ಶುಕ್ರವಾರ, ಜನವರಿ 25, 2013

ಎಳೆಯ ಜೀವ ಕುರಿತು

ಇಂದಿಗೆ  ಆನಂದನಿಗೆ ಇಪ್ಪತ್ತೊಂದು ತುಂಬಿ ಇಪ್ಪತ್ತೆರಡನೆಯ ವರುಷ ಆರಂಭವಾಗಿದೆ. ಈತ ಎಂಟು ತಿಂಗಳ ಹಾಲುಗೂಸು ಇದ್ದ ಕಾಲದಲ್ಲಿ ಬರೆದ ಸಾಲುಗಳು ಈಗ ನೆನಪಿಗೆ ಬಂದವು. ಅರವಿಂದ ನಾಳೆ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜ ವಂದನೆ ಸಲ್ಲಿಸುವ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾನೆ. ನನ್ನ ಈ ಮಕ್ಕಳು ತಮ್ಮ ಜೀವನದಲ್ಲಿ ಸಮಸ್ತ ಜೀವಿಗಳ ಆರೈಕೆ ಮತ್ತು ಹಾರೈಕೆಯಲ್ಲಿ ಸಾಧನೆಯ ಹಾದಿ ಹಿಡಿದು ಸಾಗಲೆಂದು ಆಶಿಸುವೆ. ಈ ಹೊತ್ತಲ್ಲಿ ಎಳೆಯ ಜೀವ ಕುರಿತ ಸಾಲುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಇವ ಯಾವೂರ ಸೀಮೆಯ ಗರುವಾ


ಇವ ಯಾವೂರ ಸೀಮೆಯ ಗರುವಾ
ಈ ಸುತ್ತು ಎಲ್ಲೂ ಕಂಡಿಲ್ಲವ್ವಾ

ಪುಟುಪುಟು ಓಟ ಯಾವ ಚಿಗರೆಯಾಟ
ಸುಕದ ಸುಸ್ತು, ಇವ ಸಿಗಲಿಲ್ಲ
ಯಾವ ಹಕ್ಕಿ ಕೂಡಿ ಲೊಳಲೊಳ ಮಾತು
ನಂಗೇನೂ ತಿಳಿಯುವಂಗಿಲ್ಲ

ಕುಹುಕುಹು ಕೂಗಲ್ಲ ಸೀಮಾವು ಸಿಹಿಯಲ್ಲ
ನೆಲ್ಲಿಕಾಯಿ ಉಪ್ಪು ಸಪ್ಪೆ
ಚುಕ್ಕಿ ಕಂಗಳಲ್ಲಿ ಕುಲುಕುಲು ನಗುತಾ
ಕುಣಿಸುವನಿವನೇನು ಬೆಪ್ಪೆ?

ನೀರಡಿಕೆ ನೀಗಿಸೊ ಮಳೆ ಗುಡುಗು ಮಿಂಚೇ
ಇವನಾವ ಸೀಮೆಯವ ಹೇಳು
ಅರಸಿ ಅಂಡಲೆವ ಹಾಲು ಬೆಳದಿಂಗಳೇ
ಇವನ ತಡಕುವೆ ಯಾಕೇಳು?

ವಿಲಿವಿಲಿ ನೋವಲ್ಲಿ ಪತರುಗುಟ್ಟಿ ಜೀವ
ಕಂಗೆಟ್ಟು ಕುರುಡಾಗಿತ್ತವ್ವ
ಯಾವ ಹರಕೆ ಒಪ್ಪಿ ಈ ಕಂದ ಹುಟ್ಟಿದನೊ
ನರಕ ನುರ ನುರಕಿದನವ್ವ

0000000000000000


ಏನಂತ ಹೆಸರಿಟ್ಟು ಕೂಗಲವ್ವ?

ಹಾದೀಲಿ ಬಸ್ಸಲ್ಲಿ ಕಂಡಂಥ ಜನರನ್ನ
ಕಂಡಂಗೆ ನಗುತಾನೆ ನನ್ನ ಕಂದ
ತಮ್ಮದೆ ಕೂಸಂತ ಬಿಕ್ಕೊಂಡ ಮಕದಲ್ಲಿ
ಎದೆ ಬಿರಿದು ನಗುತಾರೆ ಇನ್ನು ಚೆಂದ!

ಮುದ್ದು ಮುದ್ದು ಮಗು ಮುದ್ದು ಮುದ್ದು ನಗು
ಕರೆದರೆ ಕರೆದಂಗೆ ಹೋಗವೊಲ್ಲ
ದಿಟ್ಟಿ ನೋಟದಲ್ಲಿ ಮಲ್ಲಿಗೆ ನಗೆ ಚೆಲ್ಲಿ
ಮೊದ್ದುಮಣಿ ನಿಮ್ಮಂತೆ ಅಂತಾನಲ್ಲ

ಚೂಟಿ ಕಂಗಳ ಪುಟ್ಟ ಚೋರ ಹೆಸರೇನು
ಅಂತಾರೆ ಕಂಡ ಕಂಡ ಜನವೆಲ್ಲ
ಅಪ್ಪ ಅವ್ವಂದಿರು ಜೀವದ ಬೊಂಬೆಯೊ
ಹಗಲು ರಾತ್ರಿ ಆಡಿಸುವನಲ್ಲ

ಹೊತ್ತು ಹೊತ್ತಿಗೆ ತುತ್ತು ನಿದ್ದುರೆಯಾಟ
ಮಾಡುತಾನೆ ಚುಕ್ಕಿ ಮಾಟದಂಗೆ
ಮೈಮ್ಯಾಲೆ ಕುಣಿತಾನೆ ಜುಟ್ಟು ಹಿಡಿದೆಳಿತಾನೆ
ಅಂಗಳ ಪೂರ ಬಯಲಾಟದಂಗೆ

ಕೇರಿ ದಾರಿಗೆಲ್ಲ ಇವನೇ ಫಟೇಲ
ಮಣ್ಣಿನ ಬೊಂಬೆ ಅಲ್ಲವೆ ಹೀನ?
ಕರೆದರೆ ಬರಲೊಲ್ಲ ಹಿಡಿದರೆ ಸಿಗಲೊಲ್ಲ
ನೀರಾಟದಲ್ಲೇ  ಪಂಚಪ್ರಾಣ

ಟಾಟಾ ಅಂದರೆ ಬಾ ಅಂತ ಕರಿತಾನೆ
ಈ ಬಾಳ ಬಿಟ್ಟೆಲ್ಲಿ ಹೋಗಲವ್ವ
ನಾ ಬಿಟ್ಟು ಇರಲಾರೆ ಬಿಡದೆ ಹೋಗಲಾರೆ
ಏನಂತ ಹೆಸರಿಟ್ಟು ಕೂಗಲವ್ವ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ