದ್ರೆ ನಮ್ಗೆ ನಷ್ಟ. ಒಬ್ಬೊಬ್ರುನೂವೆ
ಒಂದೊಂದು ಹಾಕುದ್ರೆ ಬೆಳೆ ಬಂದಿದ್ದು ಸಾಕಾಗ್ದಿರಾ
ಧಾರ್ಣೆ ಏರ್ತದೆ. ಆಗ ನಮ್ಗೆ ಅಲ್ವೇನ್ಲಾ ಒಳ್ಳೇದು
ಅಂತ ಅಂದ್ರೂನೂವೆ ಕೇಳ್ದೆ ಬೆಳೆ 'ಹಾಕ್ತೀನಿ' ಅಂತ
ನೇಗ್ಲು ಹಿಡ್ದು ಉತ್ತೋಕೆ ಹೊಂಟೆಬಿಟ್ಟ.
ಆಮ್ಯಾಲೆ ಅವ್ನ ಬಾಲ ಹಿಡ್ಕೊಂಡು ಅವ್ರವ್ರಗಿಷ್ಟ
ಬಂದದ್ದು ಬಿತ್ತೋಕೆ, ಧಣಿ ಮಾತ್ಗೆ ಬೆಲೆ ಕೊಡ್ದೆ
ಉತ್ತೋಕೆ ಹೋದ್ರು ಉಳದವ್ರು.

ಎಲ್ರು ಹೋದಮೇಲೆ ಅಲ್ಲೆ ಕುಂತಿದ್ದ ಚಿಕ್ಕಹೈದ
ಮುಟ್ಟುದ್ರೆ ಮುನಿಸ್ಗೊಂಡು ಎಲೆ ಮುಚ್ಕೊಂಡಿದ್ದಂಗಿದ್ದ
ಅಪ್ನ ಮಕಾ ನೋಡಿ ಅಂತು-

ನೆನ್ನೆ ಮೇಟ್ರು ಇಸ್ಕೋಲಾಗೆ ನಮಗೊಂದು
ಪದ್ಯ ಮಾಡುದ್ರು. ಅದ್ರಾಗೆ ರಾಜನ ಮಾತು
ಕೇಳ್ದಿರಾ ಪದ್ಯ ಬರೆಯೋರು ನಮ್ಮಂಗೆ
ಇಷ್ಟ ಬಂದದ್ದು ಬರೆದ್ರು. ಆಮ್ಯಾಕೆ
ಎಲ್ರುದ್ದು ಒಂದೇ ಆಗೋಗಿ
ಪದ್ಯ ಬೇರೆ ಆಗಿತ್ತಂತೆ. ಆಮ್ಯಾಕೆ
ರಾಜ ನೀವ್ಯಾರು ನನ್ಹತ್ರ ಇರೋಕೆ
ಆಗಲ್ಲ. ಯಾಕಂದ್ರೆ ನೀವೆಲ್ಲ ಒಂದೇ ತರ
ನಿಮಗ್ಯಾರಿಗೂ ಬೆಲೆ ಇಲ್ಲ ಅದ್ನಂತೆ-
ಅಂತ ಮುಗ್ಸಿ ನಕ್ಕೊಂಡು ಆಡೋಕೆ
ಬಂದಿದ್ದ ಹುಡುಗ್ರು ಒಂದ್ಗೆ ಹೋದ.

ಇವ್ರಗೂ ಅಂಗೇ ಆಗೋದು ಕಣಾ
ಅಂತ ಮನಸ್ನಾಗೆ ಅಂದ್ಕೊಂಡ ಧಣಿ.

ಗುರುವಾರ, ಜುಲೈ 14, 2011

ಬೇಂದ್ರೆಯವರ 'ಶ್ರಾವಣ'- ಕಾವ್ಯ ಕಲ್ಪನೆಯ ಪ್ರತೀಕ

ಕನ್ನಡ ಕವಿಗಳನ್ನು ಕೋಗಿಲೆ ಒಂದಲ್ಲ ಒಂದು ರೀತಿಯಲ್ಲಿ ಕಾಡಿದೆ. ಆದರೆ ಶ್ರಾವಣದ ತಿಂಗಳು ಬೇಂದ್ರೆಯವರನ್ನು ಕಾಡಿದಂತೆ ಮತ್ತೊಬ್ಬ ಕವಿಯನ್ನು ಕಾಡಿಲ್ಲ. ಶ್ರಾವಣ ಬೇಂದ್ರೆಗೆ ಅತಿ ಅಚ್ಚುಮೆಚ್ಚಿನ ಮಾಸ. ಹಾಗೆಂದು ನವೋದಯ ಕಾಲದ ಪ್ರಕೃತಿ ಗೀತೆಗಳ ಜೊತೆ ಬೇಂದ್ರೆಯ ಶ್ರಾವಣ ಕವಿತೆಗಳನ್ನು ನೋಡಲು ಬರುವುದಿಲ್ಲ. ಅವಕ್ಕೆ ಅದರದೇ ಸ್ಥಾನವಿದೆ. ಬೇಂದ್ರೆಯವರ ಕಾವ್ಯ ವ್ಯಕ್ತಿತ್ವವನ್ನು 'ಶ್ರಾವಣ' ಆವರಿಸಿಕೊಂಡಿರುವುದನ್ನು ಅವರ ವಿಪುಲವಾದ ಶ್ರಾವಣ ಕವಿತೆಗಳೇ ಸಾರುತ್ತವೆ.

'ನಾದಲೀಲೆ' ಸಂಕಲನದ 'ಶ್ರಾವಣ' ಕವಿತೆಯನ್ನು ಇಲ್ಲಿ ತೆಗೆದುಕೊಂಡಿದೆ. ಈ ಕವಿತೆಯ ಪ್ರತಿ ಸಾಲಿನಲ್ಲಿ ಮೂರು ಮೂರು ಮಾತ್ರೆಯ ನಾಲ್ಕು ಗಣಗಳು ಇದ್ದು, ಒಟ್ಟು ಹನ್ನೆರಡು ಮಾತ್ರೆಯ ಸರಳ ರಗಳೆಯಲ್ಲಿ ಸಹೃದಯ ಓದುಗರನ್ನು ಕುಣಿಸುತ್ತ ಮಣಿಸುತ್ತ ಸಾಗುವಂತೆ ಕಾಣುತ್ತದೆ. ಆದರೂ ಕೆಲವು ಸಾಲುಗಳು ಹನ್ನೆರಡು ಮಾತ್ರೆಗಳನ್ನು ಹೊಂದಿಲ್ಲ. ಆದರೆ ಅವುಗಳ ಓಟದ ಗತಿಯಲ್ಲಿ ಯಾವ ಅಡೆ ತಡೆಯೂ ಇಲ್ಲ. ಶಿಷ್ಟ ಮತ್ತು ಜಾನಪದ ಸಾಹಿತ್ಯವನ್ನು ಒಂದೇ ಹಿಡಿಯಲ್ಲಿ ಅರಗಿಸಿಕೊಂಡಿದ್ದ ಬೇಂದ್ರೆ  ಅಕ್ಷರ, ಮಾತ್ರಾ, ಅಂಶ ಛಂದಸ್ಸನ್ನು ರಕ್ತಗತ ಮಾಡಿಕೊಂಡು ನಾದದ ನದಿ ಹೊಮ್ಮಿಸಿರುವುದು ಹಳೆಯ ವಿಚಾರ. ಇಲ್ಲಿಯೂ ಅದರ ಸೆಳಕನ್ನು ಕಾಣಬಹುದು. ಅದರ ಬೆಳಕಲ್ಲಿ ಶ್ರಾವಣವನ್ನು ಒಂದು ಮಗುವಾಗಿ ಕಂಡು ಆತ್ಮೀಯ ಆಹ್ವಾನ ನೀಡಲಾಗಿದೆ. ಈ ಕವಿತೆಯಲ್ಲಿ ಅಭಿವ್ಯಕ್ತವಾಗಿರುವ ಉತ್ಕಟವಾದ ಆತ್ಮೀಯತೆ, ಪ್ರೀತಿಯ ರೀತಿ,  ಕವಿ ತನ್ನೆದೆಯಿಂದ ನೇರವಾಗಿ ಆ ಭಾವನೆಗಳನ್ನು ಕಿತ್ತು ಪದಗಳ ರೂಪದಲ್ಲಿ ಇಟ್ಟಿರುವಂತೆ ಇದೆ. "ಸಾಧನಕೇರಿಯಲ್ಲಿ ಮೊದಲ ಸಲ ಶ್ರಾವಣದ ದರ್ಶನವಾದುದು ಹೀಗೆ" ಎಂಬುದು ಕವಿ ಈ ಕವಿತೆಗೆ ನೀಡಿರುವ ಟಿಪ್ಪಣಿ.

ಶ್ರಾವಣ

ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೊ ಎಂತೊ ಒರಲುತಿಹುದು
ಆ... ಹಸಿರ ಒಳಗೆ ಹೊರಗೆ
ನೀರ ಬೆಳಕ ತುಣುಕು ಮಿಣುಕು,
ಅಲ್ಲಿನಿಂದ ಬಂದೆಯಾ!
ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು ತಂದೆಯಾ?
ಏಕೆ ಬಂದೆ? ಏನು ತಂದೆ?
ಹೇಳೊ ಹೇಳು ಶ್ರಾವಣಾ
ನೀನು ಬಂದ ಕಾರಣ.
ಪಡುವ ದಿಕ್ಕಿನಿಂದ ಹರಿವ
ಗಾಳಿ-ಕುದುರೆಯನ್ನು ಏರಿ
ಪರ್ಜನ್ಯ ಗೀತವನ್ನು
ಹಾ...ಡುತ್ತ ಬಂದಿತು,
ಬನದ ಮರದ ಮೇಳವೆಲ್ಲ
ಸೋ... ಎಂದು ಎಂದಿತು.
ಬಿದಿರು ಕೊಳಲ ನುಡಿಸಿತು
ಮಲೆಯ ಹೆಳಲ ಮುಡಿಸಿತು:
ಬಳ್ಳಿ ಮಾಡ ಬಾಗಿಸಿತ್ತು
ಗಿಡಗಳ ತಲೆದೂಗಿಸಿತ್ತು;
ಮರದ ಹನಿಯ ಮಣಿಗಳನ್ನು
ಅತ್ತ ಇತ್ತ ತೂರುತಾ
ಹಸಿರು ಮುರಿವ ತೊಂಗಲನ್ನು
ಕೆಳಗೆ ಮೇಲೆ ತೂಗುತಾ
ಬರುವ ನಿನ್ನ ಅಂದ ಚೆಂದ
ಸೂಸು ಸೊಗಸು ಆನಂದ
ಗುಳ್ಳ ಗಂಜಿ ತೊಡವ ತೊಟ್ಟು
ಪಾವಸೆಯಾ ಉಡುಪನುಟ್ಟು
ನಗುವ ತುಟಿಯ ನನೆದ ಎದೆಯ
ತರಳ ನೀನು ಶ್ರಾವಣಾ.
ಅಳಲು ನಗಲು ತಡವೆ ಇಲ್ಲ
ಇದುವೆ ನಿನಗೆ ಆಟವೆಲ್ಲ
ಬಾರೊ ದಿವ್ಯ ಚಾರಣ
ತುಂಟ ಹುಡುಗ ಶ್ರಾವಣಾ.
ನೀನು ನಡೆದು ಬಂದ ಮಾಸ
ಹೆಣ್ಗೆ ತವರು ಮನೆಯ ವಾಸ
ಬರಿಯ ಆಟ ಬರಿಯ ಹಾಸ
ಮಧು ಮಾಸಕ್ಕೂ ಹಿರಿದದು
ಮಧುರ ಮಾಸ ಸರಿಯದು
ಮೋಡ ಗವಿದ ಕಣ್ಣಿನವರು
ಮುಗಿಲ ತಂದೆ ಮುಗಿಲರಾಯ
ನಿನ್ನನ್ನೆ ಬಯಸಿದಾ.
ಬಿಸಿಲ ಹಣ್ಣು ತಿಂದು ಹೊತ್ತು
ಹೆತ್ತ ನಿನ್ನ ಭೂಮಿ ತಾಯಿ
ಪಾಪ, ನಿನ್ನ ನೆನಸಿತು
ಎದೆಯ ಸೆರಗ ನೆನೆಸಿತು
ಅಂತೆ ಬಂದೆ ಬಾರಣಾ
ಬಾರೊ ಮಗುವೆ ಶ್ರಾವಣಾ!

'ಹಾಡು-ಪಾಡು' ಸಂಕಲನದ 'ಶ್ರಾವಣ' ಎಂಬ ವರ್ಣನಾತ್ಮಕ ಕವಿತೆಯ ಎರಡು ನುಡಿಗಳು ಹೀಗಿವೆ.

ಬನಬನ ನೋಡು ಈಗ ಹ್ಯಾಂಗ |
    ಮದುವಿ ಮಗನ್ಹಾಂಗ |
    ತಲಿಗೆ ಬಾಸಿಂಗ
    ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು
                 * *
ಗುಡ್ಡ ಗುಡ್ಡ ಸ್ಥಾವರ ಲಿಂಗ
    ಅವಕ ಅಭ್ಯಂಗ
    ಎರಿತಾವನ್ನೊ ಹಾಂಗ |
    ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||

ಮೇಲಿನ ಮೊದಲ ನುಡಿಯಲ್ಲಿ ಶ್ರಾವಣ ಮದುವಣಿಗನಾಗಿ ಚಿತ್ರಿತವಾಗಿದೆ. ಈ ಶ್ರಾವಣ ಸೃಷ್ಟಿಶೀಲತೆಗೆ ಸಿದ್ಧನಾಗಿ ಹರ್ಷಗೊಂಡು ನಿಂತಂತಿದೆ. ನಂತರದ ನುಡಿಯಲ್ಲಿ ಲೈಂಗಿಕ ಪ್ರತಿಮೆಯನ್ನು ಸೃಷ್ಟಿ ಮಾಡಿ ಅದನ್ನು ದೈವಿಕ ಭಾವನೆಯ ಕಣ್ಣಿಂದ ನೋಡಲಾಗಿದೆ.  ಶ್ರಾವಣವಿಲ್ಲಿ ಸೃಷ್ಟಿಯ ಸಂಕೇತವಾಗಿ ಪ್ರಕಟವಾಗಿದೆ. ಶ್ರವಣ-ಶ್ರಾವಣ ಎಂಬ ಅರ್ಥ ವಿನ್ಯಾಸವೂ ಕವಿ-ಕಾವ್ಯ-ಸಹೃದಯ ಚೌಕಟ್ಟಿನಲ್ಲಿ ಪ್ರವೃತ್ತವಾಗಿರಬಹುದೆ?

ನಾದಲೀಲೆ ಸಂಕಲನದ ಈ ಮೇಲಿನ ಶ್ರಾವಣ ಕವಿತೆಯಲ್ಲಿ ಮೊದಲಿಗೆ 'ಶ್ರಾವಣದ ಬಾಹ್ಯ ವೈಭವ, ಉನ್ಮಾದ,  ಅಂತಃಸತ್ವದ ವರ್ಣನೆ ಇದೆ. ನಂತರದಲ್ಲಿ ಶ್ರಾವಣವನ್ನು ವ್ಯಕ್ತಿ ಸಂಬಂಧ ಚೌಕಟ್ಟಿನಲ್ಲಿಟ್ಟು ಉತ್ಕಟವಾದ ಆತ್ಮೀಯ ಆಹ್ವಾನ ನೀಡಿದ ಚಿತ್ರಣವೂ ಇದೆ. ಇವೆಲ್ಲದರೊಂದಿಗೆ ಕಾವ್ಯ ಸೃಷ್ಟಿಯ ಪ್ರಕ್ರಿಯೆಯನ್ನೂ ಅದರ ವಿಲಾಸವನ್ನೂ ಪರಿಣಾಮವನ್ನೂ ಅಭಿವ್ಯಕ್ತಿಸುತ್ತಿದೆ. ಸೃಷ್ಟಿ ಪ್ರಕ್ರಿಯೆ ಮನಸ್ಸಿನ ಸುಪ್ತ ಪ್ರಜ್ಞೆಯಲ್ಲಿ ರೂಪ ತಾಳುತ್ತದೆಂದು ವಿವರಣೆ ಇದೆ. ಇದನ್ನೆ ಅಡಿಗರು 'ಭೂತ' ಕವನದಲ್ಲಿ 'ನೀರ ಮೇಲಕ್ಕೊಂದು ಮಡಿ ಕೆಳಕ್ಕೇಳು ಮಂಜಿನ ಶಿಖರಿ' ಎಂಬ ಕಣ್ಣಿಗೆ ಕಟ್ಟುವ ಪ್ರತಿಮೆಯ ಮೂಲಕ ಅಭಿವ್ಯಕ್ತಿಸಿದ್ದಾರೆ. ಬೇಂದ್ರೆ ತಮ್ಮ ಭಾವನಾತ್ಮಕ ನಿರೂಪಣೆಯಲ್ಲಿ ಹೀಗೆ ಬಣ್ಣಿಸಿದ್ದಾರೆ.

ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೊ ಎಂತೊ ಒರಲುತಿಹುದು

ನೆಲ - ಕಣ್ಣಿಗೆ ಗೋಚರವಾಗುವ ಸ್ಥಿತಿ, ಅಂದರೆ ಮನಸ್ಸಿಗೆ ಕಾಣುವಂತಹದು; ಪ್ರಜ್ಞಾಪೂರ್ವಕವಾದುದು. ಮುಗಿಲು - ನೆಲದಾಚೆಗಿನ ಸ್ಥಿತಿ, ಅಂದರೆ ಪ್ರಜ್ಞಾವಲಯ ಮೀರಿದ ಸ್ಥಿತಿ. ಈ ಎರಡು ಸ್ಥಿತಿಗಳ ನಡುವೆ ಎಲ್ಲೊ ದೂರದಲ್ಲಿ ಹಸಿರಿನ ಹಸುಗೂಸು ಒಂದು - ಜೀವಂತಿಕೆ ಪಡೆದಿರುವ ಬೀಜವೊಂದು -  ಆಗೊಮ್ಮೆ ಈಗೊಮ್ಮೆ ಹೊರಳುತ್ತ ಅಸ್ಪಷ್ಟವಾಗಿ ಸದ್ದು ಮಾಡುತ್ತ ತನ್ನ ಇರುವಿಕೆಯನ್ನು ಸಾರುತ್ತಿದೆ. ಹೀಗೆ ಗ್ರಹಿಸಿದರೆ, ಅದು ಕವಿಯ ಮನಸ್ಸನ್ನು ಹೊಕ್ಕ ಅನುಭವ ದ್ರವ್ಯ ಆತನ ಸುಪ್ತ ಮನಸ್ಸಿನಲ್ಲಿ ಕೃತಿಯಾಗಿ ರೂಪ ತಳೆಯುವ ಬಗೆಯನ್ನು ಹೇಳಿದಂತೆ ಗೋಚರವಾಗುತ್ತದೆ. ಕಾವ್ಯ ಸೃಷ್ಟಿಯನ್ನು ಒಂದು ಮಗು ಹುಟ್ಟುವ ಕ್ರಮದ ಹೋಲಿಕೆಗೆ ಅನ್ವಯಿಸಿದ್ದು, ಗರ್ಭಸ್ಥ ಮಗುವಿನ ಆಟದ ಅನುಭವದ ಅರಿವು ತಾಯಿಗೆ ಆಗುವ ವರ್ಣನೆಯೂ ಇದಾಗಿದೆ.

ಮುಂದಿನ ಮೂರು ಸಾಲುಗಳಲ್ಲಿ ಮಗು ಹುಟ್ಟಿರುವ ಸೂಚನೆ ನೀಡಲಾಗಿದೆ. ಆ ಮಗುವಿಗೆ ಸೃಷ್ಟಿಯ ಮೂಲದ ಬಗ್ಗೆ ವಿವರ ಕೇಳಲಾಗುತ್ತಿದೆ.  ಆ ಪ್ರಶ್ನೆಯಲ್ಲಿ ಸೃಷ್ಟಿ ಪ್ರಕ್ರಿಯೆಯ ನಿಗೂಢತೆಯನ್ನು ಅರಿಯುವ ಕುತೂಹಲ ಮತ್ತು ಹೊಸ ಸೃಷ್ಟಿಯ ಸೌಂದರ್ಯ ದರ್ಶನದಿಂದ ಉಂಟಾದ ನಿಬ್ಬೆರಗಿನ ವಿಸ್ಮಯ ಪ್ರಕಟವಾಗಿದೆ. ಹುಟ್ಟಿದ ಈ ಹೊಸ ಮಗುವನ್ನು 'ನೀರ ಬೆಳಕ ತುಣುಕು ಮಿಣುಕು' ಎಂದು ಬಣ್ಣಿಸಲಾಗಿದೆ. ಇದು ಜೀವಂತಿಕೆಯ ಸಂಕೇತವಾದ 'ನೀರು' ಮತ್ತು 'ಹಸಿರು'ನಿಂದ ಬಂದಿದೆ. 'ನೀರು' ಪದದರ್ಥ ವಿಶೇಷವುಳ್ಳದ್ದಾಗಿದೆ. ತೇವ, ಆರ್ದ್ರತೆಯ ಮೂರ್ತರೂಪವಾದ ನೀರು, ಸುಧೆ, ಅಮೃತದ ಮರುರೂಪ.  ರಸ ಕೂಡ ನೀರೇ ಆಗಿದ್ದು, ಹೊಸ ಸೃಷ್ಟಿಯ ಬೆಡಗು, ಸೊಗಸು, ಹೊಳಪು, ಲಾವಣ್ಯ ತುಂಬಿದ ಸೌಂದರ್ಯದ ಸಿರಿಯಾಗಿದೆ. ಈ ಸೃಷ್ಟಿಯ ಸಂಕೇತ 'ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು' ತಂದಿತು ಎನ್ನಲಾಗಿದೆ. ಲೈಂಗಿಕ ಪ್ರತೀಕವಾಗಿದೆ ಹೆಡೆಯ ಹಾವು.ಅದು ಕುಣಿಸಿ ಮಣಿಸುವ, ಒಲಿಸಿ ನಲಿಸುವ ಹೊಸ ಭಾವ ರಸವಾದ ಸೃಷ್ಟಿ ಪ್ರಕ್ರಿಯೆಯನ್ನು ಹೊತ್ತು ತಂದಿದೆ ಎಂದು ಹೇಳಲಾಗಿದೆ, ಅಲ್ಲವೆ?

ಏಕೆ ಬಂದೆ? ಏನು ತಂದೆ?
ಹೇಳೊ ಹೇಳು ಶ್ರಾವಣ?
ನೀನು ಬಂದ ಕಾರಣಾ

ವಿಸ್ಮಯ ಬೆರೆತ ಸಂದೇಹದ ದನಿಯಲ್ಲಿ 'ಭಾವಗೀತ'ದ 'ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ'ದ ಮತ್ತೊಂದು ರೂಪ ಮೈ ತಳೆದಿದೆ. ಇದರ ಸ್ಪಷ್ಟವಾದ ಅರ್ಥರೂಪ  ಮುಂದಿನ ಸಾಲುಗಳಲ್ಲಿ ಹೊಳಹು ದೋರಿದೆ.

ಪಡುವ ದಿಕ್ಕಿನಿಂದ ಹರಿವ
ಗಾಳಿ ಕುದುರೆಯನ್ನು ಏರಿ
ಪರ್ಜನ್ಯ ಗೀತವನ್ನು
ಹಾಡುತ್ತ ಬಂದಿತು


'ಪಡುವ ದಿಕ್ಕು', 'ಗಾಳಿ ಕುದುರೆ, 'ಪರ್ಜನ್ಯಗೀತ', 'ಹಾಡುತ್ತ ಬಂದಿತು' ಇವು ಮುಖ್ಯವಾದ ಪದ ಪುಂಜಗಳು. ರಂಜಿತ ರಾಗ ಮಾಲೆಯ ಹರಿವು ಪಡುವ ದಿಕ್ಕನ್ನು ಚಿತ್ರಿಸಿದರೆ, ಲೈಂಗಿಕ ಅಭಿಲಾಷೆಯುಳ್ಳ ಮನಸ್ಥಿತಿಯನ್ನು ಗಾಳಿ ಕುದುರೆ ಪ್ರತಿಮೆ ಧ್ವನಿಸುತ್ತದೆ. ಪರ್ಜನ್ಯ ಗೀತ ಸೃಷ್ಟಿ ಗೀತೆಯಾಗಿದ್ದು, ಸೃಷ್ಟಿ ಪ್ರಕ್ರಿಯೆಯನ್ನು ಪಸರಿಸುವ ಕಾರ್ಯವನ್ನು ಹಾಡುತ್ತ ಬಂದಿತು ಎಂಬ ಮಾತು ಹೇಳುತ್ತದೆ.

ಈ ವರೆಗಿನ ಬಣ್ಣನೆ ಸೃಷ್ಟಿ ಪ್ರಕ್ರಿಯೆ ಲುರಿತಿದೆ. ಮುಂದಿನ ಹಂತದಲ್ಲಿ ಕಾವ್ಯ ವಿಲಾಸದ ವರ್ನನೆ ಬರುತ್ತದೆ. ಸೃಷ್ಟಿಶೀಲತೆ ತರುವ ಆನಂದದ ವೈಭೋಗವನ್ನು - ಮರ, ಗಿಡ, ಬಳ್ಳಿ, ಬಿದಿರುಗಳು ಸ್ಪಂದಿಸಿ ಆನಂದದಲ್ಲಿ ಮೈ ಮರೆತವು ಎನ್ನುವುದನ್ನು - 'ಬನದ ಮರದ ಮೇಳವೆಲ್ಲ ಸೋ.. ಎಂದು ಎಂದಿತು', 'ಬಿದಿರ ಕೊಳಲ ನುಡಿಸಿತು', 'ಬಳ್ಳಿ ಮಾಡ ಬಾಗಿಸಿತ್ತು', 'ಗಿಡಗಳ ತಲೆ ತೂಗಿಸಿತ್ತು', 'ಮರದ ಹನಿಯ ಮನಿಗಳನ್ನು ಅತ್ತ ಿತ್ತ ತೂರುತಾ', ಮತ್ತು 'ಹಸಿರು ಮುರಿವ ತೊಂಗಲನ್ನು ಕೆಳಗೆ ಮೇಲೆ ತೂಗುತಾ' ಎನ್ನುವ  ಮಾತುಗಳಿಂದ ಹೇಗೆ ಭಾವಾಭಿವ್ಯಕ್ತಿಯನ್ನರಿಯದ ಸಸ್ಯರಾಶಿಗಳೂ ತಮ್ಮದೇ ಆದ ರೀತಿಯಲ್ಲಿ ಭಾವಾಭಿವ್ಯಕ್ತಿಯನ್ನು ತೋರಿದವು ಎಂದು ಬೇಂದ್ರೆ ವರ್ಣಿಸಿದ್ದಾರೆ. ಸಂವೇದನಾಶಕ್ತಿ ಇಲ್ಲದ ಮರಗಿಡಗಳ ಆನಂದದ ಉನ್ಮಾದ ಈ ಮಟ್ಟದಾದರೆ ಸಂವೇದನಾಶೀಲನಾದ ಮನುಷ್ಯನ ಆನಂದಾತಿರೇಕ ಇನ್ನೆಷ್ಟಿರಬಹುದು? ಹೀಗೆ ಸೃಷ್ಟಿಶೀಲತೆ ಕುರಿತ ಭಾವನೆಯನ್ನು ಕೇವಲ ಸಂವೇದನಾರಹಿತ ಪ್ರತಿಮೆಗಳಿಂದಲೆ ಕವಿ ಧ್ವನಿಸುತ್ತಿದ್ದಾನೆಯಲ್ಲವೆ? 'ಗಿಡಗಂಟೆಗಳ.. ಕೊರಳೊಳಗಿಂದ ಹಕ್ಕಿಗಳಾ ಹಾಡು' ಕುರಿತ ಮಾಸ್ತಿಯವರ ಗ್ರಹಿಕೆಯ ಕ್ರಮವನ್ನೆ ಈ ಮೇಲಿನ ಮಾತುಗಳಿಗೂ ಅನ್ವಯಿಸಿದರೆ  ಅದರಿಂದ ಉತ್ಪತ್ತಿಯಾಗುವ ಭಾವ ಸಂಪತ್ತು , ರಸ ಸಂಪತ್ತು ಓದುಗರು ತಮ್ಮ ಅನುಭವ ಮತ್ತು ಕಲ್ಪನಾ ಸಾಮರ್ಥ್ಯಕ್ಕೆ ತಕ್ಕಂತೆ ಅನುಭವಿಸಬಹುದು.

ಸರ್ವ ಶ್ರೇಷ್ಟ ಲೋಹವಾದ ಚಿನ್ನವನ್ನು ಅಳೆಯುವ, ತೂಗುವ ಮಾಪಕವಾದ ಗುಲಗಂಜಿಯನ್ನೆ ಅದು ತನ್ನ ಒಡವೆಯಾಗಿ ಧರಿಸಿದೆ. ಸರ್ವಶ್ರೇಷ್ಟತೆಯಲ್ಲಿ ಅದ್ವಿತೀಯತೆ ಪಡೆದಿದೆ. ಅದು ಹಾವಸೆಯಂಥ ನುಣುಪಿನ ನವಿರಾದ ಉಡುಪನ್ನುಟ್ಟು ಆಕರ್ಷಿಸಿ ಮಂತ್ರಮುಗ್ಧರನ್ನಾಗಿಸುವುದು. ಮುಗ್ಧ ಕಣ್ಣ ಹೊಳಪು ಮತ್ತು ತುಟಿಯಲ್ಲಿ ನಗುವನ್ನು ತುಂಬಿಟ್ಟುಕೊಂಡು ಸಹೃದಯರ ಮನಸ್ಸನ್ನು ಯಾವತ್ತೂ ಕಾಡುವಂತಹದು ಎಂದು ಬೇಂದ್ರೆ ಬಣ್ಣಿಸಿದ್ದಾರೆ. ಇದು ಕೇವಲ ಶ್ರಾವಣ ಮಾಸದ ಪ್ರಕೃತಿ ವರ್ಣನೆ ಆಗಿರದೆ, ಒಬ್ಬ ತರಳನದೂ ಆಗಿರದೆ ಇವೆರಡೂ ಅಗಿ, ಕಾವ್ಯ ಮೋಡಿ ಮಾಡುವ  ಅದರ ಶ್ರೇಷ್ಟ ತಂತ್ರಗಳನ್ನೂ ವರ್ಣಿಸಿರುವುದು ಕಂಡುಬರುತ್ತದೆ. ಜೊತೆಗೆ ಓದುಗ ತನ್ನ ವಿಚಕ್ಷಣತೆಯನ್ನು ಕಳೆದುಕೊಂಡು ಅದರೊಳಗೆ ತನ್ಮಯನಾಗುವಂತೆಯೂ ಮಾಡುತ್ತದೆ.

ಅಳಲು ನಗಲು ತಡವೆ ಇಲ್ಲ
ಇದುವು ನಿನಗೆ ಆಟವೆಲ್ಲ
ಬಾರೋ ದಿವ್ಯ ಚಾರಣಾ
ತುಂಟ ಮಗುವೆ ಶ್ರಾವಣಾ

ರಸಭಾವಗಳ ಅಡೆತಡೆ ಇಲ್ಲದ ಅಭಿವ್ಯಕ್ತಿಯೇ ಕಾವ್ಯಸೃಷ್ಟಿಯ ಜೀವಂತಿಕೆಯ ಲಕ್ಷಣವಾಗಿದ್ದು, ಅದು ತನ್ನ ವಿವಿಧ ಭಂಗಿಗಳ ಆಟದಿಂದ ಆನಂದ ಉಂಟುಮಾಡುವುದೇ ಅದರ ಮೂಲ ಉದ್ದೇಶವಾಗಿದೆ ಎಂಬ ನೆಲೆಯಲ್ಲಿ ಮೇಲಿನೆರಡು ಸಾಲುಗಳು ಕಾವ್ಯದ ಜೀವಂತ ತುಡಿತದ ಲಕ್ಷಣಗಳನ್ನು ಬಣ್ಣಿಸಿದೆ. ಮುಂದಿನ ಸಾಲಿನಲ್ಲಿ 'ಚಾರಣಾ' ಕೇವಲ ಪ್ರಾಸಕ್ಕಾಗಿ ಬಳಸಲಾಗಿದೆಯೆ? ಸೃಷ್ಟಿಗೀತೆಗಳನ್ನು ಹಾಡುವವರು ಚಾರಣರು. ಆದ್ದರಿಂದ ಈ ಪದವಿಲ್ಲಿ ನಿರುದ್ದಿಶ್ಯವಲ್ಲ. ಶ್ರಾವಣವನ್ನು 'ದಿವ್ಯಚಾರಣಾ' ಎಂದು ಬೇಂದ್ರೆ ಕರೆದಿರುವುದು ಅವರಿಗೆ ಸೃಷ್ಟಿ ಸಂಕೇತವಾಗಿ ಕಂಡಿರುವುದರಿಂದ ಮಾತ್ರ. ಇಂಥ ಸೃಷ್ಟಿಶೀಲ ತುಂಟ ಮಗುವಾದ ಶ್ರಾವಣನಿಗೆ ಕರೆ ನೀಡಿದ್ದಾರೆ. 

ಕೊನೆಯದಾಗಿ, ಕವಿ ಪ್ರೀತಿ, ಮಮತೆ, ಕರುಣೆ  ಸಹಾನುಭೂತಿಗಳ ಮಡುವಾದ ಹೆಣ್ಣು ಮತ್ತು ಆಕೆಯ ತವರು ಮನೆಯ ಚಿತ್ರಬಂಧದ ಮೂಲಕ ಕಾವ್ಯ ಮತ್ತು ಸಹೃದಯರ ಸಂಬಂಧವನ್ನು ಚಿತ್ರಿಸತೊಡಗುತ್ತಾರೆ. ಇನ್ನೊಂದು ಮಟ್ಟದಲ್ಲಿ ಕಂದನ ಆಗಮನ ಮತ್ತು ಆ ಕಂದ ತನ್ನನ್ನು ಹಂಬಲಿಸಿ ಪಡೆದ ತಂದೆತಾಯಿಯರ ಮಡಿಲು ಸೇರುವ ಚಿತ್ರದೊಂದಿಗೆ ಹೋಲಿಸುತ್ತಾರೆ.

ಒಂದು ಕವಿತೆಯ ಆಸ್ವಾದನೆ, ಅದರ ಅನುಭವವನ್ನು ಬೇಂದ್ರೆ ಹೀಗೆ ಹೇಳುತ್ತಾರೆ.
ಮಧುಮಾಸಕು ಹಿರಿದದು
ಮಧುರ ಮಾಸ ಸರಿಯದು
'ಸರಿಯದು'  ಪದ 'ಸರಿ ಅದು' ಮತ್ತು 'ಸರಿಯುವುದಿಲ್ಲ' ಎಂಬ ಶ್ಲೇಷಾರ್ಥವನ್ನು ಹೊಂದಿದೆ. ಇದು ಇಲ್ಲಿನ ಭಾವ ಸಂಪತ್ತು, ಅರ್ಥ ಸಂಪತ್ತು ಹೆಚ್ಚಿಸಿದೆ.
ಮೋಡಗವಿದ ಕಣ್ಣಿನವನು
ಮುದಿಯ ತಂದೆ ಮುಗಿಲರಾಯ
ಹಾಗೂ
ಬಿಸಿಲ ಹಣ್ಣು ತಿಂದು ಹೊತ್ತು
ಹೆತ್ತ ನಿನ್ನ ಭೂಮಿತಾಯಿ

ಈ ಸೃಷ್ಟಿಶೀಲ ಶ್ರಾವಣ ಮಗು ಬಂದು 'ಕಣ್ಣು ಕೆನ್ನೆ ತೊಯ್ಸಿ'ತು 'ಎದೆಯ ಸೆರಗ ನೆನಸಿತು' ಎಂದು ವಿವರಣೆಯಿದೆ. ತಂದೆತಾಯಿ ಅಥವಾ ತವರು ತಮ್ಮಲ್ಲಿಗೆ ಮಗು ಅಥವಾ ಮಗಳು ಬರುವ ಮೂಲಕ ಸಂತುಷ್ಟರಾಗುತ್ತಾರೆ. ಹಾಗೆಯೇ ಕಾವ್ಯ ಕೂಡ ಸಹೃದಯರ ನಿಕಟ ಸಂಪರ್ಕವನ್ನು ಬಿಡದೆ ಪಡೆದು ಅವರ ಮಹತ್ವವನ್ನು ಒಪ್ಪಿಕೊಂಡು ಸಂತುಷ್ಟರನ್ನಾಗಿಸಬೇಕೆಂಬ ನಿಲುವಿದೆ.

ಹೀಗೆ ಈ ಕವಿತೆಯಲ್ಲಿ ಮೊದಲ ಹದಿನಾರು ಸಾಲುಗಳಲ್ಲಿ ಕಾವ್ಯ ಸೃಷ್ಟಿಯ ಆಕರ್ಷಕವಾದ ಮನಮೋಹಕ ಪ್ರಕ್ರಿಯೆಯ ಸೆಳೆತವನ್ನು ವಿವರಿಸಿದೆ. ನಂತರದ ಇಪ್ಪತ್ತನಾಲ್ಕು ಸಾಲುಗಳಲ್ಲಿ ಕಾವ್ಯ ವಿಲಾಸವನ್ನು ವರ್ಣಿಸಿದೆ. ಕೊನೆಯ ಹದಿನೈದು ಸಾಲುಗಳಲ್ಲಿ ಸಹೃದಯರು ಕಾವ್ಯ ಸಂಪರ್ಕಕ್ಕಾಗಿ ಕಾತರದಿಂದ ಹಂಬಲಿಸಿ ಪಡೆದು ತೃಪ್ತರಾಗುವುದನ್ನು ಚಿತ್ರಿಸಿದೆ. ಭಾರತೀಯ ಕಾವ್ಯ ಮೀಮಾಂಸೆಯ ಕವಿ ಕಾವ್ಯ ಸಹೃದಯ ಚೌಕಟ್ಟನ್ನು ಒಳಗೊಂಡಿದೆ. ಬೇಂದ್ರೆ ಕಾವ್ಯ ಸಹೃದಯ ವರ್ಗವನ್ನು ನಿರ್ಲಕ್ಷಿಸದೆ ಯಾವತ್ತೂ ಆಕರ್ಷಿಸಿತ್ತು ಎಂಬ ಅಂಶ ಈ ಹಿನ್ನೆಲೆಯಲ್ಲಿ ಮಹತ್ವದ್ದಾಗಿ ಕಾಣುತ್ತದೆ. ಬೇಂದ್ರೆ ತಾವು ನಂಬಿದ ಕವಿ-ಕಾವ್ಯ-ಸಹೃದಯ ಪರಿಕಲ್ಪನೆಯನ್ನು ಇಲ್ಲಿ ಎತ್ತಿ ಹಿಡಿದಿದ್ದಾರೆ. ಶ್ರಾವಣವನ್ನು ಕಾವ್ಯ ಕಲ್ಪನೆಗೆ ಪ್ರತೀಕವಾಗಿಸಿದ್ದಾರೆ.

ಕೊನೆಯಲ್ಲಿ-
ಬೇಂದ್ರೆ ಈ ಕವಿತೆಯ ಭಾಷಾ ಬಳಕೆಯಲ್ಲಿ ಸೃಷ್ಟಿಶೀಲತೆಯನ್ನು ಹೇಗೆ ಕಂಡುಕೊಂಡಿದ್ದಾರೆ, ಸಮಾಸ ಪದಗಳನ್ನು ಬಳಸದೆ ವ್ಯಸ್ತ ಪದಗಳನ್ನೆ ಬಳಸಿ ಬಿಚ್ಚಿಕಟ್ಟುವ ಕ್ರಮವನ್ನು ಪ್ರತಿಯೊಂದೂ ಹಂತದಲ್ಲೂ ಹೇಗೆ ಮಾಡಿದ್ದಾರೆ ಎಂದು ಈ ಟಿಪ್ಪಣಿಯ ಸಿದ್ಧತೆಯಲ್ಲಿದ್ದಾಗ ಗೆಳೆಯರಾದ ಮಲ್ಲೇಪುರಂ ಜಿ ವೆಂಕಟೇಶ್ ಅವರು ತೋರಿಸಿಕೊಟ್ಟಿದ್ದಾರೆ. ಅವರನ್ನು ಇಲ್ಲಿ ನೆನೆಯುತ್ತೇನೆ.

#  #
1990-91ರಲ್ಲಿ  ಸಂಚಯದ ಡಿವಿ ಪ್ರಹ್ಲಾದ್ ಮಲ್ಲೆಶ್ವರದ ಗಾಂಧಿ ಭವನದಲ್ಲಿ ಚನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ನಡೆಸಿದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಈ ಬರೆಹ ಪ್ರ್ಯಾಕ್ಟಿಕಲ್ ಕ್ರಿಟಿಸಿಸಂ ಮಾದರಿಯಲ್ಲಿದ್ದರೂ ವ್ಯಾಖ್ಯಾನ ರೂಪಿಯದಲ್ಲ.

ಶನಿವಾರ, ಜೂನ್ 25, 2011

ನಿಗುರಿ ನಿಂತವರು

ನಾವು ನಿಮಗೆ ಸೋತು ಬಿದ್ದಿದ್ದೀವಿ
ಇಂಚಿಂಚು  ಮೈ ಇರಿಯುತ್ತೆ  ಉರಿಯುತ್ತೆ
ಆದ್ರೂ ನಮ್ಮನ್ನ ಶರಣಾಗತ ಮಾಡಿದ್ದೀರಿ
ನಮ್ಮನ್ನ ಜೀತಕ್ಕಿಟ್ಟು ಜೀವ ತೆಗಿತಿರಿ
                            ಅವಶೇಷ ಮಾಡ್ತೀರಿ

ನಮ್ಮ ರಕ್ತ ಇನ್ನೂ ರಕ್ತಿ ಆಗಿಲ್ಲ
ನಮ್ಮೆದೆ ಊದ್ಕೊಂಡು ಬೂದಿ ಆಗಿಲ್ಲ
ನಮ್ಮ ಮಖಾ ಮಣ್ಣಗಾಕಿ ತುಳಿತಿರಿ
ನಿಗುರಿ  ನಿಲ್ಲೊ ಮನಸ್ಸನ್ನ ತುಳಿಲಾರ್ರಿ
                          ತುಳ್ದು ಸಾಯ್ಸಲಾರ್ರಿ

ಯಾವತ್ತೂ ನಾವು ಕೈ ಹಾಕಿದ್ರೆ ಅಪಹಾಸ್ಯ ಮಾಡಿ
ಮೇರೆ ಮೀರಿ ಬೆಳೆಯೊ ಕೋಟೆ ಗೋಡೆ ನೀವು
ಯಾವತ್ತೂ ನಿಮ್ಮ ವಿರುದ್ಧ ರೋಷ ಇದ್ದೇ ಇದೆ
ಕೈಕಾಲು ಮುರ್ದು ಮೋರಿಗೆ ತಳ್ಳೊ ಹಕ್ಕಿದೆ
                         ನಿಮಗೇನಿದೆ? ನಿಮಗೆ?

ಏನಿದೆ ಅಂದ್ರೆ ಹೇನಿದೆ,ತೂಗು ಮಂಚ ಇದೆ
ಪೊಗದಸ್ತಾಗಿ ತಿರುಗಾಡೊ ಊಟ ಗೂಟ ಇದೆ
ಹಳಸಲು ತೇಗು ತೇಗಿಕೊಂಡು ಮಜಾ ಮಾಡ್ತೀರಿ
ಗನ್ನು ಲೋಡು ಮಾಡೋ ಜನ  ಇಟ್ಕೊಂಡಿದ್ದೀರಿ
                               ಆ ಜನ  ನಾವಿದ್ದೀವಿ

ನಿಮ್ಮ ಇತಿ ಹಾಸ್ಯ ಮಾಡೋಕೆ
ದುಡುಮಿ ಹಾಸಿಗೆ ಮಂಚಕ್ಕೆ ಕಿಡಿ ಹಾರ್ಸೋಕೆ
ಸಿಕ್ಕಿದ ಕುರ್ಚಿ ಎಳ್ಕೊಂಡು ಕೂರೋ
ನಿಮ್ಮದೇ ಜನ ನಾವು, ನಾವಿದ್ದೀವಿ
ನಮ್ಮ ಮುರೀಲಾಗದ ಮನಸ್ಸು ಇನ್ನೂ ಇದೆ
#

ಇಲ್ಲಿ ಅಸಹಾಯಕತೆ  ಇದೆ, ಹತಾಶೆಯಿದೆ, ಶೋಷಿತ ಭಾವನೆಯಿದೆ, ಸಿಟ್ಟು-ಸೆಡವು ಇದೆ. ವ್ಯವಸ್ಥೆಯ ವಿರುದ್ಧ ಮಡುಗಟ್ಟಿದ ಅವೆಲ್ಲವೂ ಮುಖ್ಯವಾಗಿ ಇಲ್ಲಿ ಸಿಟ್ಟಿನ ಅಭಿವ್ಯಕ್ತಿಯೆ.
ರನ್ನನ ಗದಾಯುದ್ಧದಲ್ಲಿನ `ಕೋಪಾರುಣನೇತ್ರಂ..ನೀರೊಳಗಿರ್ದುಂ ಬೆಮರ್ತನುರುಗಪತಾಕಂ'  ಎಂಬ ಈ ಸಾಲು ಸಿಟ್ಟಿನ ಅಭಿವ್ಯಕ್ತಿಗೆ ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧವಾದುದು.ಇಲ್ಲಿ ದುರ್ಯೋಧನನ ಗುಟ್ಟು  ಬಯಲಾಗಿದೆ. ಅವನು ಸಾವಿನ ಯುದ್ಧದ ಹಿಡಿತದಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಗಿದೆ. ಪಾಂಡವರ ವಿರುದ್ಧದ ಸಂಪೂರ್ಣ ಸೋಲು ಸನಿಹದಲ್ಲಿದೆ. ದುರ್ಯೋಧನನ ಅಸಹಾಯ ಸ್ಥಿತಿ ಹೇಡಿತನವೆಂದು ವಿರೋಧಿಗಳ ಕಣ್ಣಲ್ಲಿ ಕಾಣಲಿದೆ. ಅಷ್ಟೇಅಲ್ಲ  ಇದರಿಂದ ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆಯನ್ನೂ ತೆರೆದಿಟ್ಟಿದೆ.ಒಂದು ಕಡೆ ಇಡೀ ರಾಜ್ಯ ಕೋಶ ಸೈನ್ಯ ಬಂಧು ಬಳಗ ಎಲ್ಲವೂ ನಾಶವಾಗಿದ್ದು ತನ್ನ ಯುದ್ಧದ ನಿರ್ಣಯವನ್ನು ಅಣಕಿಸುತ್ತದೆ. ನಗೆಯ ಗೆಲುವು ತನ್ನದಾಗುವ ಬದಲು ತನ್ನ ಶತ್ರುಗಳ ವಶವಾಗಲಿದೆ. ಎಲ್ಲವನ್ನು ಕಳೆದುಕೊಂಡ ಭೀಕರ ಹತಾಶೆಯೇ ಸಿಟ್ಟಿನ ರೂಪ ಪಡೆದಿದೆ. ಇಂಗ್ಲಿಶರು ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಕಳೆದುಕೊಂಡ ನಂತರ  ಒಳಗಾದ ಅಸಹನೀಯವಾದ ಮನಸ್ಥಿತಿಯ ವ್ಯಗ್ರತೆಯನ್ನು 'ಲುಕ್ ಬ್ಯಾಕ್ ಇನ್ ಆಂಗರ್' ನಾಟಕ ಕಟ್ಟಿಕೊಡುವಂತೆ ಈ ಸಾಲಿದೆ. ದುರ್ಯೋಧನನ ಈ ಮನಸ್ಥಿತಿಯನ್ನು ಬಣ್ಣಿಸಲು ರನ್ನ ಅನುಸರಿಸಿದ ಅಲಂಕಾರಿಕ ವಿಧಾನದ ಬಗ್ಗೆ ಇದುವರೆಗೂ ಚರ್ಚೆ ನಡೆದಂತೆ ಕಂಡಿಲ್ಲ. ತಣ್ಣನೆಯ ನೀರೊಳಗಿದ್ದೂ ಬೆವರುವಷ್ಟು ಕೋಪ ಬಂದಿತ್ತೆಂಬ ವರ್ಣನೆ ಕೋಪದ ಅಗಾಧತೆಯನ್ನು ಮನವರಿಕೆ ಮಾಡಿಕೊಟ್ಟರೂ ಅದು ಉತ್ಪ್ರೇಕ್ಷೆಯಿಂದ ಕೂಡಿದೆಯಲ್ಲವೆ?
ಎಡಪಂಥೀಯ ಸೆಕ್ಯುಲರ್ ಆಶಯದ `ಇಕ್ಕರ್ಲಾ ಒದಿರ್ಲಾ'ದಂಥ ಕವಿತೆಗಳು ಡಿ ಆರ್ ನಾಗರಾಜ ಅವರಿಗೆ ಉತ್ಪ್ರೇಕ್ಷೆಯಾಗಿ ಕಂಡಿದೆ. ಹಾಗಾಗಿಯೆ ಅವರು ದಲಿತ ಕವಿ ಸಿದ್ಧಲಿಂಗಯ್ಯನವರನ್ನು `ಉತ್ಪ್ರೇಕ್ಷಾಲಂಕಾರ ಚಕ್ರವರ್ತಿ!' ಎಂದು ಘೋಷಿಸಿದ್ದಾರೆ. ಆದರೆ ಜಡ್ಡುಗಟ್ಟಿದ ಶ್ರೇಣೀಕೃತ ಸಮಾಜ ವ್ಯವಸ್ಥೆಯ ವಿರುದ್ಧ ಎತ್ತಿದ ಆಕ್ರೋಶ ಸ್ವಭಾವೋಕ್ತಿಯಾಗಿರಬೇಕಿತ್ತಲ್ಲ, ಉತ್ಪ್ರೇಕ್ಷೆ ಏಕಾಯಿತು? ಹೇಗಾಯಿತು? ಸಿದ್ಧಲಿಂಗಯ್ಯ ತಮ್ಮ ಕವಿತೆಗಳ ಮೂಲಕ ಹಂಚಿಕೊಂಡಿರುವ ಅನುಭವ ಅವಾಸ್ತವವೆ? ಅಥವಾ ದಲಿತ ಕವಿ ದಲಿತರ ದನಿಯಾಗಿ ಉಳಿಯದೆ ಇರಲು ಕಾರಣವೆ? ನನಗೆ ಸ್ವಲ್ಪ ಗೊಂದಲ.
ಹಾಗಾಗಿ ಈಗ ನಿಮ್ಮ ಮುಂದಿಟ್ಟಿರುವ ಕವಿತೆಯ ಸ್ವರೂಪವೇನು? ಸ್ವಭಾವೋಕ್ತಿಯೇ? ಉತ್ಪ್ರೇಕ್ಷೆಯೆ? ಯಾವುದು?

ಶನಿವಾರ, ಜೂನ್ 11, 2011

ಸೃಜನವೇದಿಯಲ್ಲಿ ಕಾವ್ಯ ಕುರಿತ ನನ್ನ ಟಿಪ್ಪಣಿ

ಪಾಶ್ಚಾತ್ಯ ದೇಶವೊಂದರಲ್ಲಿ ಇಂಗ್ಲಿಶ್ ಸಾಹಿತ್ಯವನ್ನು ಹೇಳಿಕೊಡುತ್ತಿದ್ದ ಹೇಮಂತ ಕುಲಕರ್ಣಿಯವರು ತಮ್ಮ ಪ್ರಾಧ್ಯಾಪಕ ಹುದ್ದೆಯಲ್ಲಿ ನಿವೃತ್ತರಾದ ನಂತರ1984ರ ಆಜೂಬಾಜೂ ಭಾರತಕ್ಕೆ ಹಿಂದಿರುಗಿದ್ದಿರಬೇಕು. ಆ ನಂತರ ಮುಂಬೈನಿಂದ ಅವರು ಕಾವ್ಯಕ್ಕೆ ಮೀಸಲಾದ ಸಾಹಿತ್ಯ ಪತ್ರಿಕೆಯನ್ನು `ಸೃಜನವೇದಿ' ಎಂಬ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸತೊಡಗಿದರು. ಅದರಲ್ಲಿ ಮುಖ್ಯವಾಗಿ ಹೇಮಂತ ಕುಲಕರ್ಣಿಯವರು ಇಂಗ್ಲಿಶ್ ಸಾಹಿತ್ಯದಲ್ಲಿ ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ ನಡೆದ ವಿವಿಧ ಸಾಹಿತ್ಯ(ಕಾವ್ಯಕ್ಷೇತ್ರದಲ್ಲಾದ) ಚಳವಳಿಗಳ ಸಾಂಸ್ಕೃತಿಕ ಪರಿಸರ, ಆಶಯ, ಗುಣ ಸ್ವರೂಪ, ಮತ್ತು ಸಾಧನೆಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ಇಂಗ್ಲಿಶ್ ಹಿನ್ನೆಲೆ ಇಲ್ಲದ ಕನ್ನಡ ಆಸಕ್ತ ಓದುಗರಿಗೆ ಇವು ಉಪಯುಕ್ತ ಮಾಹಿತಿ ಒದಗಿಸಿವೆ. 1986ರ ಸಂಚಿಕೆಯೊಂದರಲ್ಲಿ ಅವರು ಇತರ ಚಳವಳಿಗಳೊಂದಿಗೆ `ದ್ಯಾದಾಯಿಜಮಂ' ಕುರಿತು ವಿವರ ನೀಡಿದ್ದರು. ಅದಕ್ಕೆ ನಾನು ಕೂಡಲೇ ಪ್ರತಿಕ್ರಿಯಿಸಿ ಟಿಪ್ಪಣಿ ಸಿದ್ಧ ಪಡಿಸಿ ಸಂಪಾದಕರಿಗೆ ರವಾನಿಸಿದ್ದೆ. ಅದು ಸೃಜನವೇದಿಯ 1986ರ ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾಗಿ ನನಗೆ ಅಚ್ಚರಿಯನ್ನೂ ಉಂಟುಮಾಡಿತ್ತು. ಕಾವ್ಯ ಕುರಿತ ಅಂದಿನ ನನ್ನ ಚಿಂತನಾ ಲಹರಿಯನ್ನು ಅದು ದಾಖಲಿಸಿದ್ದು, ಅದನ್ನು ಯಥಾವತ್ತಾಗಿ ನಿಮ್ಮ ಮುಂದೆ ಇರಿಸುತ್ತಿದ್ದೇನೆ. 
#
"ಶ್ರೀಧರ ಪಿಸ್ಸೆ
ಕಾವ್ಯ ಮತ್ತು ಕತ್ತಿ- ಒಂದು ಅಭಿಪ್ರಾಯ
ಮಾನ್ಯರೇ,
`ನವ್ಯತೆಯಲ್ಲಿ ಪೂರ್ವ-ಪಶ್ಚಿಮ ಸಮನ್ವಯ' ಎಂಬ ತಮ್ಮ ಲೇಖನದಲ್ಲಿ ದ್ಯಾದಾಯಿಸಮ್ ನ ಕಾವ್ಯ ಧೋರಣೆಯನ್ನು ಕುರಿತು "ಕಾವ್ಯವೆಂದರೆ ತೀಕ್ಷ್ಣವಾದ ಚೂರಿ, ಪಿಸ್ತೂಲು, ಒಂದು ಬಾಂಬು.' ಎಲ್ಲವನ್ನೂ ಉಧ್ವಸ್ತಗೊಳಿಸಲು ಹೊರಟ ಶಕ್ತಿ. ಅದರಂತೆಯೆ ಸಮಾಜವು ಕವಿಯನ್ನು ಕಟ್ಟಿ ಹಾಕಿದ ಸೆರೆಮನೆ. ಈ ಸೆರೆಮನೆಯ ಗೋಡೆಗಳನ್ನೆಲ್ಲ ಕೆಡವಬೇಕಾದರೆ ಕಾವ್ಯದ ಬಾಂಬು ಸ್ಫೋಟವಾಗಬೇಕು. ಆಗ ಮಾತ್ರ ಕವಿಗೆ ಬಿಡುಗಡೆಯಾಗುತ್ತದೆ" ಎಂದು ವಿವರಿಸಿದ್ದೀರಿ.


ನಿಮ್ಮ ವಿವರಣೆ ನನಗೆ ಸಮ್ಮತವೆನಿಸಲಿಲ್ಲ. ಕಾರಣ ಯಾವ ಕಲಾಕೃತಿಯ ಮೂಲಭೂತ ಉದ್ದೇಶವೂ ಧ್ವಂಸಗೊಳಿಸುವಂಥದ್ದಲ್ಲ, ನಾಶಗೊಳಿಸುವಂಥದ್ದಲ್ಲ. ಆದರೂ ಅದು `ಒಂದು ತೀಕ್ಷ್ಣವಾದ ಚೂರಿ, ಒಂದು ಪಿಸ್ತೂಲು, ಒಂದು ಬಾಂಬು' ಆಗಿರುತ್ತದೆ ಮತ್ತು ಆಗಿರಲೇಬೇಕಾಗುತ್ತದೆ.  ಮಾನವತೆ ಮತ್ತು ಮಾನವತೆಯ ಉನ್ನತಿಗಾಗಿ ನಡೆಯುವ ನಿರಂತರ ಹೋರಾಟದಲ್ಲಿ ಒಬ್ಬ ಶ್ರೇಷ್ಟ ಕಲಾವಿದ ಅಸಾಮಾನ್ಯ, ಅಗ್ರಗಣ್ಯ ಮಾನವೀಯ ಹೋರಾಟಗಾರನಾಗಿರುತ್ತಾನೆ. ಅಸಾಮಾನ್ಯ ಹೋರಾಟತನ ಮತ್ತು ಅಭವ್ಯಕ್ತಿಯ ತೀವ್ರ ತುಡಿತ ಒಂದಕ್ಕೊಂದು ಗಂಟು ಬಿದ್ದಿರುವುದರಿಂದ ಆತನ ಮಾನವೀಯ ಪರವಾದ ಪ್ರಾಮಾಣಿಕ ಹೋರಾಟವಂತಿಕೆ ಸತತವಾಗಿ ಪರೀಕ್ಷೆಗೆ ಒಳಗಾಗುತ್ತಿರುತ್ತದೆ. ಮತ್ತು ಇದು ಸಹಜ, ಅನಿವಾರ್ಯ ಕೂಡ ಆಗಿರುತ್ತದೆ. ಯಾರು ಹೋರಾಟವಂತಿಕೆಯನ್ನು ಅಪ್ರತಿಮವಾಗಿ ಜೀವಂತ ಉಳಿಸಿಕೊಳ್ಳಲಾರರೋ ಅವರ ಕೃತಿಗಳೂ ಕಲಾವಂತಿಕೆಯಿಂದ ದೂರ ಸಾಗುತ್ತವೆ. ಪ್ರತಿಯೊಬ್ಬ ಶ್ರೇಷ್ಟ ಕಲಾವಿದನಿಗೂ ತನ್ನ ಕಲಾ ಮಾಧ್ಯಮವೇ `ಒಂದು ತೀಕ್ಷ್ಣವಾದ ಚೂರಿ ಒಂದು ಪಿಸ್ತೂಲು, ಒಂದು ಬಾಂಬು' ಅಂದರೆ ಆಯುಧ, ಅಂತಿಮವಾದ ಆಯುಧ. ತನ್ನ ಸುತ್ತಲ ತನ್ನ ಜನರಲ್ಲೆ ಮನೆ ಮಾಡಿರುವ ಮಾನವೀಯ ಗುಣ, ಪ್ರವೃತ್ತಿ, ತುಡಿತ, ಮಿಡಿತಗಳನ್ನು ನೆಲೆಯೂರಿಸಲು ಆ ಕಲಾವಿದ  ಸತತವಾಗಿ ತನ್ನ ಆಯುಧವನ್ನು ಹರಿತವನ್ನಾಗಿ, ಹೊಳಪನ್ನಾಗಿ, ಕಾಂತಿಯುಕ್ತವಾಗಿ ಮಾಡಬೇಕು ಮತ್ತು ಮಾಡುತ್ತಿರುತ್ತಾನೆ. ಯಾವ ಕಲಾವಿದ ತನ್ನ ಆಯುಧವನ್ನು
ಎಷ್ಟರಮಟ್ಟಿಗೆ ಹರಿತವನ್ನಾಗಿ ಹೊಳಪನ್ನಾಗಿ ಕಾಂತಿಯುಕ್ತವಾಗಿ ಮಾಡಿ ಎಷ್ಟರಮಟ್ಟಿಗೆ ಶಕ್ತಿಯುತವಾಗಿ ಸಮರ್ಥವಾಗಿ ಪ್ರಭಾವಯುತವಾಗಿ ಪರಿಣಾಮ ಬೀರುವುದರಲ್ಲಿ ಯಶ ಸಾಧಿಸುತ್ತಾನೋ ಅಷ್ಟರಮಟ್ಟಿಗೆ ಕಲಾಂತಿಕೆಯಲ್ಲಿ ಶ್ರೇಷ್ಟತೆಯನ್ನು ಪಡೆದಿರಲು ಸಮರ್ಥನಾಗಿರುತ್ತಾನೆ.


ಯಾವುದೇ ಕಲಾ ಪ್ರಕಾರದ ಅಭಿವ್ಯಕ್ತಿಯ ಮೂಲಭೂತ ತುಡಿತವೇ ಪ್ರತಿಭಟನೆಯ ಪ್ರವೃತ್ತಿಯುಳ್ಳದ್ದು, ಅಂದರೆ ಆವಿಷ್ಕಾರಗೊಂಡ ಸತ್ಯದ ಹೊಸ ರೂಪಗಳನ್ನು ಹೇಳುವಂಥದ್ದು, ಇಲ್ಲವೆ  ಬದಲಾದ ಯುಗಧರ್ಮಕ್ಕನುಗುಣವಾದ ಹೊಸ ಅನುಭವದ ಹಿನ್ನೆಲೆಯಲ್ಲಿ ಸತ್ಯದ ಹೊಸ ಮುಖಗಳನ್ನು ಎತ್ತಿ ಹಿಡಿಯುವಂಥದ್ದು. ಇಲ್ಲಿ ಪ್ರತಿಭಟನೆ ಧ್ವಂಸಗೊಳಿಸುವ ರೂಪ ಪಡೆದದ್ದಲ್ಲ, ಮಾನವತೆಯ ರಕ್ಷಣೆಯ ತಂತ್ರವನ್ನು ಹೊಂದಿರುವಂಥದ್ದು. ಕೆಲವು ಸಾರಿ ಮಾನವತೆಯ ಸಕಾರಾತ್ಮಕ ಮುಖಗಳನ್ನು ನಿಲುವುಗಳನ್ನು ಪ್ರತಿಪಾದಕಾತ್ಮಕವಾಗಿ ಅಭಿವ್ಯಕ್ತಿಸುವಾಗ ಕಲಾ ಮಾಧ್ಯಮ ಖಡ್ಗವಾಗದಿರಬಹುದು, ಆದರೆ ಅದರ ಹೊಳಪು, ಝಳಪು, ಕಾಂತಿ, ಚೈತನ್ಯದ ಜೀವಂತಿಕೆಯನ್ನು ಮೈ ಪಡೆದು ಬೆಳಗದೆ ಇರದು.


ಕಾವ್ಯ- ಅದು ಯಾವ ಮಾರ್ಗದ ಕಾವ್ಯವೇ ಆಗಿರಲಿ ತನ್ನ ಮೂಲಭೂತ ಸತ್ಯಗಳಲ್ಲಿ ಒಂದಾದ ಮಾನವೀಯ ಪರವಾದ ಧೋರಣೆಯನ್ನು ಪಡೆದಿರುತ್ತದೆ. ಆದ್ದರಿಂದ ಹೋರಾಟವಂತಿಕೆಯ ಗುಣ ದ್ಯಾದಾಯಿಸಂ ಕಾವ್ಯದ ಧೋರಣೆಯಾಗಿರುವಂತೆ ಮಾರ್ಗಾಮಾರ್ಗಗಳ ಯಾವ ಭೇದವೂ ಇಲ್ಲದೆ ಅಥವಾ ಅದನ್ನು ಮೀರಿ ಎಲ್ಲ ನಿಜ ಕಾವ್ಯದ ಧೋರಣೆಯೂ ಕೂಡ ಹೌದು ಅಲ್ಲವೆ?


ಟಿಪ್ಪಣಿ-ಸಂಪಾದಕರಿಂದ
ನನ್ನ ಹಿಂದಿನ ಸಂಚಿಕೆಯಲ್ಲಿ ಬಂದ ಲೇಖನದಲ್ಲಿ "ದ್ಯಾದಾಯಿಜಮ್" ಆಂದೋಲನದ ವಿಚಾರಗಳನ್ನಷ್ಟೇ ವಿವರಿಸಲಾಗಿದೆ. ಕೊಲ್ಲದ ಹೊರತು ಕಟ್ಟುವುದು ಸಾಧ್ಯವಿಲ್ಲ, ಕಟ್ಟುವುದು ಮುಖ್ಯ ಆದರ್ಶ. ಅದಕ್ಕಾಗಿ ಕೊಳೆತ, ದುಷ್ಟ ಶಕ್ತಿಗಳನ್ನೆಲ್ಲ ಕೊಲ್ಲುವುದು ಅವಶ್ಯಕ.              
                                         - ಹೇಮಂತ"
#
ಹೇಮಂತ ಕುಲಕರ್ಣಿ ತಮ್ಮ ಪತ್ರಿಕೆಯಲ್ಲಿ ದ್ಯಾದಾಯಿಜಮ್ ಕುರಿತು ಬರೆಯುವ ಹೊತ್ತಿಗೆ ಕನ್ನಡದಲ್ಲಿ ದಲಿತ-ಬಂಡಾಯ ಚಳವಳಿ ತುತ್ತತುದಿ ತಲುಪಿಯಾಗಿತ್ತು. ಎಡಪಂಥೀಯ ಚಿಂತನೆಯನ್ನು ಅಪ್ಪಿಕೊಂಡಿದ್ದ ಪರಿಣಾಮವಾಗಿ `ಖಡ್ಗವಾಗಲಿ ಕಾವ್ಯ' ಬಂಡಾಯದ ಘೋಷವಾಕ್ಯವೂ ಆಗಿತ್ತು. ಬಲಪಂಥೀಯ ಚಿಂತನಾ ಕ್ರಮಗಳು ಬಹು ಸಮುದಾಯಗಳ ಸಮಾಜದಲ್ಲಿ ಪರಂಪರಾಗತವಾಗಿ ಮೇಲುಗೈ ಪಡೆದು ಯಜಮಾನ ಸಂಸ್ಕೃತಿಯಾಗಿತ್ತು. ಬೇರುಬಿಟ್ಟಿದ್ದ ಬಲಪಂಥೀಯ ಚಿಂತನಾ ಕ್ರಮಗಳನ್ನು ಪ್ರಶ್ನೆ ಮಾಡಲು ದಲಿತ-ಬಂಡಾಯ ಚಳವಳಿಗೆ ಎಡಪಂಥೀಯ ಚಿಂತನಾಕ್ರಮಗಳು ಬಲ ನೀಡಿದ್ದವು. ಬಲಪಂಥೀಯ ಚಿಂತನಾ ಕ್ರಮಗಳು ಈ ನೆಲದಲ್ಲಿ ಚರಿತ್ರೆಯ ಭಾಗವಾಗಿ ಬೆಳೆದು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗಿ ಸಾಮಾಜಿಕ ರೂಢಿ-ಆಚರಣೆಗಳಾಗಿ ಭದ್ರವಾಗಿ ಈ ನಾಡಿನ ಜೀವನದ ಭಾಗವಾಗಿತ್ತು. ಅದನ್ನು ಪ್ರತಿರೋಧಿಸುವ ಅಂಶವನ್ನು ಕಲಿಸಿಕೊಟ್ಟ ಎಡಪಂಥೀಯ ಚಿಂತನೆಗಳು ಯೂರೋಪಿನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಮೈಪಡೆದುದಾಗಿತ್ತು.   ಬಂಡವಾಳಶಾಹಿ ಮತ್ತು ಕೂಲಿಕಾರ್ಮಿಕ ವರ್ಗಗಳು ಹುಟ್ಟಿಕೊಂಡ ಪಾಶ್ಚಿಮಾತ್ಯ ಸಮಾಜದಲ್ಲಿನ ಒಂದೇ ಭಾಷೆ, ಒಂದೇ ಸಮುದಾಯ, ಒಂದೇ ಜನಾಂಗ, ಒಂದೇ ರಾಷ್ಟ್ರ ಕಲ್ಪನೆಯಡಿ ಆರ್ಥಿಕ ಅಸಮಾನತೆಯನ್ನು ನಿವಾರಿಸುವ ಸಮಾಜವಾದದ  ಭಾಗವಾಗಿ ಎಡಪಂಥ ಕಲ್ಪನೆ ಇತ್ತು. ಆದರೆ ಭಾರತದ ಬಲಪಂಥೀಯ ಚಿಂತನಾಕ್ರಮ ಇಲ್ಲಿನ ವಿಶಾಲ ಭೂ ಪ್ರದೇಶದಲ್ಲಿ ಮೂಲನೆಲೆ ಹೊಂದಿರುವ ಬಹುಸಮುದಾಯಗಳ ಮೇಲೆ ನಿಯಂತ್ರಣ ಸಾಧಿಸುವ  ಯಜಮಾನ ಸಂಸ್ಕೃತಿಯ ರಾಜಕಾರಣದ ಭಾಗವಾಗಿದೆ. ಆದರೂ ಇದೇ ಕಾರಣಕ್ಕಾಗಿ ಈ ಬಹುಸಮುದಾಯಗಳು ಯೂರೋಪಿನ ಸಮಾಜದ ಹಾಗೆ ಎರಡು ಭಾಗಗಳಾಗಿ ಸರಳವಾಗಿ ಒಡೆದುಹೋಗಿಲ್ಲ. ಅದರ ಬದಲು ಶ್ರೇಷ್ಟ-ಕನಿಷ್ಟ ಕಲ್ಪನೆ ಆಧಾರದ ಮೇಲೆ  ಇಡೀ ಸಮಾಜ ಬಹುಶ್ರೇಣಿಕೃತ ಸಮಾಜವಾಗಿದೆ. ಅತಿ ಮೇಲಿರುವ ಸಮುದಾಯ ಮತ್ತು ಅತಿ ತಳಮಟ್ಟದಲ್ಲಿರುವ ಸಮುದಾಯಗಳ ನಡುವೆ ಮೇಲು-ಕೀಳು ಮೌಲ್ಯ ಒಪ್ಪಿತ ಹಲವು ಸಾಮಾಜಿಕ ಶ್ರೇಣಿಕರಣ ಈಗಲೂ ಇದೆ. ಈ ಸಮುದಾಯಗಳು ಭಾರತೀಯ ಸಮಾಜದ ಎಲ್ಲ ಕಾಲದಲ್ಲೂ ವಾಸ್ತವವೆ ಆಗಿದ್ದು ಮಧ್ಯಮ ನಿಲುವು ತಳೆದಿವೆ. ಇವು ಅತಿಯಾದ ಬಲಪಂಥ ಮತ್ತು ಅತಿಯಾದ ಎಡಪಂಥ ಒಪ್ಪದ ಮಧ್ಯಮ ವಾದ ಬಿಂಬಿಸುವ ಸಮುದಾಯಗಳಿವೆ. 
ಭಾರತದ ಬಲಪಂಥೀಯ ಮತ್ತು ಪಾಶ್ಚಾತ್ಯ ಎಡಪಂಥೀಯ ಚಿಂತನಾ ಕ್ರಮಗಳ ಹುಟ್ಟು ಮತ್ತು ಬೆಳವಣಿಗೆಗಳಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂಬಲ್ಲಿ ಯಾವ ಅನುಮಾನವೂ ಇಲ್ಲ. ಯೂರೋಪಿನ ಎಡಪಂಥ ಆಯಾ ಸಮಾಜದ ಅಗತ್ಯವಾಗಿದ್ದು ಭಾರತದ ಅತಿ ತಳಮಟ್ಟದ ಆರ್ಥಿಕ ದುಸ್ಥಿತಿಗೆ ಅರೆ ಸಾಮ್ಯತೆ ಹೊಂದಿದೆ ಎನ್ನಬಹುದು. ಹಾಗೆಯೆ ಅಲ್ಲಿನ ಸಮಾಜವಾದ ಮತ್ತು ಸಮಾನತೆಯ ಕಲ್ಪನೆ ಏಕ ರಾಷ್ಟ್ರ, ಏಕ ಭಾಷೆ, ಏಕ ಜನಾಂಗ  ಚಿಂತನೆಯನ್ನು  ಅಡಕಗೊಳಿಸಿಕೊಂಡಿದ್ದು ಇಲ್ಲಿ ಬಹು ಭಾಷೆ, ಬಹು ಸಂಸ್ಕೃತಿ, ಬಹು ಸಮುದಾಯ ಮತ್ತು ಏಕ ರಾಷ್ಟ್ರ ಕಲ್ಪನೆಗೆ ಒಗ್ಗುವುದಿಲ್ಲ. ಹಾಗಾಗಿ 'ಖಡ್ಗವಾಗಲಿ ಕಾವ್ಯ' ಎಂಬ ಕಲ್ಪನೆ  ಮತ್ತೊಂದು ಸಮುದಾಯದಿಂದ ಕೀಳಾಗಿ ಕಾಣುವ ಸಮುದಾಯಕ್ಕೆ ಮಾರಣಾಂತಿಕ ಪೆಟ್ಟು ಬೀಳುವ ಸಾಧ್ಯತೆಯಿತ್ತು. ಇದನ್ನು ತುಂಬ ಗಂಭೀರವಾಗಿ ಸ್ವೀಕರಿಸಿದ್ದಲ್ಲಿ ಬಹು ಸಮುದಾಯಗಳ ನಡುವಿನ ಏರ್ಪಾಟು ಮರು ಏರ್ಪಾಟಿಗೆ ಒಳಪಡುವ ಬದಲು ಅರಾಜಕತೆ ಮತ್ತು ಆಂತರಿಕ ಯುದ್ಧಕ್ಕೆ ಕಾರಣವಾಗಬಹುದಿತ್ತು. ಹಾಗೆ ಎಡಪಂಥದಲ್ಲಿ ತೀವ್ರ ನಿಷ್ಟೆ ತಾಳಿದ ಚಳವಳಿಗಳಿಗೆ ಉಗ್ರವಾದದ ಹಣೆಪಟ್ಟಿ ಕಟ್ಟಿ ದಮನಿಸಲಾದ ನಿದರ್ಶನವಾಗಿ ನಕ್ಸಲೈಟ್ ಚಳವಳಿ ನಮ್ಮ ಮುಂದಿದೆ. ಆದರೆ ದಲಿತ-ಬಂಡಾಯ ಸಾಹಿತ್ಯ ಚಳವಳಿ ತನ್ನ ಆಶಯಗಳನ್ನು ಸಾಮಾಜಿಕ ಬದ್ಧತೆಯ ಕಲ್ಪನೆಯಡಿ ಪ್ರತಿಪಾದಿಸಿ  ಸಾಮಾಜಿಕ ಪರಿವರ್ತನೆಗೆ ಮೂಲವಾದ ವಿಚಾರವಾದದ ಬೆಳವಣಿಗೆಗೆ ಪ್ರೇರಕವಾಯಿತು. ಈ ಚಳವಳಿಯ ಮುಂಚೂಣಿಯಲ್ಲಿದ್ದವರಿಗೆ ಸಾಮಾಜಿಕ ಮಾನ್ಯತೆ ಮತ್ತು ಅಧಿಕಾರದ ಸ್ಥಾನಮಾನಗಳನ್ನು ನೀಡಿದ ಶ್ರೇಣೀಕೃತ ಸಮಾಜ ಅಬಾಧಿತವಾಗಿ ಮುಂದುವರೆಯುವ ಅವಕಾಶವನ್ನೂ ಪಡೆದುಕೊಂಡಿತು. ಇದರ ಹಿಂದೆ ಆಗ ಅಗೋಚರವಾಗಿದ್ದರೂ ಸಕ್ರಿಯವಾಗಿದ್ದ ಮಧ್ಯಮವಾದಿಗಳ ನಿಲುವು ಕಡೆಗಣಿಸುವಂಥದ್ದಲ್ಲ. ಈ ಮಧ್ಯಮ ವಾದಿಯೊಬ್ಬನ ನಿಲುವು ಮೇಲಿನ ಟಿಪ್ಪಣಿಯಲ್ಲಿ ಪ್ರತಿಪಾದಿತವಾಗಿರುವಂತೆ ನನಗೆ ಈಗ ಕಾಣುತ್ತದೆ. ಹಾಗಾಗಿಯೆ ಸೃಜನಶೀಲತೆಯನ್ನು ಮಾನವೀಯ ನೆಲೆಯಲ್ಲಿ ನಡೆಯುವ ಜೀವನ ಮೌಲ್ಯಗಳ ಪಲ್ಲಟವೆಂದೂ ಅರಾಜಕತೆ ಮತ್ತು ಹಿಂಸೆಗೆ ಮೂಲವಾದ ಕ್ರಾಂತಿಯಲ್ಲವೆಂದೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.     
ಸೃಜನಶೀಲತೆಯೆಂದರೆ ಸಾಹಿತ್ಯ/ಕಲಾ ಚಳವಳಿಯೊಂದರ ವಸ್ತು, ಶೈಲಿ, ವಿಧಾನಗಳಲ್ಲಿ ತಲೆದೋರಿದ ಸಿದ್ಧ ಮಾದರಿಯನ್ನು ನಿರಾಕರಿಸದೆ, ಕೆಡವದೆ ಕಲೆಯ ಹೊಸ ಸಾಧ್ಯತೆಯನ್ನು ಕಂಡುಕೊಳ್ಳಲು, ಕಟ್ಟಲು ಸಾಧ್ಯವಿಲ್ಲ; ಚಲನಶೀಲತೆಯನ್ನು ಸಾಧಿಸಲು ಆಗುವುದಿಲ್ಲ ಎಂಬ ಸರಳ ನೋಟದಿಂದ ಹೇಮಂತ ಕುಲಕರ್ಣಿಯವರು ದ್ಯಾದಾಯಿಜಮ್ ಆಂದೋಲನವನ್ನು ವಿವರಿಸಿದ್ದಾರೆ. ಇದನ್ನೇ ನಾನು ಭಾರತೀಯ ಸಾಮಾಜಿಕ ಸಂದರ್ಭದ ನಿಟ್ಟಿನಿಂದ ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಹಾಗಾಗಿಯೆ ಸೃಜನಶೀಲ ಕ್ರಿಯೆ ಮತ್ತು ಸಾಮಾಜಿಕ ಸಂಬಂಧಗಳು ಪರಸ್ಪರ ಪರಿಣಾಮ ಬೀರುವ ಹಾಗೂ ಅನ್ಯೋನ್ಯ ಸಂಬಂಧವಿರುವ ಅಂಶಗಳಾಗಿ ನನಗೆ ಕಂಡಿದೆ.