ಗುರುವಾರ, ಜುಲೈ 14, 2011

ಬೇಂದ್ರೆಯವರ 'ಶ್ರಾವಣ'- ಕಾವ್ಯ ಕಲ್ಪನೆಯ ಪ್ರತೀಕ

ಕನ್ನಡ ಕವಿಗಳನ್ನು ಕೋಗಿಲೆ ಒಂದಲ್ಲ ಒಂದು ರೀತಿಯಲ್ಲಿ ಕಾಡಿದೆ. ಆದರೆ ಶ್ರಾವಣದ ತಿಂಗಳು ಬೇಂದ್ರೆಯವರನ್ನು ಕಾಡಿದಂತೆ ಮತ್ತೊಬ್ಬ ಕವಿಯನ್ನು ಕಾಡಿಲ್ಲ. ಶ್ರಾವಣ ಬೇಂದ್ರೆಗೆ ಅತಿ ಅಚ್ಚುಮೆಚ್ಚಿನ ಮಾಸ. ಹಾಗೆಂದು ನವೋದಯ ಕಾಲದ ಪ್ರಕೃತಿ ಗೀತೆಗಳ ಜೊತೆ ಬೇಂದ್ರೆಯ ಶ್ರಾವಣ ಕವಿತೆಗಳನ್ನು ನೋಡಲು ಬರುವುದಿಲ್ಲ. ಅವಕ್ಕೆ ಅದರದೇ ಸ್ಥಾನವಿದೆ. ಬೇಂದ್ರೆಯವರ ಕಾವ್ಯ ವ್ಯಕ್ತಿತ್ವವನ್ನು 'ಶ್ರಾವಣ' ಆವರಿಸಿಕೊಂಡಿರುವುದನ್ನು ಅವರ ವಿಪುಲವಾದ ಶ್ರಾವಣ ಕವಿತೆಗಳೇ ಸಾರುತ್ತವೆ.

'ನಾದಲೀಲೆ' ಸಂಕಲನದ 'ಶ್ರಾವಣ' ಕವಿತೆಯನ್ನು ಇಲ್ಲಿ ತೆಗೆದುಕೊಂಡಿದೆ. ಈ ಕವಿತೆಯ ಪ್ರತಿ ಸಾಲಿನಲ್ಲಿ ಮೂರು ಮೂರು ಮಾತ್ರೆಯ ನಾಲ್ಕು ಗಣಗಳು ಇದ್ದು, ಒಟ್ಟು ಹನ್ನೆರಡು ಮಾತ್ರೆಯ ಸರಳ ರಗಳೆಯಲ್ಲಿ ಸಹೃದಯ ಓದುಗರನ್ನು ಕುಣಿಸುತ್ತ ಮಣಿಸುತ್ತ ಸಾಗುವಂತೆ ಕಾಣುತ್ತದೆ. ಆದರೂ ಕೆಲವು ಸಾಲುಗಳು ಹನ್ನೆರಡು ಮಾತ್ರೆಗಳನ್ನು ಹೊಂದಿಲ್ಲ. ಆದರೆ ಅವುಗಳ ಓಟದ ಗತಿಯಲ್ಲಿ ಯಾವ ಅಡೆ ತಡೆಯೂ ಇಲ್ಲ. ಶಿಷ್ಟ ಮತ್ತು ಜಾನಪದ ಸಾಹಿತ್ಯವನ್ನು ಒಂದೇ ಹಿಡಿಯಲ್ಲಿ ಅರಗಿಸಿಕೊಂಡಿದ್ದ ಬೇಂದ್ರೆ  ಅಕ್ಷರ, ಮಾತ್ರಾ, ಅಂಶ ಛಂದಸ್ಸನ್ನು ರಕ್ತಗತ ಮಾಡಿಕೊಂಡು ನಾದದ ನದಿ ಹೊಮ್ಮಿಸಿರುವುದು ಹಳೆಯ ವಿಚಾರ. ಇಲ್ಲಿಯೂ ಅದರ ಸೆಳಕನ್ನು ಕಾಣಬಹುದು. ಅದರ ಬೆಳಕಲ್ಲಿ ಶ್ರಾವಣವನ್ನು ಒಂದು ಮಗುವಾಗಿ ಕಂಡು ಆತ್ಮೀಯ ಆಹ್ವಾನ ನೀಡಲಾಗಿದೆ. ಈ ಕವಿತೆಯಲ್ಲಿ ಅಭಿವ್ಯಕ್ತವಾಗಿರುವ ಉತ್ಕಟವಾದ ಆತ್ಮೀಯತೆ, ಪ್ರೀತಿಯ ರೀತಿ,  ಕವಿ ತನ್ನೆದೆಯಿಂದ ನೇರವಾಗಿ ಆ ಭಾವನೆಗಳನ್ನು ಕಿತ್ತು ಪದಗಳ ರೂಪದಲ್ಲಿ ಇಟ್ಟಿರುವಂತೆ ಇದೆ. "ಸಾಧನಕೇರಿಯಲ್ಲಿ ಮೊದಲ ಸಲ ಶ್ರಾವಣದ ದರ್ಶನವಾದುದು ಹೀಗೆ" ಎಂಬುದು ಕವಿ ಈ ಕವಿತೆಗೆ ನೀಡಿರುವ ಟಿಪ್ಪಣಿ.

ಶ್ರಾವಣ

ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೊ ಎಂತೊ ಒರಲುತಿಹುದು
ಆ... ಹಸಿರ ಒಳಗೆ ಹೊರಗೆ
ನೀರ ಬೆಳಕ ತುಣುಕು ಮಿಣುಕು,
ಅಲ್ಲಿನಿಂದ ಬಂದೆಯಾ!
ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು ತಂದೆಯಾ?
ಏಕೆ ಬಂದೆ? ಏನು ತಂದೆ?
ಹೇಳೊ ಹೇಳು ಶ್ರಾವಣಾ
ನೀನು ಬಂದ ಕಾರಣ.
ಪಡುವ ದಿಕ್ಕಿನಿಂದ ಹರಿವ
ಗಾಳಿ-ಕುದುರೆಯನ್ನು ಏರಿ
ಪರ್ಜನ್ಯ ಗೀತವನ್ನು
ಹಾ...ಡುತ್ತ ಬಂದಿತು,
ಬನದ ಮರದ ಮೇಳವೆಲ್ಲ
ಸೋ... ಎಂದು ಎಂದಿತು.
ಬಿದಿರು ಕೊಳಲ ನುಡಿಸಿತು
ಮಲೆಯ ಹೆಳಲ ಮುಡಿಸಿತು:
ಬಳ್ಳಿ ಮಾಡ ಬಾಗಿಸಿತ್ತು
ಗಿಡಗಳ ತಲೆದೂಗಿಸಿತ್ತು;
ಮರದ ಹನಿಯ ಮಣಿಗಳನ್ನು
ಅತ್ತ ಇತ್ತ ತೂರುತಾ
ಹಸಿರು ಮುರಿವ ತೊಂಗಲನ್ನು
ಕೆಳಗೆ ಮೇಲೆ ತೂಗುತಾ
ಬರುವ ನಿನ್ನ ಅಂದ ಚೆಂದ
ಸೂಸು ಸೊಗಸು ಆನಂದ
ಗುಳ್ಳ ಗಂಜಿ ತೊಡವ ತೊಟ್ಟು
ಪಾವಸೆಯಾ ಉಡುಪನುಟ್ಟು
ನಗುವ ತುಟಿಯ ನನೆದ ಎದೆಯ
ತರಳ ನೀನು ಶ್ರಾವಣಾ.
ಅಳಲು ನಗಲು ತಡವೆ ಇಲ್ಲ
ಇದುವೆ ನಿನಗೆ ಆಟವೆಲ್ಲ
ಬಾರೊ ದಿವ್ಯ ಚಾರಣ
ತುಂಟ ಹುಡುಗ ಶ್ರಾವಣಾ.
ನೀನು ನಡೆದು ಬಂದ ಮಾಸ
ಹೆಣ್ಗೆ ತವರು ಮನೆಯ ವಾಸ
ಬರಿಯ ಆಟ ಬರಿಯ ಹಾಸ
ಮಧು ಮಾಸಕ್ಕೂ ಹಿರಿದದು
ಮಧುರ ಮಾಸ ಸರಿಯದು
ಮೋಡ ಗವಿದ ಕಣ್ಣಿನವರು
ಮುಗಿಲ ತಂದೆ ಮುಗಿಲರಾಯ
ನಿನ್ನನ್ನೆ ಬಯಸಿದಾ.
ಬಿಸಿಲ ಹಣ್ಣು ತಿಂದು ಹೊತ್ತು
ಹೆತ್ತ ನಿನ್ನ ಭೂಮಿ ತಾಯಿ
ಪಾಪ, ನಿನ್ನ ನೆನಸಿತು
ಎದೆಯ ಸೆರಗ ನೆನೆಸಿತು
ಅಂತೆ ಬಂದೆ ಬಾರಣಾ
ಬಾರೊ ಮಗುವೆ ಶ್ರಾವಣಾ!

'ಹಾಡು-ಪಾಡು' ಸಂಕಲನದ 'ಶ್ರಾವಣ' ಎಂಬ ವರ್ಣನಾತ್ಮಕ ಕವಿತೆಯ ಎರಡು ನುಡಿಗಳು ಹೀಗಿವೆ.

ಬನಬನ ನೋಡು ಈಗ ಹ್ಯಾಂಗ |
    ಮದುವಿ ಮಗನ್ಹಾಂಗ |
    ತಲಿಗೆ ಬಾಸಿಂಗ
    ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು
                 * *
ಗುಡ್ಡ ಗುಡ್ಡ ಸ್ಥಾವರ ಲಿಂಗ
    ಅವಕ ಅಭ್ಯಂಗ
    ಎರಿತಾವನ್ನೊ ಹಾಂಗ |
    ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||

ಮೇಲಿನ ಮೊದಲ ನುಡಿಯಲ್ಲಿ ಶ್ರಾವಣ ಮದುವಣಿಗನಾಗಿ ಚಿತ್ರಿತವಾಗಿದೆ. ಈ ಶ್ರಾವಣ ಸೃಷ್ಟಿಶೀಲತೆಗೆ ಸಿದ್ಧನಾಗಿ ಹರ್ಷಗೊಂಡು ನಿಂತಂತಿದೆ. ನಂತರದ ನುಡಿಯಲ್ಲಿ ಲೈಂಗಿಕ ಪ್ರತಿಮೆಯನ್ನು ಸೃಷ್ಟಿ ಮಾಡಿ ಅದನ್ನು ದೈವಿಕ ಭಾವನೆಯ ಕಣ್ಣಿಂದ ನೋಡಲಾಗಿದೆ.  ಶ್ರಾವಣವಿಲ್ಲಿ ಸೃಷ್ಟಿಯ ಸಂಕೇತವಾಗಿ ಪ್ರಕಟವಾಗಿದೆ. ಶ್ರವಣ-ಶ್ರಾವಣ ಎಂಬ ಅರ್ಥ ವಿನ್ಯಾಸವೂ ಕವಿ-ಕಾವ್ಯ-ಸಹೃದಯ ಚೌಕಟ್ಟಿನಲ್ಲಿ ಪ್ರವೃತ್ತವಾಗಿರಬಹುದೆ?

ನಾದಲೀಲೆ ಸಂಕಲನದ ಈ ಮೇಲಿನ ಶ್ರಾವಣ ಕವಿತೆಯಲ್ಲಿ ಮೊದಲಿಗೆ 'ಶ್ರಾವಣದ ಬಾಹ್ಯ ವೈಭವ, ಉನ್ಮಾದ,  ಅಂತಃಸತ್ವದ ವರ್ಣನೆ ಇದೆ. ನಂತರದಲ್ಲಿ ಶ್ರಾವಣವನ್ನು ವ್ಯಕ್ತಿ ಸಂಬಂಧ ಚೌಕಟ್ಟಿನಲ್ಲಿಟ್ಟು ಉತ್ಕಟವಾದ ಆತ್ಮೀಯ ಆಹ್ವಾನ ನೀಡಿದ ಚಿತ್ರಣವೂ ಇದೆ. ಇವೆಲ್ಲದರೊಂದಿಗೆ ಕಾವ್ಯ ಸೃಷ್ಟಿಯ ಪ್ರಕ್ರಿಯೆಯನ್ನೂ ಅದರ ವಿಲಾಸವನ್ನೂ ಪರಿಣಾಮವನ್ನೂ ಅಭಿವ್ಯಕ್ತಿಸುತ್ತಿದೆ. ಸೃಷ್ಟಿ ಪ್ರಕ್ರಿಯೆ ಮನಸ್ಸಿನ ಸುಪ್ತ ಪ್ರಜ್ಞೆಯಲ್ಲಿ ರೂಪ ತಾಳುತ್ತದೆಂದು ವಿವರಣೆ ಇದೆ. ಇದನ್ನೆ ಅಡಿಗರು 'ಭೂತ' ಕವನದಲ್ಲಿ 'ನೀರ ಮೇಲಕ್ಕೊಂದು ಮಡಿ ಕೆಳಕ್ಕೇಳು ಮಂಜಿನ ಶಿಖರಿ' ಎಂಬ ಕಣ್ಣಿಗೆ ಕಟ್ಟುವ ಪ್ರತಿಮೆಯ ಮೂಲಕ ಅಭಿವ್ಯಕ್ತಿಸಿದ್ದಾರೆ. ಬೇಂದ್ರೆ ತಮ್ಮ ಭಾವನಾತ್ಮಕ ನಿರೂಪಣೆಯಲ್ಲಿ ಹೀಗೆ ಬಣ್ಣಿಸಿದ್ದಾರೆ.

ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೊ ಎಂತೊ ಒರಲುತಿಹುದು

ನೆಲ - ಕಣ್ಣಿಗೆ ಗೋಚರವಾಗುವ ಸ್ಥಿತಿ, ಅಂದರೆ ಮನಸ್ಸಿಗೆ ಕಾಣುವಂತಹದು; ಪ್ರಜ್ಞಾಪೂರ್ವಕವಾದುದು. ಮುಗಿಲು - ನೆಲದಾಚೆಗಿನ ಸ್ಥಿತಿ, ಅಂದರೆ ಪ್ರಜ್ಞಾವಲಯ ಮೀರಿದ ಸ್ಥಿತಿ. ಈ ಎರಡು ಸ್ಥಿತಿಗಳ ನಡುವೆ ಎಲ್ಲೊ ದೂರದಲ್ಲಿ ಹಸಿರಿನ ಹಸುಗೂಸು ಒಂದು - ಜೀವಂತಿಕೆ ಪಡೆದಿರುವ ಬೀಜವೊಂದು -  ಆಗೊಮ್ಮೆ ಈಗೊಮ್ಮೆ ಹೊರಳುತ್ತ ಅಸ್ಪಷ್ಟವಾಗಿ ಸದ್ದು ಮಾಡುತ್ತ ತನ್ನ ಇರುವಿಕೆಯನ್ನು ಸಾರುತ್ತಿದೆ. ಹೀಗೆ ಗ್ರಹಿಸಿದರೆ, ಅದು ಕವಿಯ ಮನಸ್ಸನ್ನು ಹೊಕ್ಕ ಅನುಭವ ದ್ರವ್ಯ ಆತನ ಸುಪ್ತ ಮನಸ್ಸಿನಲ್ಲಿ ಕೃತಿಯಾಗಿ ರೂಪ ತಳೆಯುವ ಬಗೆಯನ್ನು ಹೇಳಿದಂತೆ ಗೋಚರವಾಗುತ್ತದೆ. ಕಾವ್ಯ ಸೃಷ್ಟಿಯನ್ನು ಒಂದು ಮಗು ಹುಟ್ಟುವ ಕ್ರಮದ ಹೋಲಿಕೆಗೆ ಅನ್ವಯಿಸಿದ್ದು, ಗರ್ಭಸ್ಥ ಮಗುವಿನ ಆಟದ ಅನುಭವದ ಅರಿವು ತಾಯಿಗೆ ಆಗುವ ವರ್ಣನೆಯೂ ಇದಾಗಿದೆ.

ಮುಂದಿನ ಮೂರು ಸಾಲುಗಳಲ್ಲಿ ಮಗು ಹುಟ್ಟಿರುವ ಸೂಚನೆ ನೀಡಲಾಗಿದೆ. ಆ ಮಗುವಿಗೆ ಸೃಷ್ಟಿಯ ಮೂಲದ ಬಗ್ಗೆ ವಿವರ ಕೇಳಲಾಗುತ್ತಿದೆ.  ಆ ಪ್ರಶ್ನೆಯಲ್ಲಿ ಸೃಷ್ಟಿ ಪ್ರಕ್ರಿಯೆಯ ನಿಗೂಢತೆಯನ್ನು ಅರಿಯುವ ಕುತೂಹಲ ಮತ್ತು ಹೊಸ ಸೃಷ್ಟಿಯ ಸೌಂದರ್ಯ ದರ್ಶನದಿಂದ ಉಂಟಾದ ನಿಬ್ಬೆರಗಿನ ವಿಸ್ಮಯ ಪ್ರಕಟವಾಗಿದೆ. ಹುಟ್ಟಿದ ಈ ಹೊಸ ಮಗುವನ್ನು 'ನೀರ ಬೆಳಕ ತುಣುಕು ಮಿಣುಕು' ಎಂದು ಬಣ್ಣಿಸಲಾಗಿದೆ. ಇದು ಜೀವಂತಿಕೆಯ ಸಂಕೇತವಾದ 'ನೀರು' ಮತ್ತು 'ಹಸಿರು'ನಿಂದ ಬಂದಿದೆ. 'ನೀರು' ಪದದರ್ಥ ವಿಶೇಷವುಳ್ಳದ್ದಾಗಿದೆ. ತೇವ, ಆರ್ದ್ರತೆಯ ಮೂರ್ತರೂಪವಾದ ನೀರು, ಸುಧೆ, ಅಮೃತದ ಮರುರೂಪ.  ರಸ ಕೂಡ ನೀರೇ ಆಗಿದ್ದು, ಹೊಸ ಸೃಷ್ಟಿಯ ಬೆಡಗು, ಸೊಗಸು, ಹೊಳಪು, ಲಾವಣ್ಯ ತುಂಬಿದ ಸೌಂದರ್ಯದ ಸಿರಿಯಾಗಿದೆ. ಈ ಸೃಷ್ಟಿಯ ಸಂಕೇತ 'ಕುಣಿವ ಮಣಿವ ಹೆಡೆಯ ಹಾವುಗಳನು ಹಿಡಿದು' ತಂದಿತು ಎನ್ನಲಾಗಿದೆ. ಲೈಂಗಿಕ ಪ್ರತೀಕವಾಗಿದೆ ಹೆಡೆಯ ಹಾವು.ಅದು ಕುಣಿಸಿ ಮಣಿಸುವ, ಒಲಿಸಿ ನಲಿಸುವ ಹೊಸ ಭಾವ ರಸವಾದ ಸೃಷ್ಟಿ ಪ್ರಕ್ರಿಯೆಯನ್ನು ಹೊತ್ತು ತಂದಿದೆ ಎಂದು ಹೇಳಲಾಗಿದೆ, ಅಲ್ಲವೆ?

ಏಕೆ ಬಂದೆ? ಏನು ತಂದೆ?
ಹೇಳೊ ಹೇಳು ಶ್ರಾವಣ?
ನೀನು ಬಂದ ಕಾರಣಾ

ವಿಸ್ಮಯ ಬೆರೆತ ಸಂದೇಹದ ದನಿಯಲ್ಲಿ 'ಭಾವಗೀತ'ದ 'ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ'ದ ಮತ್ತೊಂದು ರೂಪ ಮೈ ತಳೆದಿದೆ. ಇದರ ಸ್ಪಷ್ಟವಾದ ಅರ್ಥರೂಪ  ಮುಂದಿನ ಸಾಲುಗಳಲ್ಲಿ ಹೊಳಹು ದೋರಿದೆ.

ಪಡುವ ದಿಕ್ಕಿನಿಂದ ಹರಿವ
ಗಾಳಿ ಕುದುರೆಯನ್ನು ಏರಿ
ಪರ್ಜನ್ಯ ಗೀತವನ್ನು
ಹಾಡುತ್ತ ಬಂದಿತು


'ಪಡುವ ದಿಕ್ಕು', 'ಗಾಳಿ ಕುದುರೆ, 'ಪರ್ಜನ್ಯಗೀತ', 'ಹಾಡುತ್ತ ಬಂದಿತು' ಇವು ಮುಖ್ಯವಾದ ಪದ ಪುಂಜಗಳು. ರಂಜಿತ ರಾಗ ಮಾಲೆಯ ಹರಿವು ಪಡುವ ದಿಕ್ಕನ್ನು ಚಿತ್ರಿಸಿದರೆ, ಲೈಂಗಿಕ ಅಭಿಲಾಷೆಯುಳ್ಳ ಮನಸ್ಥಿತಿಯನ್ನು ಗಾಳಿ ಕುದುರೆ ಪ್ರತಿಮೆ ಧ್ವನಿಸುತ್ತದೆ. ಪರ್ಜನ್ಯ ಗೀತ ಸೃಷ್ಟಿ ಗೀತೆಯಾಗಿದ್ದು, ಸೃಷ್ಟಿ ಪ್ರಕ್ರಿಯೆಯನ್ನು ಪಸರಿಸುವ ಕಾರ್ಯವನ್ನು ಹಾಡುತ್ತ ಬಂದಿತು ಎಂಬ ಮಾತು ಹೇಳುತ್ತದೆ.

ಈ ವರೆಗಿನ ಬಣ್ಣನೆ ಸೃಷ್ಟಿ ಪ್ರಕ್ರಿಯೆ ಲುರಿತಿದೆ. ಮುಂದಿನ ಹಂತದಲ್ಲಿ ಕಾವ್ಯ ವಿಲಾಸದ ವರ್ನನೆ ಬರುತ್ತದೆ. ಸೃಷ್ಟಿಶೀಲತೆ ತರುವ ಆನಂದದ ವೈಭೋಗವನ್ನು - ಮರ, ಗಿಡ, ಬಳ್ಳಿ, ಬಿದಿರುಗಳು ಸ್ಪಂದಿಸಿ ಆನಂದದಲ್ಲಿ ಮೈ ಮರೆತವು ಎನ್ನುವುದನ್ನು - 'ಬನದ ಮರದ ಮೇಳವೆಲ್ಲ ಸೋ.. ಎಂದು ಎಂದಿತು', 'ಬಿದಿರ ಕೊಳಲ ನುಡಿಸಿತು', 'ಬಳ್ಳಿ ಮಾಡ ಬಾಗಿಸಿತ್ತು', 'ಗಿಡಗಳ ತಲೆ ತೂಗಿಸಿತ್ತು', 'ಮರದ ಹನಿಯ ಮನಿಗಳನ್ನು ಅತ್ತ ಿತ್ತ ತೂರುತಾ', ಮತ್ತು 'ಹಸಿರು ಮುರಿವ ತೊಂಗಲನ್ನು ಕೆಳಗೆ ಮೇಲೆ ತೂಗುತಾ' ಎನ್ನುವ  ಮಾತುಗಳಿಂದ ಹೇಗೆ ಭಾವಾಭಿವ್ಯಕ್ತಿಯನ್ನರಿಯದ ಸಸ್ಯರಾಶಿಗಳೂ ತಮ್ಮದೇ ಆದ ರೀತಿಯಲ್ಲಿ ಭಾವಾಭಿವ್ಯಕ್ತಿಯನ್ನು ತೋರಿದವು ಎಂದು ಬೇಂದ್ರೆ ವರ್ಣಿಸಿದ್ದಾರೆ. ಸಂವೇದನಾಶಕ್ತಿ ಇಲ್ಲದ ಮರಗಿಡಗಳ ಆನಂದದ ಉನ್ಮಾದ ಈ ಮಟ್ಟದಾದರೆ ಸಂವೇದನಾಶೀಲನಾದ ಮನುಷ್ಯನ ಆನಂದಾತಿರೇಕ ಇನ್ನೆಷ್ಟಿರಬಹುದು? ಹೀಗೆ ಸೃಷ್ಟಿಶೀಲತೆ ಕುರಿತ ಭಾವನೆಯನ್ನು ಕೇವಲ ಸಂವೇದನಾರಹಿತ ಪ್ರತಿಮೆಗಳಿಂದಲೆ ಕವಿ ಧ್ವನಿಸುತ್ತಿದ್ದಾನೆಯಲ್ಲವೆ? 'ಗಿಡಗಂಟೆಗಳ.. ಕೊರಳೊಳಗಿಂದ ಹಕ್ಕಿಗಳಾ ಹಾಡು' ಕುರಿತ ಮಾಸ್ತಿಯವರ ಗ್ರಹಿಕೆಯ ಕ್ರಮವನ್ನೆ ಈ ಮೇಲಿನ ಮಾತುಗಳಿಗೂ ಅನ್ವಯಿಸಿದರೆ  ಅದರಿಂದ ಉತ್ಪತ್ತಿಯಾಗುವ ಭಾವ ಸಂಪತ್ತು , ರಸ ಸಂಪತ್ತು ಓದುಗರು ತಮ್ಮ ಅನುಭವ ಮತ್ತು ಕಲ್ಪನಾ ಸಾಮರ್ಥ್ಯಕ್ಕೆ ತಕ್ಕಂತೆ ಅನುಭವಿಸಬಹುದು.

ಸರ್ವ ಶ್ರೇಷ್ಟ ಲೋಹವಾದ ಚಿನ್ನವನ್ನು ಅಳೆಯುವ, ತೂಗುವ ಮಾಪಕವಾದ ಗುಲಗಂಜಿಯನ್ನೆ ಅದು ತನ್ನ ಒಡವೆಯಾಗಿ ಧರಿಸಿದೆ. ಸರ್ವಶ್ರೇಷ್ಟತೆಯಲ್ಲಿ ಅದ್ವಿತೀಯತೆ ಪಡೆದಿದೆ. ಅದು ಹಾವಸೆಯಂಥ ನುಣುಪಿನ ನವಿರಾದ ಉಡುಪನ್ನುಟ್ಟು ಆಕರ್ಷಿಸಿ ಮಂತ್ರಮುಗ್ಧರನ್ನಾಗಿಸುವುದು. ಮುಗ್ಧ ಕಣ್ಣ ಹೊಳಪು ಮತ್ತು ತುಟಿಯಲ್ಲಿ ನಗುವನ್ನು ತುಂಬಿಟ್ಟುಕೊಂಡು ಸಹೃದಯರ ಮನಸ್ಸನ್ನು ಯಾವತ್ತೂ ಕಾಡುವಂತಹದು ಎಂದು ಬೇಂದ್ರೆ ಬಣ್ಣಿಸಿದ್ದಾರೆ. ಇದು ಕೇವಲ ಶ್ರಾವಣ ಮಾಸದ ಪ್ರಕೃತಿ ವರ್ಣನೆ ಆಗಿರದೆ, ಒಬ್ಬ ತರಳನದೂ ಆಗಿರದೆ ಇವೆರಡೂ ಅಗಿ, ಕಾವ್ಯ ಮೋಡಿ ಮಾಡುವ  ಅದರ ಶ್ರೇಷ್ಟ ತಂತ್ರಗಳನ್ನೂ ವರ್ಣಿಸಿರುವುದು ಕಂಡುಬರುತ್ತದೆ. ಜೊತೆಗೆ ಓದುಗ ತನ್ನ ವಿಚಕ್ಷಣತೆಯನ್ನು ಕಳೆದುಕೊಂಡು ಅದರೊಳಗೆ ತನ್ಮಯನಾಗುವಂತೆಯೂ ಮಾಡುತ್ತದೆ.

ಅಳಲು ನಗಲು ತಡವೆ ಇಲ್ಲ
ಇದುವು ನಿನಗೆ ಆಟವೆಲ್ಲ
ಬಾರೋ ದಿವ್ಯ ಚಾರಣಾ
ತುಂಟ ಮಗುವೆ ಶ್ರಾವಣಾ

ರಸಭಾವಗಳ ಅಡೆತಡೆ ಇಲ್ಲದ ಅಭಿವ್ಯಕ್ತಿಯೇ ಕಾವ್ಯಸೃಷ್ಟಿಯ ಜೀವಂತಿಕೆಯ ಲಕ್ಷಣವಾಗಿದ್ದು, ಅದು ತನ್ನ ವಿವಿಧ ಭಂಗಿಗಳ ಆಟದಿಂದ ಆನಂದ ಉಂಟುಮಾಡುವುದೇ ಅದರ ಮೂಲ ಉದ್ದೇಶವಾಗಿದೆ ಎಂಬ ನೆಲೆಯಲ್ಲಿ ಮೇಲಿನೆರಡು ಸಾಲುಗಳು ಕಾವ್ಯದ ಜೀವಂತ ತುಡಿತದ ಲಕ್ಷಣಗಳನ್ನು ಬಣ್ಣಿಸಿದೆ. ಮುಂದಿನ ಸಾಲಿನಲ್ಲಿ 'ಚಾರಣಾ' ಕೇವಲ ಪ್ರಾಸಕ್ಕಾಗಿ ಬಳಸಲಾಗಿದೆಯೆ? ಸೃಷ್ಟಿಗೀತೆಗಳನ್ನು ಹಾಡುವವರು ಚಾರಣರು. ಆದ್ದರಿಂದ ಈ ಪದವಿಲ್ಲಿ ನಿರುದ್ದಿಶ್ಯವಲ್ಲ. ಶ್ರಾವಣವನ್ನು 'ದಿವ್ಯಚಾರಣಾ' ಎಂದು ಬೇಂದ್ರೆ ಕರೆದಿರುವುದು ಅವರಿಗೆ ಸೃಷ್ಟಿ ಸಂಕೇತವಾಗಿ ಕಂಡಿರುವುದರಿಂದ ಮಾತ್ರ. ಇಂಥ ಸೃಷ್ಟಿಶೀಲ ತುಂಟ ಮಗುವಾದ ಶ್ರಾವಣನಿಗೆ ಕರೆ ನೀಡಿದ್ದಾರೆ. 

ಕೊನೆಯದಾಗಿ, ಕವಿ ಪ್ರೀತಿ, ಮಮತೆ, ಕರುಣೆ  ಸಹಾನುಭೂತಿಗಳ ಮಡುವಾದ ಹೆಣ್ಣು ಮತ್ತು ಆಕೆಯ ತವರು ಮನೆಯ ಚಿತ್ರಬಂಧದ ಮೂಲಕ ಕಾವ್ಯ ಮತ್ತು ಸಹೃದಯರ ಸಂಬಂಧವನ್ನು ಚಿತ್ರಿಸತೊಡಗುತ್ತಾರೆ. ಇನ್ನೊಂದು ಮಟ್ಟದಲ್ಲಿ ಕಂದನ ಆಗಮನ ಮತ್ತು ಆ ಕಂದ ತನ್ನನ್ನು ಹಂಬಲಿಸಿ ಪಡೆದ ತಂದೆತಾಯಿಯರ ಮಡಿಲು ಸೇರುವ ಚಿತ್ರದೊಂದಿಗೆ ಹೋಲಿಸುತ್ತಾರೆ.

ಒಂದು ಕವಿತೆಯ ಆಸ್ವಾದನೆ, ಅದರ ಅನುಭವವನ್ನು ಬೇಂದ್ರೆ ಹೀಗೆ ಹೇಳುತ್ತಾರೆ.
ಮಧುಮಾಸಕು ಹಿರಿದದು
ಮಧುರ ಮಾಸ ಸರಿಯದು
'ಸರಿಯದು'  ಪದ 'ಸರಿ ಅದು' ಮತ್ತು 'ಸರಿಯುವುದಿಲ್ಲ' ಎಂಬ ಶ್ಲೇಷಾರ್ಥವನ್ನು ಹೊಂದಿದೆ. ಇದು ಇಲ್ಲಿನ ಭಾವ ಸಂಪತ್ತು, ಅರ್ಥ ಸಂಪತ್ತು ಹೆಚ್ಚಿಸಿದೆ.
ಮೋಡಗವಿದ ಕಣ್ಣಿನವನು
ಮುದಿಯ ತಂದೆ ಮುಗಿಲರಾಯ
ಹಾಗೂ
ಬಿಸಿಲ ಹಣ್ಣು ತಿಂದು ಹೊತ್ತು
ಹೆತ್ತ ನಿನ್ನ ಭೂಮಿತಾಯಿ

ಈ ಸೃಷ್ಟಿಶೀಲ ಶ್ರಾವಣ ಮಗು ಬಂದು 'ಕಣ್ಣು ಕೆನ್ನೆ ತೊಯ್ಸಿ'ತು 'ಎದೆಯ ಸೆರಗ ನೆನಸಿತು' ಎಂದು ವಿವರಣೆಯಿದೆ. ತಂದೆತಾಯಿ ಅಥವಾ ತವರು ತಮ್ಮಲ್ಲಿಗೆ ಮಗು ಅಥವಾ ಮಗಳು ಬರುವ ಮೂಲಕ ಸಂತುಷ್ಟರಾಗುತ್ತಾರೆ. ಹಾಗೆಯೇ ಕಾವ್ಯ ಕೂಡ ಸಹೃದಯರ ನಿಕಟ ಸಂಪರ್ಕವನ್ನು ಬಿಡದೆ ಪಡೆದು ಅವರ ಮಹತ್ವವನ್ನು ಒಪ್ಪಿಕೊಂಡು ಸಂತುಷ್ಟರನ್ನಾಗಿಸಬೇಕೆಂಬ ನಿಲುವಿದೆ.

ಹೀಗೆ ಈ ಕವಿತೆಯಲ್ಲಿ ಮೊದಲ ಹದಿನಾರು ಸಾಲುಗಳಲ್ಲಿ ಕಾವ್ಯ ಸೃಷ್ಟಿಯ ಆಕರ್ಷಕವಾದ ಮನಮೋಹಕ ಪ್ರಕ್ರಿಯೆಯ ಸೆಳೆತವನ್ನು ವಿವರಿಸಿದೆ. ನಂತರದ ಇಪ್ಪತ್ತನಾಲ್ಕು ಸಾಲುಗಳಲ್ಲಿ ಕಾವ್ಯ ವಿಲಾಸವನ್ನು ವರ್ಣಿಸಿದೆ. ಕೊನೆಯ ಹದಿನೈದು ಸಾಲುಗಳಲ್ಲಿ ಸಹೃದಯರು ಕಾವ್ಯ ಸಂಪರ್ಕಕ್ಕಾಗಿ ಕಾತರದಿಂದ ಹಂಬಲಿಸಿ ಪಡೆದು ತೃಪ್ತರಾಗುವುದನ್ನು ಚಿತ್ರಿಸಿದೆ. ಭಾರತೀಯ ಕಾವ್ಯ ಮೀಮಾಂಸೆಯ ಕವಿ ಕಾವ್ಯ ಸಹೃದಯ ಚೌಕಟ್ಟನ್ನು ಒಳಗೊಂಡಿದೆ. ಬೇಂದ್ರೆ ಕಾವ್ಯ ಸಹೃದಯ ವರ್ಗವನ್ನು ನಿರ್ಲಕ್ಷಿಸದೆ ಯಾವತ್ತೂ ಆಕರ್ಷಿಸಿತ್ತು ಎಂಬ ಅಂಶ ಈ ಹಿನ್ನೆಲೆಯಲ್ಲಿ ಮಹತ್ವದ್ದಾಗಿ ಕಾಣುತ್ತದೆ. ಬೇಂದ್ರೆ ತಾವು ನಂಬಿದ ಕವಿ-ಕಾವ್ಯ-ಸಹೃದಯ ಪರಿಕಲ್ಪನೆಯನ್ನು ಇಲ್ಲಿ ಎತ್ತಿ ಹಿಡಿದಿದ್ದಾರೆ. ಶ್ರಾವಣವನ್ನು ಕಾವ್ಯ ಕಲ್ಪನೆಗೆ ಪ್ರತೀಕವಾಗಿಸಿದ್ದಾರೆ.

ಕೊನೆಯಲ್ಲಿ-
ಬೇಂದ್ರೆ ಈ ಕವಿತೆಯ ಭಾಷಾ ಬಳಕೆಯಲ್ಲಿ ಸೃಷ್ಟಿಶೀಲತೆಯನ್ನು ಹೇಗೆ ಕಂಡುಕೊಂಡಿದ್ದಾರೆ, ಸಮಾಸ ಪದಗಳನ್ನು ಬಳಸದೆ ವ್ಯಸ್ತ ಪದಗಳನ್ನೆ ಬಳಸಿ ಬಿಚ್ಚಿಕಟ್ಟುವ ಕ್ರಮವನ್ನು ಪ್ರತಿಯೊಂದೂ ಹಂತದಲ್ಲೂ ಹೇಗೆ ಮಾಡಿದ್ದಾರೆ ಎಂದು ಈ ಟಿಪ್ಪಣಿಯ ಸಿದ್ಧತೆಯಲ್ಲಿದ್ದಾಗ ಗೆಳೆಯರಾದ ಮಲ್ಲೇಪುರಂ ಜಿ ವೆಂಕಟೇಶ್ ಅವರು ತೋರಿಸಿಕೊಟ್ಟಿದ್ದಾರೆ. ಅವರನ್ನು ಇಲ್ಲಿ ನೆನೆಯುತ್ತೇನೆ.

#  #
1990-91ರಲ್ಲಿ  ಸಂಚಯದ ಡಿವಿ ಪ್ರಹ್ಲಾದ್ ಮಲ್ಲೆಶ್ವರದ ಗಾಂಧಿ ಭವನದಲ್ಲಿ ಚನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ನಡೆಸಿದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಈ ಬರೆಹ ಪ್ರ್ಯಾಕ್ಟಿಕಲ್ ಕ್ರಿಟಿಸಿಸಂ ಮಾದರಿಯಲ್ಲಿದ್ದರೂ ವ್ಯಾಖ್ಯಾನ ರೂಪಿಯದಲ್ಲ.

2 ಕಾಮೆಂಟ್‌ಗಳು:

  1. ಈ ಕವನ ಬಾಲಕ ಕೃಷ್ಣನನ್ನು ಕುರಿತಾಗಿದೆಯಲ್ಲವೇ?

    ಪ್ರತ್ಯುತ್ತರಅಳಿಸಿ
  2. ಕಾವ್ಯ ನಿರ್ದಿಷ್ಟವಾದುದಲ್ಲ. ಅದು ಹಲವು ಕಾಲಗಳಲ್ಲಿ ಹಲವು ಓದುಗರಲ್ಲಿ ಮರುಹುಟ್ಟು ಪಡೆದುಕೊಳ್ಳುತ್ತದೆ.ಎಷ್ಟು ಜನ ಓದುಗರೋ ಅವರ ಕೈಗೆಟುಕಿದ ಅನುಭವಗಳೆಷ್ಟೋ ಅಷ್ಟು ಬಗೆಯ ಕಾವ್ಯ ಇರಲು ಸಾಧ್ಯ. ಹಾಗಾಗಿ ಬಾಲ ಕೃಷ್ಣನ ಕುರಿತದ್ದು ಎಂಬುದು ಒಂದು ಓದು ಮಾತ್ರ.

    ಪ್ರತ್ಯುತ್ತರಅಳಿಸಿ